ADVERTISEMENT

ಉಪನಗರ ರೈಲು: 12 ನಿಲ್ದಾಣಗಳ ನಿರ್ಮಾಣಕ್ಕೆ ಟೆಂಡರ್

​ಪ್ರಜಾವಾಣಿ ವಾರ್ತೆ
Published 27 ಮೇ 2023, 0:54 IST
Last Updated 27 ಮೇ 2023, 0:54 IST
ಉಪನಗರ ರೈಲು ನಿಲ್ದಾಣಗಳ ವಿನ್ಯಾಸ
ಉಪನಗರ ರೈಲು ನಿಲ್ದಾಣಗಳ ವಿನ್ಯಾಸ   

ಬೆಂಗಳೂರು: ಕೊನೆಗೂ ಉಪನಗರ ರೈಲು ಯೋಜನೆಯ ಕಾಮಗಾರಿ ಆರಂಭಿಸಲು ಕೆ-ರೈಡ್ (ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ) ಸಿದ್ಧತೆ ಚುರುಕುಗೊಳಿಸಿದೆ. ಮಲ್ಲಿಗೆ ಕಾರಿಡಾರ್‌ನಲ್ಲಿ(ಬೈಯಪ್ಪನಹಳ್ಳಿ– ಚಿಕ್ಕಬಾಣಾವರ) 12 ನಿಲ್ದಾಣಗಳ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಿದೆ.

ಬೆನ್ನಿಗಾನಹಳ್ಳಿ, ಕಸ್ತೂರಿ ನಗರ, ಸೇವಾ ನಗರ, ಬಾಣಸವಾಡಿ, ನಾಗವಾರ, ಕನಕನಗರ, ಹೆಬ್ಬಾಳ, ಮತ್ತಿಕೆರೆ, ಯಶವಂತಪುರ, ಶೆಟ್ಟಿಹಳ್ಳಿ, ಮೈದರಹಳ್ಳಿ, ಚಿಕ್ಕಬಾಣಾವರ ನಿಲ್ದಾಣಗಳ ವಿನ್ಯಾಸ ಅಂತಿಮಗೊಳಿಸಿದೆ. ಕಾಮಗಾರಿ ಗುತ್ತಿಗೆ ನೀಡಲು ಟೆಂಡರ್ ಆಹ್ವಾನಿಸಿದೆ.

12 ನಿಲ್ದಾಣಗಳಲ್ಲಿ ಎರಡು ಎತ್ತರಿಸಿದ ನಿಲ್ದಾಣಗಳು, ಎರಡು ಎತ್ತರಿಸಿದ ಇಂಟರ್ ಚೇಂಜ್ ನಿಲ್ದಾಣಗಳು, ಎಂಟು ನೆಲಸ್ತರದ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ.

ADVERTISEMENT

ಎತ್ತರಿಸಿದ ಪಾದಚಾರಿ ಉಕ್ಕಿನ ಮಾರ್ಗ, ಮೇಲ್ಚಾವಣಿಗಳ ರಚನೆ, ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಮಿಸಲು ಉದ್ದೇಶಿಸಿದೆ. ಬಿಡ್‌ ಸಲ್ಲಿಸಲು ಆಗಸ್ಟ್‌ 8 ಕೊನೆಯ ದಿನಾವಾಗಿದೆ ಎಂದು ಕೆ–ರೈಡ್ ವಿವರಿಸಿದೆ.

ಬೆಂಗಳೂರಿನಲ್ಲಿ ಉಪನಗರ ರೈಲು ಯೋಜನೆಯಡಿ ನಾಲ್ಕು ಕಾರಿಡಾರ್‌ಗಳು ನಿರ್ಮಾಣವಾಗುತ್ತಿವೆ. ಮೊದಲ ಹಂತದಲ್ಲಿ ಮಲ್ಲಿಗೆ ಕಾರಿಡಾರ್‌ನಲ್ಲಿ ಕಾಮಗಾರಿ ಆರಂಭವಾಗಿದೆ. ಬಾಕಿ ಮೂರು ಕಾರಿಡಾರ್‌ನಲ್ಲಿ ಕಾಮಗಾರಿ ಆರಂಭವಾಗಿಲ್ಲ.

ಕೆಎಸ್‌ಆರ್‌ ರೈಲು ನಿಲ್ದಾಣದಿಂದ ದೇವನಹಳ್ಳಿಗೆ ಸಂಪರ್ಕ ಕಲ್ಪಿಸುವ ಸಂಪಿಗೆ (ಕಾರಿಡಾರ್‌–1) ಕಾರಿಡಾರ್‌ಗೆ ಮೊದಲ ಆದ್ಯತೆ ನೀಡಬೇಕು ಎಂಬ ಒತ್ತಡ ಇತ್ತು. ಆದರೂ, ಕಾರಿಡಾರ್–2 ಕಾಮಗಾರಿ ಆರಂಭಿಸಲು ಕೆ–ರೈಡ್ ಉತ್ಸುಕತೆ ತೋರಿಸಿದೆ. ಆದ್ಯತಾ ಕಾರಿಡಾರ್ ಎಂದು ಹೇಳಿಕೊಂಡಿದೆ. 

2019ರ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಯನ್ನು ಉಲ್ಲೇಖಿಸಲಾಯಿತು. 2020ರ ಅಕ್ಟೋಬರ್‌ 21ರಂದು ರೈಲ್ವೆ ಮಂಡಳಿಯಿಂದ ಇದಕ್ಕೆ ಅನುಮೋದನೆಯೂ ದೊರೆಯಿತು.

ಯೋಜನೆ ಅನುಷ್ಠಾನದ ಹೊಣೆ ಹೊತ್ತಿರುವ ಕೆ–ರೈಡ್, ಈ ಯೋಜನೆಯನ್ನು ನಾಲ್ಕು ಕಾರಿಡಾರ್‌ಗಳನ್ನಾಗಿ ವಿಂಗಡಿಸಿದೆ. ‌2,190 ದಿನಗಳ (6 ವರ್ಷ) ಕಾಲಮಿತಿ ನಿಗದಿ ಮಾಡಿಕೊಂಡಿದೆ. ಅದರಲ್ಲಿ ಈಗ ಶೇ 40ರಷ್ಟು ದಿನಗಳು ಪೂರ್ಣಗೊಂಡಿವೆ. ಆದರೆ, ಕಾಮಗಾರಿ ಭೌತಿಕವಾಗಿ ಶೇ1ರಷ್ಟು ಮಾತ್ರ ಪ್ರಗತಿ ಕಂಡಿದೆ ಎಂದು ರೈಲ್ವೆ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಅಂಕಿ–ಅಂಶ

₹15767 ಕೋಟಿಯೋಜನೆಯ ಒಟ್ಟು ಮೊತ್ತ 20:20:60ಕೇಂದ್ರ ರಾಜ್ಯ ಮತ್ತು ಬಾಹ್ಯ ಹಣಕಾಸು ಸಂಸ್ಥೆಗಳು ಭರಿಸುವ ಪಾಲು 2020ರ ಅ. 21ಯೋಜನೆಗೆ ಅನುಮೋದನೆ ದೊರೆತ ದಿನಾಂಕ 2190ಯೋಜನೆ ಪೂರ್ಣಗೊಳಿಸಲು ನಿಗದಿ ಮಾಡಿರುವ ದಿನಗಳು 1244ಬಾಕಿ ಇರುವ ದಿನಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.