
ಸಾಂದರ್ಭಿಕ ಚಿತ್ರ
ಕೃಪೆ: ಎಐ
ಬೆಂಗಳೂರು: ಗುಜರಾತ್ ರಾಜ್ಯದ ವಾಹನಗಳನ್ನು ಪರಿಶೀಲಿಸದೇ ನಿಯಮ ಬಾಹಿರವಾಗಿ ವಾಹನ ಸಾಮರ್ಥ್ಯ ಪ್ರಮಾಣಪತ್ರ (ಎಫ್‌ಸಿ) ನೀಡಿದ್ದ ಹಿರಿಯ ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್ ಅವರನ್ನು ಅಮಾನತು ಮಾಡಲಾಗಿದೆ.
ಗುಜರಾತ್ ರಾಜ್ಯದ ಸಾರಿಗೆ ಕಚೇರಿಯ ಇ-ಡಿಟೆಕ್ಷನ್ ತಂಡವು ವಾಹನ ಇ-ಡಿಟೆಕ್ಷನ್ ಪೋರ್ಟಲ್‌ನಲ್ಲಿ ಲಭ್ಯವಿರುವ ಡೇಟಾವನ್ನು ಪರಿಶೀಲಿಸಿದಾಗ, 41 ವಾಹನಗಳನ್ನು ಕರ್ನಾಟಕ ರಾಜ್ಯದ ಆರ್‌ಟಿಒ ಕಚೇರಿಗಳಲ್ಲಿ ತಪಾಸಣೆ ಮಾಡಿ ನಮೂನೆ-38–ಎ (ಸಾಮರ್ಥ್ಯ ಪ್ರಮಾಣಪತ್ರ) ನೀಡಿರುವುದು ಕಂಡು ಬಂದಿತ್ತು. ಆದರೆ, ಅದೇ ದಿನ ಆ ವಾಹನಗಳು ಗುಜರಾತ್‌ನಲ್ಲಿರುವ ಟೋಲ್ ಪ್ಲಾಜಾಗಳ ಮೂಲಕ ಹಾದು ಹೋಗಿದ್ದವು. ಎಫ್‌ಸಿಯನ್ನು ನಿಸಾರ್ ಅಹಮದ್ ಅನುಮೋದಿಸಿರುವುದಾಗಿ ಗುಜರಾತ್‌ನ ಗಾಂಧಿನಗರ ಸಾರಿಗೆ ಆಯುಕ್ತರ ಕಚೇರಿಯ ಉಪ ನಿರ್ದೇಶಕ ತಿಳಿಸಿದ್ದರು.
ಈ ಮಾಹಿತಿ ಪಡೆದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕಾನೂನು ಕ್ರಮ ಕೈಗೊಳ್ಳುವಂತೆ ಸಾರಿಗೆ ಆಯುಕ್ತ ಎ.ಎಂ.ಯೋಗೇಶ್ ಅವರಿಗೆ ಸೂಚನೆ ನೀಡಿದ್ದರು. ಈ ಬಗ್ಗೆ ವರದಿ ನೀಡುವಂತೆ ಬೆಂಗಳೂರು ನಗರ ವಿಭಾಗದ ಜಂಟಿ ಸಾರಿಗೆ ಆಯುಕ್ತರಿಗೆ ಯೋಗೇಶ್ ಸೂಚಿಸಿದ್ದರು.
ಕೇಂದ್ರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಹಿರಿಯ ಮೋಟಾರು ವಾಹನ ನಿರೀಕ್ಷಕರಾಗಿರುವ ನಿಸಾರ್ ಅಹಮದ್ ಅರ್ಹತಾ ಪತ್ರ (ಸಾಮರ್ಥ್ಯ ಪ್ರಮಾಣಪತ್ರ) ನವೀಕರಣ ಮಾಡಿರುವುದು ಇಲಾಖೆ ವಾಹನ್ 4.0 ತಂತ್ರಾಂಶದಿಂದ ದೃಢಪಟ್ಟಿದೆ. 41 ವಾಹನಗಳು ಅದೇ ದಿನ ಗುಜರಾತ್‌ನಲ್ಲಿದ್ದುದೂ ಕಂಡುಬಂದಿದೆ. ವಾಹನಗಳನ್ನು ಭೌತಿಕವಾಗಿ ಪರಿಶೀಲನೆ ಮಾಡದೇ ನಿಯಮಬಾಹಿರವಾಗಿ ಅನುಮೋದನೆ ಮಾಡುವ ಮೂಲಕ ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಅದರಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.