ADVERTISEMENT

ಬೆಂಗಳೂರು: ಚರಂಡಿ, ಕೆಸರಿನಲ್ಲಿ ಸಿಲುಕಿದ ಶಾಲಾ ಬಸ್‌

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 18:57 IST
Last Updated 19 ಸೆಪ್ಟೆಂಬರ್ 2025, 18:57 IST
ರಸ್ತೆಯಲ್ಲಿ ಬಿದ್ದಿರುವ ಗುಂಡಿಯಲ್ಲಿ ಸಿಲುಕಿದ ಶಾಲಾ ಬಸ್‌ 
ರಸ್ತೆಯಲ್ಲಿ ಬಿದ್ದಿರುವ ಗುಂಡಿಯಲ್ಲಿ ಸಿಲುಕಿದ ಶಾಲಾ ಬಸ್‌    

ಬೆಂಗಳೂರು: ನಗರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಂದಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಅದರಲ್ಲೂ ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ಬಸ್‌ ಚಾಲಕರು ತೀವ್ರ ಸಮಸ್ಯೆಗೆ ಒಳಗಾಗುತ್ತಿದ್ದಾರೆ.      

ಶುಕ್ರವಾರ ಬೆಳಿಗ್ಗೆ ಹಾಗೂ ಮಧ್ಯಾಹ್ನ ಬೇರೆ ಬೇರೆ ಶಾಲೆಯ ಎರಡು ಬಸ್‌ಗಳು ಗುಂಡಿ ಹಾಗೂ ಕೆಸರಿನಲ್ಲಿ ಸಿಲುಕಿಕೊಂಡಿದ್ದವು. ಬಳಗೆರೆ ಪಣತ್ತೂರು ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಕ್ರೈಸ್ಟ್ ಪಬ್ಲಿಕ್ ಶಾಲೆಯ ಬಸ್‌ ರಸ್ತೆಯಲ್ಲಿ ಸಾಗುವಾಗ ಚಕ್ರಗಳು ಚರಂಡಿಯಲ್ಲಿ ಸಿಲುಕಿಕೊಂಡಿದ್ದವು. ಬಸ್ ಮೇಲಕ್ಕೆ ಎತ್ತಲು ಸಾಹಸ ಪಡಬೇಕಾಯಿತು. ನ್ಯೂ ಹೊರೈಜನ್ ಗುರುಕುಲ ಶಾಲೆಗೆ ಸೇರಿದ ಇನ್ನೊಂದು ಬಸ್ ಕೆಸರಿನಲ್ಲಿ ಸಿಲುಕಿಕೊಂಡಿತ್ತು. ಚಾಲಕ ಪರದಾಡಿದರು. ಸ್ಥಳಕ್ಕೆ ಜೆಸಿಬಿ ಯಂತ್ರ ತರಿಸಿ ಬಸ್‌ ಮೇಲಕ್ಕೆ ಎತ್ತಲಾಯಿತು. ಕಳೆದ ವಾರವೂ ಇದೇ ಶಾಲೆಯ ಬಸ್‌, ರಸ್ತೆಯಲ್ಲಿ ಗುಂಡಿಯಿಂದಾಗಿ ವಾಲಿತ್ತು.

ADVERTISEMENT

ಎರಡು ಬಸ್‌ಗಳೂ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದವು. ಆ ಸಂದರ್ಭದಲ್ಲೇ ಘಟನೆ ನಡೆದಿದೆ. ಗುಂಡಿಗಳಿಂದ ಶಾಲಾ ಬಸ್‌ಗಳು ಸುಗಮವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ ಎಂದು ಪೋಷಕರು ಹೇಳಿದರು.

‘ಕಳೆದ ವಾರದ ಘಟನೆಯ ಬಳಿಕ ಚರಂಡಿಗೆ ಪೈಪ್‌ ಅಳವಡಿಸಲಾಗಿದೆ. ಆದಷ್ಟು ಬೇಗ ರಸ್ತೆ ದುರಸ್ತಿ ಕೆಲಸವನ್ನು ಪೂರ್ಣಗೊಳಿಸಬೇಕು’ ಎಂದು ಪೋಷಕ ಸುನಿಲ್‌ ಕುಮಾರ್ ವುಪ್ಪುಲ ಅವರು ಆಗ್ರಹಿಸಿದರು.

‘ಈ ರಸ್ತೆಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೇ ಭಯವಾಗುತ್ತಿದೆ. ಕೇವಲ 2.5 ಕಿ.ಮೀ ಸಂಚರಿಸಲು ಎರಡೂವರೆ ಗಂಟೆ ಬೇಕಾಗುತ್ತಿದೆ’ ಎಂದು ನೀಲಿಮಾ ಕುಮಾರ ಆತಂಕ ವ್ಯಕ್ತಪಡಿಸಿದರು.

ಈ ಭಾಗದಲ್ಲಿ ಬಿದ್ದಿರುವ ಗುಂಡಿಗಳು, ಅಪಾಯಕ್ಕೆ ಬಾಯ್ತೆರೆದಿರುವ ಚರಂಡಿಗಳಿಂದಾಗಿ ಸಮಸ್ಯೆ ಗಂಭೀರವಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.