ವಿದ್ಯಾರ್ಥಿ ಆತ್ಮಹತ್ಯೆ
ಐಸ್ಟಾಕ್ ಚಿತ್ರ
ಬೆಂಗಳೂರು: ಬನಶಂಕರಿಯ ಮೂರನೇ ಹಂತದ ಬನಗಿರಿನಗರದಲ್ಲಿ ಏಳನೇ ತರಗತಿಯ ವಿದ್ಯಾರ್ಥಿ ಗಾಂಧಾರ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಪೊಲೀಸರಿಗೆ ಅಚ್ಚರಿಯ ಅಂಶಗಳು ಗೊತ್ತಾಗಿವೆ.
ಸಂಗೀತಗಾರ ಗಣೇಶ್ ಪ್ರಸಾದ್ ಮತ್ತು ಜನಪದ ಗಾಯಕಿ ಸವಿತಾ(ಸವಿತಕ್ಕ) ಅವರ ಎರಡನೇ ಪುತ್ರ ಗಾಂಧಾರ್ ಭಾನುವಾರ ರಾತ್ರಿ ಮರಣಪತ್ರ ಬರೆದಿಟ್ಟು ತಮ್ಮ ಮನೆಯ ರೂಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಆರಂಭದಲ್ಲಿ ಬಾಲಕನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿರಲಿಲ್ಲ. ಆದರೆ, ಇದೀಗ ಸಿ.ಕೆ ಅಚ್ಚುಕಟ್ಟು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಬಾಲಕನ ಸಾವಿಗೆ ಜಪಾನ್‌ನ ವೆಬ್ ಸಿರೀಸ್ ಕಾರಣವಾಗಿರಬಹುದು ಎಂದು ಶಂಕಿಸಿದ್ದಾರೆ. ಆತನ ರೂಮ್‌ನಲ್ಲಿ ವೆಬ್‌ಸಿರೀಸ್ ಪಾತ್ರದ ಚಿತ್ರ ಬರೆದಿದ್ದ ಎಂದು ಮೂಲಗಳು ತಿಳಿಸಿವೆ.
ಮನೆಯಲ್ಲಿ ಒಂಟಿಯಾಗಿ ಇದ್ದಾಗ ಗಾಂಧಾರ್, ಜಪಾನ್ ಮೂಲದ ‘ಡೆತ್‌ನೋಟ್’ ಎಂಬ ವೆಬ್‌ಸಿರೀಸ್ ನೋಡುತ್ತಿದ್ದ. ಅದನ್ನು ನೋಡಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಬಾಲಕ ಬಳಸುತ್ತಿದ್ದ ಮೊಬೈಲ್ ಮತ್ತು ಪೋಷಕರನ್ನು ವಿಚಾರಣೆ ನಡೆಸಿ ಘಟನೆಯ ಸಂಬಂಧ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮತ್ತೊಂದೆಡೆ, ಶಾಲೆಯಲ್ಲಿ ಬಾಲಕಿಯೊಬ್ಬಳನ್ನು ‘ಡುಮ್ಮಿ’ ಎಂದು ಗಾಂಧಾರ್ ಚುಡಾಯಿಸುತ್ತಿದ್ದ ವಿಚಾರವೂ ಗೊತ್ತಾಗಿದೆ. ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ಗಾಂಧಾರ್ ಚುಡಾಯಿಸಿದ್ದನ್ನು ಆ ಬಾಲಕಿ ಸಹಜವಾಗಿಯೇ ತೆಗೆದುಕೊಂಡಿದ್ದಳು. ಈ ಸಂಬಂಧ ಆಕೆ ಶಾಲೆಯ ಆಡಳಿತ ಮಂಡಳಿಗೂ ಯಾವುದೇ ದೂರು ನೀಡಿರಲಿಲ್ಲ ಎಂದು ಪೊಲೀಸರು ಹೇಳಿದರು.
ಬಾಲಕನ ತಾಯಿ ಸವಿತಾ ಕಾರ್ಯಕ್ರಮ ನಿಮಿತ್ತ ಆಸ್ಟ್ರೇಲಿಯಾಗೆ ತೆರಳಿದ್ದರು. ತಂದೆ, ಅಣ್ಣನ ಜತೆ ಚೆನ್ನಾಗಿಯೇ ಇದ್ದ ಗಾಂಧಾರ್, ಭಾನುವಾರ ರಾತ್ರಿ ಊಟ ಮಾಡಿ ತನ್ನ ರೂಮ್‌ಗೆ ತೆರಳಿದ್ದ. ಸೋಮವಾರ ಬೆಳಿಗ್ಗೆ ಬಾಲಕನ ತಂದೆ ಆತನನ್ನು ಎಬ್ಬಿಸಲು ಹೋದಾಗ, ಗಿಟಾರ್‌ನ ತಂತಿಯಿಂದ ನೇಣು ಬಿಗಿದುಕೊಂಡು ಗಾಂಧಾರ್ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿತ್ತು.
ಮರಣಪತ್ರದಲ್ಲಿ ಏನಿತ್ತು?
‘ಕೋಪವಿದ್ದರೆ ಕ್ಷಮೆ ಕೇಳುತ್ತೇನೆ. ತಪ್ಪುಗಳನ್ನು ದಯವಿಟ್ಟು ಕ್ಷಮಿಸಿ. 14 ವರ್ಷ ಬದುಕಿದ್ದು, ಅದರಲ್ಲೇ ತೃಪ್ತನಾಗಿದ್ದೇನೆ. ಸಂತೋಷದಿಂದ ಕಳೆದಿದ್ದೇನೆ. ಅದೇ ಸಾಕು. ಸ್ವರ್ಗದಲ್ಲಿ ನಾನು ಖುಷಿಯಾಗಿರುತ್ತೇನೆ. ನನ್ನ ಸ್ನೇಹಿತರನ್ನು ಪ್ರೀತಿಸುತ್ತಿದ್ದೆ ಎಂದು ಅವರಿಗೂ ತಿಳಿಸಿ. ಶಾಲಾ ಸ್ನೇಹಿತರಿಗೂ ಈ ಮಾತನ್ನು ಹೇಳಿ. ಐ ಮಿಸ್ ಯೂ ಆಲ್ – ಗುಡ್ಬೈ ಅಮ್ಮ’ ಎಂದು ಬರೆದಿದ್ದ ಮರಣಪತ್ರವು ರೂಮ್‌ನಲ್ಲಿ ಸಿಕ್ಕಿತ್ತು. ಬಾಲಕ ಬರೆದಿದ್ದ ಮರಣಪತ್ರವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.