ADVERTISEMENT

ಬೆಂಗಳೂರು | ಸನ್ ರೂಫ್ ತೆರೆದು ನಿಂತಿದ್ದ ಬಾಲಕನ ತಲೆಗೆ ಬಡಿದ ಕಬ್ಬಿಣದ ಕಮಾನು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 15:31 IST
Last Updated 7 ಸೆಪ್ಟೆಂಬರ್ 2025, 15:31 IST
   

ಬೆಂಗಳೂರು: ಚಲಿಸುತ್ತಿದ್ದ ಕಾರಿನ ಸನ್ ರೂಫ್ ತೆರೆದು ನಿಂತಿದ್ದ ಬಾಲಕನ ತಲೆಗೆ ಹೈಟ್ ರಿಸ್ಟ್ರಿಕ್ಷನ್ ಬ್ಯಾರಿಯರ್ (ಕಬ್ಬಿಣದ ಕಮಾನು) ಬಡಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿದ್ಯಾರಣ್ಯಪುರ– ಜಿಕೆವಿಕೆ ರಸ್ತೆಯಲ್ಲಿ ನಡೆದಿದೆ.

ಘಟನೆಯಲ್ಲಿ ಬಾಲಕನ ತಲೆಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗೊತ್ತಾಗಿದೆ. 

ಸೆಪ್ಟೆಂಬರ್ 6ರಂದು ಮಧ್ಯಾಹ್ನ 1.10ರ ಸುಮಾರಿಗೆ ಜಿಕೆವಿಕೆ ರಸ್ತೆಯಲ್ಲಿ ಕೆಂಪು ಬಣ್ಣದ ಕಾರೊಂದರಲ್ಲಿ ಬಾಲಕನೊಬ್ಬ ಸನ್ ರೂಫ್ ತೆರೆದು ತಲೆ ಹೊರಗೆ ಹಾಕಿ ನಿಂತಿದ್ದಾನೆ. ಕಾರು ಚಲಿಸುವಾಗ ಕಬ್ಬಿಣದ ಕಮಾನು ಬಾಲಕನ ತಲೆಗೆ ಬಡಿದ ಪರಿಣಾಮ, ಕಾರಿನೊಳಗೆ ಕುಸಿದು ಬಿದ್ದಿದ್ದಾನೆ. 

ADVERTISEMENT

ಈ ಘಟನೆಯ ದೃಶ್ಯ ಮತ್ತೊಂದು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ವಿಡಿಯೊ ಪರಿಶೀಲನೆ ನಡೆಸಿದ್ದು, ಘಟನೆಯ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಉತ್ತರ ವಿಭಾಗದ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ನೆಟ್ಟಿಗರು, ಕಾರುಗಳಲ್ಲಿ ಸನ್ ರೂಫ್ ತೆರೆದು ಮಕ್ಕಳನ್ನು ನಿಲ್ಲಿಸುವ ಮುನ್ನ ಎಚ್ಚರ ವಹಿಸಬೇಕು. ಇಲ್ಲವಾದರೆ ಮಕ್ಕಳು ಅಪಾಯದಲ್ಲಿ ಸಿಲುಕಿ ಅವರ ಪ್ರಾಣಕ್ಕೆ ಸಂಚಕಾರ ಉಂಟಾಗಬಹುದು ಎಂದು ಸಲಹೆ ನೀಡಿದ್ದಾರೆ.

ಸನ್ ರೂಫ್‌ ತೆರದು ನಿಂತು ಹುಚ್ಚಾಟದಲ್ಲಿ ತೊಡಗಿದ್ದ ಕೆಲವರಿಗೆ ನಗರ ಸಂಚಾರ ಪೊಲೀಸರು ದಂಡ ವಿಧಿಸುವುದರ ಜತೆಗೆ ಅಪಾಯದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.