ADVERTISEMENT

ಶಿವಾನಂದ ವೃತ್ತ ಸ್ಟೀಲ್‌ ಮೇಲ್ಸೇತುವೆ ಕಾಮಗಾರಿ ಪುನರಾರಂಭ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 21:03 IST
Last Updated 1 ಜುಲೈ 2022, 21:03 IST
   

ಬೆಂಗಳೂರು: ಶಿವಾನಂದ ವೃತ್ತದಲ್ಲಿ ಸ್ಥಗಿತಗೊಂಡಿದ್ದ ಸ್ಟೀಲ್‌ ಮೇಲ್ಸೇತುವೆ ಕಾಮಗಾರಿ 10 ತಿಂಗಳ ನಂತರ ಪ್ರಾರಂಭವಾಗುವ ಲಕ್ಷಣಗಳಿವೆ.

ಮೇಲುರಸ್ತೆ ಉದ್ದವನ್ನು ಕಡಿತಗೊಳಿಸಿದ್ದ ಬಿಬಿಎಂಪಿಯ ಮಾರ್ಪಡಿಸಿದ ವಿನ್ಯಾಸಕ್ಕೆ ಭಾರತೀಯ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ (ಐಐಎಸ್‌ಸಿ) ತಜ್ಞರು ಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್‌ನಿಂದ ಕಾಮಗಾರಿ ಮುಂದುವರಿಸಲು ಬಿಬಿಎಂಪಿಗೆ ಸೂಚನೆ ಲಭಿಸಿದೆ.

ಮೇಲ್ಸೇತುವೆ ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆಗೆ ಒಪ್ಪದ ಆಸ್ತಿ ಮಾಲೀಕರು, ಬಿಬಿಎಂಪಿಯ ಪರಿಹಾರಕ್ಕೆ ಸಮ್ಮತಿಸಿರಲಿಲ್ಲ. ಹೀಗಾಗಿ, ಅವುಗಳನ್ನು ಹೊರತುಪಡಿಸಿ ಮೇಲ್ಸೇತುವೆ ಉದ್ದವನ್ನು ಕಡಿತಗೊಳಿಸಿ ಕಾಮಗಾರಿ ಮುಗಿಸಲು ಬಿಬಿಎಂಪಿ ಎಂಜಿನಿಯರ್‌ಗಳು ವಿನ್ಯಾಸವನ್ನು ಬದಲಿಸಿದ್ದರು. ಅದು ಹೈಕೋರ್ಟ್‌ ಮೆಟ್ಟಿಲೇರಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು.

ADVERTISEMENT

‘ಮಾರ್ಪಡಿಸಿದ ವಿನ್ಯಾಸ ಇಂಡಿಯನ್‌ ರೋಡ್ಸ್‌ ಕಾಂಗ್ರೆಸ್‌ (ಐಆರ್‌ಎಸ್‌) ನಿಯಮಗಳಂತೆಯೇ ಇತ್ತು. ಐಐಎಸ್‌ಸಿ ತಜ್ಞರೂ ಸಮ್ಮತಿಸಿದ್ದಾರೆ. ಹೀಗಾಗಿ ಈ ಮೇಲ್ಸೇತುವೆ ಕಾಮಗಾರಿಯನ್ನು ಇನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸಬಹುದಾಗಿದೆ’ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದರು.

ಸ್ಟೀಲ್‌ ಮೇಲ್ಸೇತುವೆ ಕಾಮಗಾರಿ 2017ರ ಅಕ್ಟೋಬರ್‌ನಲ್ಲಿ ಆರಂಭವಾಗಿತ್ತು. ಮೊದಲಿನ ಯೋಜನೆಯಂತೆ ಮೂರು ವರ್ಷಗಳ ಹಿಂದೆಯೇ ಪೂರ್ಣಗೊಳ್ಳಬೇಕಿತ್ತು.

ಮೇಲ್ಸೇತುವೆ ನಿರ್ಮಾಣದಿಂದ ಸಾಕಷ್ಟು ತೊಂದರೆ ಉಂಟಾಗಿದ್ದು, ಪಾದಚಾರಿಗಳ ಓಡಾಟಕ್ಕೂ ಸಮಸ್ಯೆಯಾಗಿದೆ ಎಂಬ ದೂರು ಇದೆ. ‘ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡ ಮೇಲೆ ಪಾದಚಾರಿ ಮಾರ್ಗವನ್ನು ನಿರ್ಮಿಸಲಾಗುತ್ತದೆ.ರಸ್ತೆ ಬದಿಯ ಚರಂಡಿಯನ್ನು ಮರು–ನಿರ್ಮಾಣ ಮಾಡಲಾಗುತ್ತದೆ’ ಎಂದು ಬಿಬಿಎಂಪಿ ಯೋಜನೆ ಮುಖ್ಯ ಎಂಜಿನಿಯರ್‌ ಎಂ. ಲೋಕೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.