Civil servants cleaning the skywalk
ಬೆಂಗಳೂರು: ನಗರದಲ್ಲಿರುವ ಪಾದಚಾರಿ ಮೇಲ್ಸೇತುವೆಗಳಲ್ಲಿ (ಸ್ಕೈವಾಕ್) ಸೋಮವಾರ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ನಡೆಸಿದರು.
ನಗರದ ಜನನಿಬಿಡ ಪ್ರದೇಶ, ಪ್ರಮುಖ ಜಂಕ್ಷನ್, ಬಸ್ ನಿಲ್ದಾಣಗಳ ಬಳಿ ಸೇರಿ 81 ಪಾದಚಾರಿ ಮೇಲ್ಸೇತುವೆಗಳಿವೆ. ಇಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಕ್ರಮ ವಹಿಸುವಂತೆ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿ, ಹೊಸೂರು ರಸ್ತೆ, ಹಳೆ ಮದ್ರಾಸ್ ರಸ್ತೆ, ಮಣಿಪಾಲ್ ಆಸ್ಪತ್ರೆ, ಮಾಗಡಿ ರಸ್ತೆ, ನಾಗರಭಾವಿ ಮುಖ್ಯ ರಸ್ತೆ, ಮೈಸೂರು ರಸ್ತೆ, ಟಿನ್ ಪ್ಯಾಕ್ಟರಿ, ಬೆಳ್ಳಂದೂರು ಸಿಂಗಸಂದ್ರ ಸೇರಿದಂತೆ 77 ಸೈವಾಕ್‌ಗಳಲ್ಲಿ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ನಡೆಸಿದರು.
ಪ್ಲಾಸ್ಟಿಕ್ ಕವರ್, ಬಾಟಲ್‌ಗಳನ್ನು ಬಿಸಾಡುವುದು, ಉಗುಳುವುದು, ಭಿತ್ತಿಪತ್ರಗಳನ್ನು ಅಂಟಿಸುವುದು ಸೇರಿದಂತೆ ಸ್ವಚ್ಛತೆಗೆ ತೊಡಕುಂಟಾಗುವ ಕ್ರಿಯೆಗಳನ್ನು ಪಾದಚಾರಿ ಮೇಲ್ಸೇತುವೆ ಬಳಕೆದಾರರು ಮಾಡಬಾರದು ಎಂದು ಮನವಿ ಮಾಡಲಾಯಿತು.
ನಿರ್ವಹಣೆಗೆ ಸೂಚನೆ: ನಗರದಲ್ಲಿ ಪಾದಚಾರಿ ಮೇಲ್ಸೇತುವೆಗಳನ್ನು ಬಿಬಿಎಂಪಿ ಟ್ರಾಫಿಕ್ ಎಂಜಿನಿಯರಿಂಗ್ ಸೆಲ್ ವತಿಯಿಂದ ಸ್ಥಾಪಿಸಲಾಗುತ್ತಿದೆ. ಈ ಪೈಕಿ ಪಾಲಿಕೆಯ ಟಿಇಸಿ ವಿಭಾಗದಿಂದ 16 ಹಾಗೂ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಅಡಿಯಲ್ಲಿ 65 ಸ್ಕೈವಾಕ್‌ಗಳಿದ್ದು, ಎಲ್ಲ ಸ್ಕೈವಾಕ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡಲು ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.