
ಬೆಂಗಳೂರು: ನಗರದ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಒಂದಾಗಿರುವ ಏಳು ಸುತ್ತಿನ ಕೋಟೆ ಸಪ್ತಮಾತೃಕಾ ಸಹಿತ ಆದಿಶಕ್ತಿ ದೇವಾಲಯ ಜೀರ್ಣೋದ್ಧಾರ ಕಾರ್ಯ ಮುಗಿದಿದ್ದು, ಜ.21ರಿಂದ ಉದ್ಘಾಟನಾ– ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಸುಮಾರು 800 ವರ್ಷಗಳ ಇತಿಹಾಸವಿರುವ ಈ ಏಳು ಸುತ್ತಿನ ಕೋಟೆಯ ದೇವಾಲಯದ ಆವರಣದಲ್ಲಿ ಮಹಾಗಣಪತಿ, ಸಪ್ತಮಾತೃಕೆಯರು, ಕಾಶಿ ವಿಶ್ವನಾಥ ದಂಪತಿ ಸಮೇತ ಪೋತುರಾಜಸ್ವಾಮಿ, ವಲ್ಲಿ ದೇವಸೇನಾ ಸಮೇತ ಕಾರ್ತೀಕೇಯ, ಆಂಜನೇಯ, ಆದಿ ದೇವತೆಗಳು, ಅಷ್ಟ ದಿಕ್ಪಾಲಕರೊಂದಿಗೆ ನವಗ್ರಹ, ಶನಿ ಮಹಾತ್ಮ ದೇವರುಗಳಿದ್ದು, ಸೂರ್ಯ ಭಗವಾನ್ ಮತ್ತು ಕಾಲಭೈರವ ದೇವರ ಮೂರ್ತಿಯನ್ನು ಹೊಸದಾಗಿ ಸ್ಥಾಪಿಸಲಾಗಿದೆ.
ಐತಿಹಾಸಿಕ, ವಿಶ್ವವಿಖ್ಯಾತ ಬೆಂಗಳೂರು ಕರಗದ ಸಂದರ್ಭದಲ್ಲಿ ಹಸಿ ಕರಗ ಈ ದೇವಸ್ಥಾನದಲ್ಲಿ ಮೊದಲು ಪೂಜೆ ಸಲ್ಲಿಸುತ್ತದೆ. ಇಂತಹ ಇತಿಹಾಸವಿರುವ ಆದಿಶಕ್ತಿ ದೇವಾಲಯ ಹಲವು ವರ್ಷ ಶಿಥಿಲಾವಸ್ಥೆಯಲ್ಲಿದ್ದು, ಭಕ್ತರಿಗೆ ತೊಂದರೆಯಾಗುತ್ತಿತ್ತು. ದೇವಸ್ಥಾನದ ಆಡಳಿತ ಮಂಡಳಿಯವರು ಜೀರ್ಣೋದ್ಧಾರಕ್ಕಾಗಿ ಜಿಬಿಎ–ನಗರ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದೊಂದಿಗೆ ಸಮಾಲೋಚನೆ ನಡೆಸಿದರು. ಸಂಘದ ಅಧ್ಯಕ್ಷ ಎ. ಅಮೃತ್ ರಾಜ್ ಅವರು ಅಧಿಕಾರಿ– ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿ, ಎಲ್ಲ ಸಿಬ್ಬಂದಿಯೂ ತಲಾ ಒಂದು ಸಾವಿರವನ್ನು ದೇಣಿಗೆಯಾಗಿ ನೀಡಲು ಒಪ್ಪಿಸಿದರು. ಆಗಿನ ಬಿಬಿಎಂಪಿ ಮುಖ್ಯ ಆಯುಕ್ತರು ಇದಕ್ಕೆ ಸಮ್ಮತಿ ನೀಡಿ, ₹1.60 ಕೋಟಿಯನ್ನು ದೇವಸ್ಥಾನದ ನೌಕರರ ವರ್ಗದಿಂದ ದೇಣಿಗೆಯಾಗಿ ನೀಡಿದರು. ಇದರ ಜೊತೆಗೆ ಸಂಘದ ವತಿಯಿಂದ ₹20 ಲಕ್ಷ ದೇಣಿಯನ್ನೂ ನೀಡಿ, ನವೀಕರಣಕ್ಕೆ ಕೈಜೋಡಿಸಿದರು.
ನೌಕರರ ಸಂಘದ ಸಹಾಯ, ಬೆಂಬಲದಿಂದ ಜೀರ್ಣೋದ್ಧಾರವಾಗಿರುವ ಏಳು ಸುತ್ತಿನ ಕೋಟೆ ಸಪ್ತಮಾತೃಕಾ ಸಹಿತ ಆದಿಶಕ್ತಿ ದೇವಾಲಯದ ಉದ್ಘಾಟನೆ ಹಾಗೂ ದೇವತಾ ಪೂಜಾ ಕಾರ್ಯ ಜನವರಿ 21ರಿಂದ 23ರವರೆಗೆ ನಡೆಯಲಿದೆ. ಆಗಮ ಶಾಸ್ತ್ರಜ್ಞ ಭಾನು ಪ್ರಕಾಶ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿವೆ. ಧರ್ಮರಾಯಸ್ವಾಮಿ ಮತ್ತು ದ್ರೌಪದಮ್ಮ ದೇವಾಲಯದ ಕರಗದ ಪೂಜಾರಿ ವೆಂಕಟಸ್ವಾಮಪ್ಪ ಮತ್ತು ದುರ್ಗಪೂಜಾರಿ ಶ್ರೀನಿವಾಸ್, ವಿಜಯಕುಮಾರ್ ದೇವಸ್ಥಾನದ ಉಸ್ತುವಾರಿ ವಹಿಸಿ, ದೇವತಾ ಕಾರ್ಯಗಳನ್ನು ನೆರವೇರಿಸುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ಏಳು ಸುತ್ತಿನ ಕೋಟೆ ಸಪ್ತಮಾತೃಕಾ ಸಹಿತ ಆದಿಶಕ್ತಿ ದೇವಾಲಯದ ದೇವತಾ ಕಾರ್ಯಕ್ಕೆ ತುಮಕೂರು ಜಿಲ್ಲೆಯ ತಿಪಟೂರಿನ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠ ಟ್ರಸ್ಟ್‌ನ ಸೋಮೇಕಟ್ಟೆ ಕಾಡಸಿದ್ದೇಶ್ವರ ಮಠ ಹಾಗೂ ಹಾವೇರಿಯ ರಾಣೆಬೆನ್ನೂರಿನ ಐರಣಿ ಹೊಳೆಮಠದ ದತ್ತಾತ್ರೇಯ ಅವಧೂತ ಗುರುಪೀಠದಿಂದ ಎರಡು ಆನೆಗಳನ್ನು ಕರೆಸಲಾಗುತ್ತದೆ ಎಂದು ಜಿಬಿಎ–ನಗರ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್ ತಿಳಿಸಿದರು. ಆನೆಗಳನ್ನು ದೇವತಾ ಕಾರ್ಯಕ್ಕೆ ಕರೆತರಲು ಬೆಂಗಳೂರು ನಗರದ ಕೇಂದ್ರ ವಿಭಾಗದ ಡಿಸಿಪಿ ಅವರಿಂದ ಅನುಮತಿ ಪಡೆಯಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.