ADVERTISEMENT

ಬೆಂಗಳೂರು | ಯುವಕನ ಅಪಹರಿಸಿ ಸುಲಿಗೆ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 15:50 IST
Last Updated 3 ಫೆಬ್ರುವರಿ 2026, 15:50 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಹಣಕ್ಕಾಗಿ ಬಿಬಿಎಂ ಪದವಿ ವಿದ್ಯಾರ್ಥಿಯನ್ನು ಅಪಹರಿಸಿದ್ದ ನಾಲ್ವರು ಆರೋಪಿಗಳನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಬನ್ನೇರುಘಟ್ಟದ ಜಯರಾಂ ಲೇಔಟ್‌ನ ನಿವಾಸಿ ನಿಹಾ‌ರ್ ರಂಜನ್, ಜೆ.ಪಿ ನಗರದ ಸಂತೋಷ್, ಮಧು ಹಾಗೂ ಕೊತ್ತನೂರು ದಿಣ್ಣೆಯ ಮಂಜುನಾಥ್ ಅಲಿಯಾಸ್ ‘ಸೈಕೊ’ ಮಂಜು ಬಂಧಿತರು.

ಬಂಧಿತರಿಂದ ₹39 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿದ ಆಟೊರಿಕ್ಷಾ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿಗಳು, ಬನ್ನೇರುಘಟ್ಟದ ಸುತ್ತಮುತ್ತ ಆಟೊ, ಕ್ಯಾಬ್ ಚಾಲಕರಾಗಿ ಹಾಗೂ ಸಮೋಸ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ಜ.24ರಂದು ಸಂಜೆ 6.30ರ ಸುಮಾರಿಗೆ ಬನಶಂಕರಿ ಎರಡನೇ ಹಂತದ ಬಿಡಿಎ ಕಾಂಪ್ಲೆಕ್ಸ್, ಕಬಾಬ್ ಎಕ್ಸ್‌ಪ್ರೆಸ್ ಹೋಟೆಲ್ ಎದುರು ನಿಂತಿದ್ದ ನಿತಿನ್‌ ಗೌಡ ಅವರನ್ನು ಆಟೊದಲ್ಲಿ ಅಪಹರಿಸಿದ್ದರು. ಬಳಿಕ ಕೊತ್ತನೂರು ದಿಣ್ಣೆಯ ಹಿಂದೂ ರುದ್ರಭೂಮಿಯ ಒಳಗೆ ಕರೆದೊಯ್ದು ಹಣ ಕೊಡುವಂತೆ ನಿತಿನ್‌ ಗೌಡ ಅವರ ಮೇಲೆ ಹಲ್ಲೆ ನಡೆಸಿದ್ದರು. ‘ಹಣ ಇಲ್ಲ’ ಎಂದಾಗ, ಮೊಬೈಲ್‌ ಕಸಿದುಕೊಂಡಿದ್ದರು. ನಂತರ, ಮತ್ತೆ ಹಲ್ಲೆ ನಡೆಸಿ ಫೋನ್‌ ಪೇ ಮೂಲಕ ₹47 ಸಾವಿರವನ್ನು ಆರೋಪಿಗಳು ತಮ್ಮ ಖಾತೆಗೆ ವರ್ಗಾಹಿಸಿಕೊಂಡಿದ್ದರು. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಮತ್ತೆ ಅದೇ ಆಟೊದಲ್ಲಿ ವಾಪಸ್ ಕರೆತಂದು ಕೊತ್ತನೂರು ದಿಣ್ಣೆಯ ಬಳಿಗೆ ಬಿಟ್ಟು ಹೋಗಿದ್ದರು. ಬಳಿಕ, ನಿತಿನ್‌ ಗೌಡ ಅವರು ದೂರು ನೀಡಿದ್ದರು.

ಹಣ ಕಳೆದುಕೊಂಡ ಯುವಕ ನೀಡಿದ ದೂರು ಹಾಗೂ ಸುಳಿವು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು. ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿಯನ್ನೂ ಪರಿಶೀಲಿಸಲಾಗಿತ್ತು. ಕೃತ್ಯಕ್ಕೆ ಬಳಸಿದ ಆಟೊವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.