ADVERTISEMENT

ಕಾಲ್ತುಳಿತ: ದೊಡ್ಡಮಟ್ಟದ ಸಮಾರಂಭಗಳಿಗೆ ಹೊಸ ಎಸ್‌ಒಪಿ ರೂಪಿಸುತ್ತೇವೆ– ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 7:52 IST
Last Updated 5 ಜೂನ್ 2025, 7:52 IST
<div class="paragraphs"><p>ಜಿ. ಪರಮೇಶ್ವರ</p></div>

ಜಿ. ಪರಮೇಶ್ವರ

   

ಬೆಂಗಳೂರು: 'ದೊಡ್ಡ‌ಮಟ್ಟದ ಸಭೆ, ಸಮಾರಂಭ ಮತ್ತು ವಿಜಯೋತ್ಸವ ಕಾರ್ಯಕ್ರಮಗಳಿಗೆ ಹೊಸ ಎಸ್‌ಒಪಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್) ಮಾಡಲಾಗುವುದು' ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು.

ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, 'ಬುಧವಾರ ನಡೆದ ಘಟನೆ ರಾಜ್ಯದ ಕ್ರಿಕೆಟ್ ಇತಿಹಾಸದಲ್ಲಿ ಆಗಿರಲಿಲ್ಲ. ಮುಖ್ಯಮಂತ್ರಿಯವರು ಬುಧವಾರ ರಾತ್ರಿ ಸಭೆ ನಡೆಸಿ, ಅನೇಕ ಮಾಹಿತಿ ಪಡೆದು ಮಾತನಾಡಿದ್ದಾರೆ. ಈ ಬಗ್ಗೆ ಮ್ಯಾಜಿಸ್ಟ್ರೆಟಿಯಲ್ ತನಿಖೆಗೆ ಆದೇಶಿಸಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಯಾಗಬೇಕೆಂದು ಆದೇಶಿಸಲಾಗಿದೆ. ದುರಂತಕ್ಕೆ ಕಾರಣರಾದವರು ಯಾರೇ ಆದರೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ' ಎಂದರು

ADVERTISEMENT

'ಈ ಬಗ್ಗೆ ಈಗ ವಿವರಣೆ ಮಾಡಲು ಹೋಗುವುದಿಲ್ಲ. ತನಿಖೆಯ ವರದಿ ಬರುವವರೆಗೂ ಹೇಳಲು ಸಾಧ್ಯವಿಲ್ಲ' ಎಂದರು

ದುರ್ಘಟನೆಯಲ್ಲಿ 11 ಜನ ಸಾವನ್ನಪ್ಪಿದ್ದು, 56 ಜನ ಗಾಯಗೊಂಡಿದ್ದಾರೆ. 46 ಜನ ಚಿಕಿತ್ಸೆ ಪಡೆದು ಮನೆಗಳಿಗೆ ಹೋಗಿದ್ದಾರೆ. 10 ಜನ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದು, ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು.

ಇಂತಹ ಘಟನೆಗಳು ಆಗಬಾರದು ಎಂಬ ವಿಚಾರದಲ್ಲಿ ಗೃಹ ಇಲಾಖೆಯಿಂದ ಒಂದು ಹೊಸ ಎಸ್‌ಒಪಿ (ಸ್ಟ್ಯಾಂಡರ್ಡ್ ಆಪರೇಟಿವ್ ಪ್ರೊಸಿಜರ್) ಮಾಡುತ್ತೇವೆ.‌ ಇನ್ನುಮುಂದೆ ಯಾವುದೇ ದೊಡ್ಡ ಸಮಾರಂಭ, ಸಭೆ, ವಿಜಯೋತ್ಸವ ನಡೆಯುವಾಗ ಪೊಲೀಸ್ ಇಲಾಖೆಯ ನಿರ್ದೇಶನ ಏನು ಬರುತ್ತದೆ, ಅದರ ಚೌಕಟ್ಟಿನಲ್ಲಿ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಹೇಳಿದರು

ಹೊಸ ಎಸ್‌ಒಪಿ ಮಾಡುತ್ತೇವೆ. ನಾವು ಕೆಲವು ಸೂಚನೆಗಳನ್ನು ಕೊಡುತ್ತೇವೆ. ಯಾವತ್ತು ಕೂಡ ಇಂತಹ ಘಟನೆಗಳಾಗಬಾರದು. ಅಮಾಯಕರ ಸಾವುಗಳು ಆಗಬಾರದು. ಇದೆಲ್ಲವನ್ನು ನೋಡಿದಾಗ ನೋವಾಗುತ್ತದೆ. ಎಂದರು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಘಟನೆ ನಡೆದ ಸ್ಥಳ‌ ಪರಿಶೀಲನೆ ಮಾಡುತ್ತೇನೆ. ಆರ್‌ಸಿಬಿ, ಕೆಎಸ್‌ಸಿಎ ಅವರೊಂದಿಗೆ ಸಭೆ ಮಾಡುತ್ತೇನೆ. ತಾಂತ್ರಿಕವಾಗಿ ಏನೇ ಇದ್ದರೂ ಡಿಜಿಪಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರು ನೋಡಿಕೊಳ್ಳುತ್ತಾರೆ. ಎಲ್ಲಿ ಮತ್ತು ಏನು ಲೋಪ ಆಗಿದೆ ಎಂಬುದು ಗೊತ್ತಾದ ಬಳಿಕ ತಪ್ಪು ಯಾರದ್ದು ಎಂಬುದು ಗೊತ್ತಾಗಲಿದೆ. ಘಟನೆಗೆ ಸಂಬಂಧಿಸಿದಂತೆ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲಿ ಲೋಪವಾಗಿದೆ ಎಂಬುದನ್ನು ಪರಿಶೀಲಿಸುತ್ತೇವೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.