ADVERTISEMENT

ಬೆಂಗಳೂರು: ಪುರುಷರ ವೇಷಧರಿಸಿ ಮನೆ ಕಳ್ಳತನ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 16:08 IST
Last Updated 16 ಜನವರಿ 2026, 16:08 IST
ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾದ ಆರೋಪಿಗಳ ದೃಶ್ಯ   
ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾದ ಆರೋಪಿಗಳ ದೃಶ್ಯ      

ಬೆಂಗಳೂರು: ಪುರುಷರ ರೀತಿಯಲ್ಲಿ ಬಟ್ಟೆ ಧರಿಸಿಕೊಂಡು ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿರುವ ಸಂಪಿಗೆಹಳ್ಳಿ ಠಾಣೆಯ ಪೊಲೀಸರು, ಮಹಿಳೆ ಹಾಗೂ ಇಬ್ಬರು ಬಾಲಕಿಯರನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. 

ಅಮರಜ್ಯೋತಿ ಲೇಔಟ್‌ ಎರಡನೇ ಕ್ರಾಸ್‌ನ ನಿವಾಸಿ ರೇಷ್ಮಾ (45) ಹಾಗೂ ಇಬ್ಬರು ಬಾಲಕಿಯರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬಂಧಿತರಿಂದ 30 ಗ್ರಾಂ ಚಿನ್ನಾಭರಣ, 80 ಗ್ರಾಂ ಬೆಳ್ಳಿಯ ಸಾಮಗ್ರಿ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಒಂದು ಬೈಕ್‌ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಯಲಹಂಕದ ಅಗ್ರಹಾರ ಲೇಔಟ್‌ನ 4ನೇ ಮುಖ್ಯರಸ್ತೆಯ 19ನೇ ಕ್ರಾಸ್‌ ನಿವಾಸಿ ಸಂಗಮೇಶ್ವರ ಅವರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಸಂಗಮೇಶ್ವರ ಅವರು ಜ.13ರಂದು ಮಕ್ಕಳನ್ನು ಶಾಲೆಗೆ ಕಳುಹಿಸಿ, ಆಟೊ ಓಡಿಸಲು ಹೋಗಿದ್ದರು. ಅವರ ಪತ್ನಿ ಗಾರ್ಮೆಂಟ್ಸ್‌ ಕೆಲಸಕ್ಕೆ ತೆರಳಿದ್ದರು. ಅಂದೇ ಸಂಜೆ ಮನೆಗೆ ವಾಪಸ್ ಬಂದು ನೋಡಿದಾಗ ಮನೆಯ ಬಾಗಿಲು ಒಡೆದು ಕಳ್ಳತನ ಮಾಡಿರುವುದು ಗೊತ್ತಾಗಿತ್ತು. ಮನೆಯಲ್ಲಿದ್ದ 30 ಗ್ರಾಂ ಚಿನ್ನ, 60 ಗ್ರಾಂ ಬೆಳ್ಳಿಯ ಸಾಮಗ್ರಿ ಹಾಗೂ ₹15 ಸಾವಿರ ನಗದು ಕಳ್ಳತನ ಮಾಡಲಾಗಿತ್ತು. 

ಕೃತ್ಯ ಎಸಗಿದವರ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಅಮರಜ್ಯೋತಿ ಲೇಔಟ್‌ನಲ್ಲಿ ರೇಷ್ಮಾ ಹಾಗೂ ಇಬ್ಬರು ಬಾಲಕಿಯರನ್ನು ವಶಕ್ಕೆ ಪಡೆದುಕೊಳ್ಳಲಾಯಿತು ಎಂದು ಪೊಲೀಸರು ಹೇಳಿದರು.

ಠಾಣೆಗೆ ಕರೆತಂದಾಗ ಅಸಲಿ ಬಣ್ಣ ಬಯಲಿಗೆ: ಕೃತ್ಯ ನಡೆದ ಮನೆಯ ಅಕ್ಕಪಕ್ಕದಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲನೆ ನಡೆಸಲಾಯಿತು. ದೃಶ್ಯದಲ್ಲಿ ಆರೋಪಿಗಳ ಚಲನವಲನಗಳು ಸೆರೆಯಾಗಿದ್ದವು. ಅದನ್ನು ಆಧರಿಸಿ ತನಿಖೆ ನಡೆಸಿದಾಗ ಆರೋಪಿಗಳು, ಪುರುಷರ ಮಾದರಿಯಲ್ಲಿ ಪ್ಯಾಂಟ್‌, ಅಂಗಿ ಧರಿಸಿ, ತಲೆಗೆ ಟೋಪಿ ಹಾಕಿಕೊಂಡು ಕಳ್ಳತನ ಮಾಡಿರುವುದು ಗೊತ್ತಾಯಿತು ಎಂದು ಪೊಲೀಸರು ಹೇಳಿದರು.

ಆರೋಪಿಗಳು ಬಳಸಿದ್ದ ಸ್ಕೂಟರ್‌ನ ನಂಬರ್ ಪ್ಲೇಟ್‌ ಸಿ.ಸಿ.ಟಿ.ವಿ ಕ್ಯಾಮೆರಾ ಸೆರೆ ಆಗಿತ್ತು. ಸ್ಕೂಟರ್ ನೋಂದಣಿ ಸಂಖ್ಯೆ ಪರಿಶೀಲನೆ ನಡೆಸಿದಾಗ ನಕಲಿ ನಂಬರ್ ಪ್ಲೇಟ್‌ ಎಂಬುದು ಪತ್ತೆ ಆಯಿತು ಎಂದು ಪೊಲೀಸರು ಹೇಳಿದರು.

ರೇಷ್ಮಾ ಅವರ ಸೂಚನೆಯ ಮೇರೆಗೆ ಇಬ್ಬರು ಬಾಲಕಿಯರು ವೇಷಭೂಷಣ ಬದಲಾವಣೆ ಮಾಡಿಕೊಂಡು ಕೃತ್ಯ ಎಸಗುತ್ತಿದ್ದರು ಎಂದು ಪೊಲೀಸರು ಹೇಳಿದರು.

ಸ್ಕೂಟರ್‌ನಲ್ಲಿ ಆರೋಪಿಗಳು ತೆರಳುತ್ತಿದ್ದ ದೃಶ್ಯವು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ  
ರೇಷ್ಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.