ADVERTISEMENT

ತಂತ್ರಜ್ಞಾನದ ರಾಜಧಾನಿಯಲ್ಲಿ ತೆವಳುತ್ತಿವೆ ‘ಸ್ಮಾರ್ಟ್‌’ ಕಾಮಗಾರಿಗಳು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 23:25 IST
Last Updated 26 ಸೆಪ್ಟೆಂಬರ್ 2020, 23:25 IST
ಬೆಂಗಳೂರು ನಗರದ ಕಸ್ತೂರಬಾ ರಸ್ತೆ ಬಳಿ ಸ್ಮಾರ್ಟ್‌ಸಿಟಿ ಯೋಜನೆ ಅಡಿ ಕೈಗೆತ್ತಿಕೊಂಡಿರುವ ಟೆಂಡರ್‌ಶ್ಯೂರ್‌ ಮಾದರಿಯ ಕಾಮಗಾರಿ – ಪ್ರಜಾವಾಣಿ ಚಿತ್ರ/ ಇರ್ಷಾದ್‌ ಮಹಮ್ಮದ್‌
ಬೆಂಗಳೂರು ನಗರದ ಕಸ್ತೂರಬಾ ರಸ್ತೆ ಬಳಿ ಸ್ಮಾರ್ಟ್‌ಸಿಟಿ ಯೋಜನೆ ಅಡಿ ಕೈಗೆತ್ತಿಕೊಂಡಿರುವ ಟೆಂಡರ್‌ಶ್ಯೂರ್‌ ಮಾದರಿಯ ಕಾಮಗಾರಿ – ಪ್ರಜಾವಾಣಿ ಚಿತ್ರ/ ಇರ್ಷಾದ್‌ ಮಹಮ್ಮದ್‌   

ಬೆಂಗಳೂರು: ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದಲ್ಲಿ ಆಯ್ಕೆಯಾದ ಕೆಲ ಕಾಮಗಾರಿಗಳ ಬಗ್ಗೆ ಆರಂಭದಲ್ಲೇ ಆಕ್ಷೇಪ ವ್ಯಕ್ತವಾಗಿತ್ತು. ಈಗ ಅವುಗಳ ಅನುಷ್ಠಾನವನ್ನಾದರೂ ಅಚ್ಚುಕಟ್ಟಾಗಿ ಮಾಡಲಾಗುತ್ತಿದೆಯೇ ಎಂದು ನೋಡಿದರೆ, ಅದೂ ಇಲ್ಲ.

ಸ್ಮಾರ್ಟ್‌ಸಿಟಿ ಯೋಜನೆಯ ಪ್ರದೇಶಾ ಧಾರಿತ ಅಭಿವೃದ್ಧಿ ಕಾಮಗಾರಿಗಳಡಿ 36 ರಸ್ತೆಗಳನ್ನು (ಒಟ್ಟು 29.56 ಕಿ.ಮೀ) ಟೆಂಡರ್‌ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದು, ವಿಧಾನಸೌಧ, ವಿಕಾಸಸೌಧ ಆಸುಪಾಸಿನ ರಸ್ತೆಗಳ ಪಕ್ಕದಲ್ಲಿ ಎಲ್‌ಇಡಿ ಬೀದಿದೀಪಗಳ ಅಳವಡಿಕೆ, ಶಿವಾಜಿನಗರ ಬಸ್‌ ನಿಲ್ದಾಣ ಅಭಿವೃದ್ಧಿ; ಕಬ್ಬನ್‌ ಉದ್ಯಾ ನದ ಅಭಿವೃದ್ಧಿ ಕಾಮಗಾರಿಗಳು ಮಾತ್ರ ಸದ್ಯಕ್ಕೆ ಆರಂಭವಾಗಿವೆ. ಎರಡು ವರ್ಷ ಕಳೆದರೂ ಅವು ಪೂರ್ಣಗೊಂಡಿಲ್ಲ. ಟೆಂಡರ್‌ಶ್ಯೂರ್‌ ರಸ್ತೆ ಕಾಮಗಾರಿ ಗಳಂತೂ ಅಧ್ವಾನವನ್ನೇ ಸೃಷ್ಟಿಸಿವೆ.

‘ವಾಹನ ದಟ್ಟಣೆಯ ರಸ್ತೆಗಳಲ್ಲೂ ಕಾಮಗಾರಿ ಯನ್ನು ಒಂದೇ ವಾರದಲ್ಲಿ ಹೇಗೆ ಪೂರ್ಣಗೊಳಿಸಬಹುದು ಎಂದು ತೋರಿಸುವ ಮೂಲಕ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಸಂಸ್ಥೆ ಮೇಲ್ಪಂಕ್ತಿ ಹಾಕಿಕೊಡಬೇಕಿತ್ತು. ಈ ಕಾಮಗಾರಿಗಳನ್ನು ಇನ್ನಷ್ಟು ವೃತ್ತಿಪರ ರೀತಿಯಲ್ಲಿ ಕಾರ್ಯಗತಗೊಳಿಸಬಹುದಿತ್ತು. ಆದರೆ, ಕಾಮಗಾರಿಗಳು ನಿರೀಕ್ಷೆಗಿಂತ ನಿಧಾನವಾಗಿ ಸಾಗುತ್ತಿವೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ನಗರಯೋಜನಾ ತಜ್ಞ ವಿ. ರವಿಚಂದರ್‌.

ADVERTISEMENT

ಈಗಾಗಲೇ ಈ ಕಾಮಗಾರಿಗಳು ವಿಳಂಬವಾಗಿವೆ. ವರ್ಷಾಂತ್ಯಕ್ಕೆ ಕೆಲವು ರಸ್ತೆ ಕಾಮಗಾರಿ ಹಾಗೂ 2021ರ ಒಳಗೆ ಎಲ್ಲ 36 ರಸ್ತೆಗಳ ಕಾಮಗಾರಿಗಳನ್ನೂ ಪೂರ್ಣಗೊ ಳಿಸುವುದಾಗಿ ‘ಬೆ೦ಗಳೂರು ಸ್ಮಾರ್ಟ್‌ ಸಿಟಿ’ ಸಂಸ್ಥೆ ಹೇಳುತ್ತಿದೆ. ಆದರೆ ಅಂತಹ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ.

ಸಮನ್ವಯ ಕೊರತೆ: ‘ಟೆಂಡರ್‌ಶ್ಯೂರ್‌ ಕಾಮಗಾರಿ ಗಳನ್ನು ಅನುಷ್ಠಾನಗೊಳಿಸಲು ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ಹಾಗೂ ಸಂಚಾರ ಪೊಲೀಸ್‌ ಇಲಾಖೆಗಳ ಜೊತೆ ಸಮನ್ವಯ ಸಾಧಿಸುವುದು ತೀರ ಮುಖ್ಯ. ಆದರೆ, ಸ್ಮಾರ್ಟ್‌ ಸಿಟಿ ವಿಚಾರದಲ್ಲಿ ಇಲಾಖೆಗಳ ಮಧ್ಯೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ’ ಎಂದು ಹಿರಿಯ ಎಂಜಿನಿಯರ್‌ ಒಬ್ಬರು ವಿಶ್ಲೇಷಿಸಿದರು.

‘ನಿಯಮದಲ್ಲಿ ಅವಕಾಶ ಇಲ್ಲದಿ ದ್ದರೂ ಕಾಮಗಾರಿಗಳನ್ನು ಉಪಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರರಿಗೆ ಇಂತಹ ಯೋಜನೆ ಅನುಷ್ಠಾನಗೊಳಿಸಿದ ಅನುಭವವಿಲ್ಲ. ಈ ಯೋಜನೆಗಳ ಮೇಲ್ವಿಚಾರಣೆಗೆ ಅಗತ್ಯವಿರುವ ಚಾಕಚಕ್ಯತೆಯೂ ಸ್ಮಾರ್ಟ್‌ಸಿಟಿ ಸಂಸ್ಥೆಯ ಅಧಿಕಾರಿಗಳಿಗೆ ಇದ್ದಂತಿಲ್ಲ’ ಎನ್ನುತ್ತಾರೆ ಅವರು.

ಬೆಂಗಳೂರಿನಲ್ಲಿ ವಾರ್ಷಿಕ ಸರಾಸರಿ 770 ಮಿ.ಮೀ ಮಳೆಯಾಗುತ್ತಿದ್ದು, 14.80 ಟಿಎಂಸಿ ಅಡಿಗಳಷ್ಟು ನೀರು ಲಭಿಸುತ್ತದೆ. ಮಳೆನೀರನ್ನು ಸಮರ್ಥವಾಗಿ ಬಳಸಿಕೊಳ್ಳುವ ಯೋಜನೆಯನ್ನು ಆಯ್ದ ವಾರ್ಡ್‌ಗಳಲ್ಲಿ ಅನುಷ್ಠಾನಗೊಳಿಸಬಹುದಿತ್ತು ಎನ್ನುತ್ತಾರೆ ತಜ್ಞರು.

ಸಂಚಾರಿ ಪೊಲೀಸ್‌ ಇಲಾಖೆ ನಗರದಲ್ಲಿ ಒಂದು ಕಮಾಂಡ್ ಸೆಂಟರನ್ನು ಇತ್ತೀಚೆಗೆ ಆರಂಭಿಸಿದೆ. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ₹ 200 ಕೋಟಿ ವೆಚ್ಚದಲ್ಲಿ ಮತ್ತೊಂದು ಇಂಟೆಗ್ರೇಟೆಡ್‌ ಕಮಾಂಡ್‌ ಕಂಟ್ರೋಲ್‌ ಸೆಂಟರ್‌ ನಿರ್ಮಿಸಲಾಗುತ್ತಿದೆ. ತಂತ್ರಜ್ಞಾನ ಬಳಸಿ, ಆಯಕಟ್ಟಿನ ಜಾಗಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿ ಸಮರ್ಪಕವಾಗಿ ಯೋಜನೆ ರೂಪಿಸುತ್ತಿದ್ದರೆ, ನಗರದಲ್ಲಿ ಎಲ್ಲೇ ಸಂಚಾರ ನಿಯಮ ಉಲ್ಲಂಘನೆ, ಅಪಘಾತ, ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವುದು, ಮುಂತಾದವುಗಳ ಮಾಹಿತಿಗಳನ್ನು ಒಂದೇ ಕಮಾಂಡ್‌ ಕಂಟ್ರೋಲ್‌ ಸೆಂಟರ್‌ನಲ್ಲಿ ಕಲೆಹಾಕಬಹುದಿತ್ತು ಎಂಬುದು ತಜ್ಞರ ಆಂಬೋಣ.

ಖರ್ಚಾಗಿದ್ದು ಕೇವಲ ₹ 58.36 ಕೋಟಿ
ಬೆ೦ಗಳೂರು ನಗರಕ್ಕೆ ಕೇ೦ದ್ರ ಸರ್ಕಾರವು 2017ರ ಜುಲೈ 6ರಂದು ಸ್ಮಾರ್ಟ್‌ ಸಿಟಿ ಯೋಜನೆಯನ್ನು ಮಂಜೂರು ಮಾಡಿದೆ. ಈ ಯೋಜನೆಯ ಕಾಮಗಾರಿಗಳನ್ನು ಅಡೆತಡೆಗಳಿಲ್ಲದೆ ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ವಿಶೇಷ ಉದ್ದೇಶದ ಘಟಕ ‘ಬೆ೦ಗಳೂರು ಸ್ಮಾರ್ಟ್‌ ಸಿಟಿ’ಯನ್ನು 2018ರ ಜ. 3ರಂದು ಕಂಪನಿ ಕಾಯ್ದೆಯಡಿ ಸ್ಥಾಪಿಸಲಾಗಿದೆ. ಈ ಯೋಜನೆಗೆ ಐದು ವರ್ಷಗಳಲ್ಲಿ ₹ 1000 ಕೋಟಿ ಅನುದಾನ ಬಿಡುಗಡೆಯಾಗಲಿದ್ದು, ₹ 930 ಕೋಟಿಯನ್ನು ವಿವಿಧ ಯೋಜನೆಗಳಿಗೆ ಹಾಗೂ ₹ 70 ಕೋಟಿಯನ್ನು ಆಡಳಿತಾತ್ಮಕ ವೆಚ್ಚಗಳಿಗೆ ಬಳಸಲಾಗುತ್ತಿದೆ.

ಇದುವರೆಗೆ ಕೇ೦ದ್ರ ಮತ್ತು ರಾಜ್ಯ ಸರ್ಕಾರದಿ೦ದ ಒಟ್ಟು ₹ 210 ಕೋಟಿ ಅನುದಾನ ಬಿಡುಗಡೆಯಾಗಿದೆ. ಆದರೆ, ಸೆ.19ರವರೆಗೆ ಕಾಮಗಾರಿಗಳಿಗೆ ₹ 48.36 ಕೋಟಿ ಹಾಗೂ ಆಡಳಿತಾತ್ಮಕ ವೆಚ್ಚಕ್ಕೆ ₹ 10 ಕೋಟಿ ವ್ಯಯಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.