ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಬೂದಿಗೆರೆ ಕ್ರಾಸ್ ಬಳಿ ರಸ್ತೆ ಗುಂಡಿ ತಪ್ಪಿಸುವ ಯತ್ನದಲ್ಲಿ ನಿಯಂತ್ರಣ ತಪ್ಪಿ ಬಿದ್ದ ವಿದ್ಯಾರ್ಥಿನಿ ಮೇಲೆ ಲಾರಿಯ ಚಕ್ರಗಳು ಹರಿದು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ, ಟಿಪ್ಪರ್ ಲಾರಿ ಚಾಲಕ ಮಂಡಲ್ (25) ಎಂಬಾತನನ್ನು ಆವಲಹಳ್ಳಿ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಮಂಡಲ್, ಮಂಡೂರಿನಲ್ಲಿ ಟಿಪ್ಪರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಅಪಘಾತದಲ್ಲಿ ವಿದ್ಯಾರ್ಥಿನಿ ತನುಶ್ರೀ (22) ಅವರು ಮೃತಪಟ್ಟಿದ್ದ ನಂತರ ವಾಹನ ಸಮೇತ ಆರೋಪಿ ಪರಾರಿಯಾಗಿದ್ದ. ತನುಶ್ರೀ ಕುಟುಂಬಸ್ಥರು ನೀಡಿದ ದೂರನ್ನು ಆಧರಿಸಿ ಕಾರ್ಯಾಚರಣೆ ನಡೆಸಿ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಬೈಯಪ್ಪನಹಳ್ಳಿ ನಿವಾಸಿ ತನುಶ್ರೀ ಅವರು ಬಿ.ಕಾಂ ಓದುತ್ತಿದ್ದರು. ಬೂದಿಗೆರೆ ಕ್ರಾಸ್ ಬಳಿಯ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ತನುಶ್ರೀ ಅವರು, ರಸ್ತೆ ಗುಂಡಿ ತಪ್ಪಿಸಲು ಬಲ ಬದಿಗೆ ವಾಹನ ಚಾಲನೆ ಮಾಡಿದ್ದರು. ಅದೇ ವೇಳೆ ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಆಗ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದಿದ್ದ ತನುಶ್ರೀ ಅವರ ಮೇಲೆ ಟಿಪ್ಪರ್‌ನ ಚಕ್ರಗಳು ಹರಿದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.