ADVERTISEMENT

ಕಸ ನಿರ್ವಹಣೆ ಕಂಪನಿ: ಸಿಇಒ ನೇಮಕಾತಿಗೆ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 4:16 IST
Last Updated 17 ಜೂನ್ 2021, 4:16 IST

ಬೆಂಗಳೂರು: ‘ಬೆಂಗಳೂರು ಕಸ ನಿರ್ವಹಣೆ ನಿಯಮಿತ’ ಕಂಪನಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ನೇಮಕಾತಿ ಪ್ರಕ್ರಿಯೆಯನ್ನು ನಿರ್ವಹಿಸಲು ಆರು ಮಂದಿ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ನಗರಾಭಿವೃದ್ಧಿ ಇಲಾಖೆ ಬುಧವಾರ ರಚಿಸಿದೆ.

ಸರ್ಕಾರದ ಹೆಚ್ಚುವರಿ ಮುಖ್ಯ ಆಯುಕ್ತ/ಅಭಿವೃದ್ಧಿ ಆಯುಕ್ತರು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಬಿಬಿಎಂಪಿಯ ಮುಖ್ಯ ಆಯುಕ್ತರು, ಕಸ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತರು, ನಗರದ ಬಡತನ ನಿರ್ಮೂಲನೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ರಮೇಶ್‌ ಎಂ.ಕೆ, ಬೆಂಗಳೂರಿನ ಕಸ ನಿರ್ವಹಣೆ ರೌಂಡ್‌ ಟೇಬಲ್‌ ಸಂಸ್ಥೆಯ ಸಂಸ್ಥಾಪಕಿ ಸಂಧ್ಯಾ ನಾರಾಯಣನ್‌ ಈ ಸಮಿತಿಯ ಸದಸ್ಯರಾಗಿದ್ದಾರೆ. ಬಿಬಿಎಂಪಿಯ ಕಸ ನಿರ್ವಹಣೆ ವಿಭಾಗದ ಜಂಟಿ ಆಯುಕ್ತರು ಈ ಸಮಿತಿಯ ಸದಸ್ಯ ಕಾರ್ಯದರ್ಶಿ ಆಗಿದ್ದಾರೆ.

ಬೆಂಗಳೂರು ಕಸ ನಿರ್ವಹಣೆ ನಿಯಮಿತ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಲು ಬಯಸುವ ಉದ್ಯೋಗಾಕಾಂಕ್ಷಿಗಳ ಸಂದರ್ಶನವನ್ನುಈ ಸಮಿತಿಯು ನಡೆಸಲಿದೆ. ಸೂಕ್ತ ಅಭ್ಯರ್ಥಿಗಳ ವಿವರಗಳನ್ನು ಕಂಪನಿಯ ಆಡಳಿತ ಮಂಡಳಿಯ ಮುಂದೆ ಮಂಡಿಸಲಿದೆ.

ADVERTISEMENT

‘ಬೆಂಗಳೂರು ಕಸ ನಿರ್ವಹಣೆ ನಿಯಮಿತ’ ಕಂಪನಿಯನ್ನು ಕೇಂದ್ರ ಸರ್ಕಾರದ ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯದಲ್ಲಿ ನೋಂದಾಯಿಸಲಾಗಿದೆ. 2021ರ ಮೇ 22ರಿಂದ ಈ ಕಂಪನಿ ಅಸ್ತಿತ್ವಕ್ಕೆ ಬಂದಿದೆ. ಹೊಸ ಕಾರ್ಯ ನಿರ್ವಾಹಕ ಅಧಿಕಾರಿಯ ನೇಮಕಾತಿ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳ್ಳಲಿದ್ದು, ಜುಲೈ 1ರಿಂದ ಕಂಪನಿ ಕಾರ್ಯರಂಭಗೊಳಿಸಲಿದೆ. ಬಳಿಕ ಬೆಂಗಳೂರಿನ ಕಸ ನಿರ್ವಹಣೆಯ ಹೊಣೆ ಈ ಕಂಪನಿಯದ್ದಾಗಲಿದೆ’ ಎಂದು ನಗರಾಭಿವೃದ್ಧಿ ಇಲಾಖೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.