ADVERTISEMENT

ಜನಸ್ಪಂದನ | ಸ್ಮಾರ್ಟ್‌ ಆಗಿಯೇಬಿಡುವ ತವಕದಲ್ಲಿ ಶಿವಾಜಿನಗರ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 4:34 IST
Last Updated 15 ಜುಲೈ 2022, 4:34 IST
   

ಬೆಂಗಳೂರು: ‌ಜನದಟ್ಟಣೆ ನಡುವೆ ಸದಾ ಗಿಜಿಗುಡುವ ಶಿವಾಜಿನಗರ ಈಗ ಸ್ಮಾರ್ಟ್‌ ಆಗುವ ತವಕದಲ್ಲಿದೆ. ಒಂದೆಡೆ ಸ್ಮಾರ್ಟ್‌ ಸಿಟಿ ಯೋಜನೆ, ಮತ್ತೊಂದೆಡೆ ಮೊಟ್ರೊ ರೈಲು ನಿಲ್ದಾಣ ಕಾಮಗಾರಿಗಳ ನಡುವೆ ಶಿವಾಜಿನಗರದಲ್ಲಿ ಸಂಚಾರವೇ ದುಸ್ತರವಾಗಿದೆ.

ವಿಧಾನಸೌಧದ ಕಡೆಯಿಂದ ಹೊರಟರೆ, ಬಾಳೆಕುಂದ್ರಿ ವೃತ್ತದಿಂದ ಶಿವಾಜಿನಗರಕ್ಕೆ ಹೋಗುವ ಮಾರ್ಗ ಈಗ ಬಂದ್ ಆಗಿದೆ. ಮೆಟ್ರೊ ರೈಲು ನಿಲ್ದಾಣದ ಕಾಮಗಾರಿ ನಡೆಯುತ್ತಿರುವುದರಿಂದ ಈ ಮಾರ್ಗದಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್‌ಫೆಂಟ್ರಿ ರಸ್ತೆ ಮೂಲಕವೇ ಸಾಗಿ ಶಿವಾಜಿನಗರ ತಲುಪ ಬೇಕಾದ ಅನಿ ವಾರ್ಯ ಇದೆ. ನಿಲ್ದಾಣದ ಕಾಮಗಾರಿಯ ದೂಳು ಬಸ್ ನಿಲ್ದಾಣದ ಎದುರಿನ ರಸ್ತೆಯನ್ನೇ ಆವರಿಸಿಕೊಂಡಿದೆ. ಈ ರಸ್ತೆಯಲ್ಲಿನ ಅಂಗಡಿಗಳಲ್ಲಿ ವ್ಯಾಪಾರ–ವಹಿವಾಟು ಕುಸಿದಿದೆ.

ಇನ್ನು ರಸೆಲ್ ಮಾರುಕಟ್ಟೆ ಸುತ್ತ ಮುತ್ತಲ ಪ್ರದೇಶದಲ್ಲಿ ಎಲ್ಲೆಡೆ ಸ್ಮಾರ್ಟ್‌ಸಿಟಿ ಕಾಮಗಾರಿ ನಡೆಯುತ್ತಿದೆ. ಮಾರುಕಟ್ಟೆ ಎದುರಿಗಿದ್ದ ವಾಹನ ನಿಲುಗಡೆ ಸ್ಥಳವನ್ನು ಸುಂದರ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಜನ ಕುಳಿತು ವಿಶ್ರಾಂತಿ ಪಡೆಯುವ ಪ್ಲಾಜಾ ನಿರ್ಮಾಣವಾಗುತ್ತಿದೆ. ಎಚ್‌ಕೆಪಿ ರಸ್ತೆಯಲ್ಲಿ ವೈಟ್‌ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ರಸೆಲ್ ಮಾರುಕಟ್ಟೆ ಸಂಪರ್ಕಿಸುವ ಪ್ರಮುಖ ರಸ್ತೆಗಳೇ ಇಲ್ಲದಂತಾಗಿವೆ. ಮಾರುಕಟ್ಟೆಗೆ ಸರಕು ಹೊತ್ತು ಬರುವ ವಾಹನಗಳ ತಿಣುಕಾಡುವ ಸ್ಥಿತಿ ಇದೆ. ‘ಸ್ಮಾರ್ಟ್‌ ಸಿಟಿ ಕಾಮಗಾರಿ ನಡೆಯುತ್ತಿರುವುದರಿಂದ ತೊಂದರೆ ಆಗಿದೆ. ತ್ವರಿತಗತಿಯಲ್ಲಿ ಕಾಮ ಗಾರಿ ನಡೆಯುತ್ತಿದ್ದು, ಪೂರ್ಣಗೊಳ್ಳುವ ತನಕ ಅಡಚಣೆ ಸಹಿಸಿಕೊಳ್ಳಬೇಕಿದೆ’ ಎನ್ನುತ್ತಾರೆ ಸ್ಥಳೀಯರು.

ADVERTISEMENT

ಒಂದೂವರೆ ತಿಂಗಳಲ್ಲಿ ಕಾಮಗಾರಿ ಪೂರ್ಣ

ಮಳೆ ಬಂದರೆ ರಸೆಲ್ ಮಾರುಕಟ್ಟೆ ಮುಂಭಾಗ ನೀರು ತುಂಬಿ ಹೋಗುತ್ತಿತ್ತು. ರಾಜಕಾಲುವೆ ಮೇಲಿನ ಸೇತುವೆ ಅವೈಜ್ಞಾನಿಕವಾಗಿ ನಿರ್ಮಿಸಿದ್ದರಿಂದ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿತ್ತು. 50–60 ವರ್ಷಗಳಷ್ಟು ಹಳೆಯ ಪೈಪ್‌ಲೈನ್‌ಗಳನ್ನು ಬದಲಾಯಿಸಬೇಕಾಯಿತು. ಶೇ 90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಒಂದೂವರೆ ತಿಂಗಳಲ್ಲಿ ಸುಂದರ ತಾಣವಾಗಲಿದೆ.

ರಿಜ್ವಾನ್ ಅರ್ಷದ್

ಶಿವಾಜಿನಗರ ಶಾಸಕ

ಶಿವಾಜಿನಗರ: ‘ಜನಸ್ಪಂದನ’ ನಾಳೆ

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಜನರ ಅಹವಾಲು ಆಲಿಸುವ ಸಲುವಾಗಿ ‘ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಸಮೂಹವು ಶನಿವಾರ (ಜುಲೈ 16) ವಸಂತ ನಗರದ ತಿಮ್ಮಯ್ಯ ರಸ್ತೆಯ ಕಾವೇರಪ್ಪ ಬಡಾವಣೆಯ ಬಂಜಾರ ಭವನದಲ್ಲಿ ‘ಜನಸ್ಪಂದನ’ ಕಾರ್ಯಕ್ರಮ ಏರ್ಪಡಿಸಿದೆ.

ಈ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಹಾಗೂ ಬಿಬಿಎಂಪಿ, ಜಲಮಂಡಳಿ, ಬಿಡಿಎ, ಬೆಸ್ಕಾಂ, ಪೊಲೀಸ್‌ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರ ಅಹವಾಲು ಆಲಿಸಲಿದ್ದಾರೆ. ಆಸಕ್ತರು ಬೆಳಿಗ್ಗೆ 9ರಿಂದ ಸ್ಥಳದಲ್ಲೇ ಹೆಸರು ನೋಂದಾಯಿಸಬಹುದು. ಮೊದಲು ನೋಂದಣಿ ಮಾಡಿಸಿದವರಿಗೆ ಆದ್ಯತೆ. ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.