ಬೆಂಗಳೂರು: ಬೆಂಗಳೂರು ನಗರದಾಚೆಗೂ ಮಾಹಿತಿ ತಂತ್ರಜ್ಞಾನ ಉದ್ಯಮ–ಉದ್ಯೋಗ ವಿಸ್ತರಣೆಗೆ ಒತ್ತು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ‘ನಿಪುಣ ಕರ್ನಾಟಕ’ ಯೋಜನೆ ಜಾರಿಗೊಳಿಸಲು ಮುಂದಾಗಿದೆ.
ಸ್ಥಳೀಯ ಆರ್ಥಿಕ ಉತ್ತೇಜನ ಕಾರ್ಯಕ್ರಮವನ್ನು (ಲೀಪ್) ಉನ್ನತೀಕರಿಸಿ ಎರಡನೇ ಹಂತದ ನಗರಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಉದ್ಯಮಗಳೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿದೆ.
ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯು ಆಯೋಜಿಸಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಎರಡನೇ ದಿನವಾದ ಬುಧವಾರ ಬೆಂಗಳೂರಿನ ಆಚೆಗಿನ ಕರ್ನಾಟಕದ ಅಭಿವೃದ್ದಿ ಕುರಿತು ಹೆಚ್ಚು ಚರ್ಚೆ ನಡೆಯಿತು. ಮುಂದಿನ ಹತ್ತು ವರ್ಷ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನದ ನಂತರ ಕರ್ನಾಟಕದಲ್ಲಿ ಡೀಪ್ ಟೆಕ್ ಪ್ರಗತಿಯ ಕಾಲ ಎಂದು ಪ್ರಕಟಿಸಲಾಯಿತು.
ನಿಪುಣ ಯೋಜನೆಯಡಿ ಪ್ರತಿಷ್ಠಿತ ಕಾರ್ಪೋರೇಟ್‌ಗಳಾದ ಕ್ಯಾಪ್‌ಜೆಮಿನಿ, ವೆಲ್ಸ್ ಫರ್ಗೊ, ಸ್ಟ್ಯಾಂಡರ್ಡ್ ಚಾರ್ಟರ್ಡ್ ಮತ್ತು ಸುಮೆರಿ ಕಂಪನಿಗಳ ಉದ್ಯೋಗಿಗಳು ತರಬೇತಿ ನೀಡಲಿದ್ದಾರೆ. ಐಸಿಟಿ ಅಕಾಡೆಮಿ, ಎಆರ್‌ಡಬ್ಲ್ಯುಎಸ್, ಎಫ್‌ಯುಇಎಲ್ ಮತ್ತು ಎಐಎಸ್‌ಇಸಿಟಿ- ತರಬೇತಿ ಪಾಲುದಾರ ಸಂಸ್ಥೆಗಳಾಗಿವೆ. 4,000 ಯುವ ಜನರ ವೃತ್ತಿ ಕೌಶಲ ಹೆಚ್ಚಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ಶೃಂಗಸಭೆಯಲ್ಲಿ ಘೋಷಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ‘ಬೆಂಗಳೂರಿನ ಆಚೆಗೆ ಮಾಹಿತಿ ತಂತ್ರಜ್ಞಾನ ಉದ್ಯಮವನ್ನು ವಿಸ್ತರಿಸಲು ಕಾರ್ಯಕ್ರಮ ರೂಪಿಸಿದ್ದೇವೆ. ಇದರ ಭಾಗವಾಗಿಯೇ ಕೌಶಲ ತರಬೇತಿ ಹಾಗೂ ಉದ್ಯೋಗ ಒದಗಿಸುವ ನಿಪುಣ, ಲೀಪ್ ಯೋಜನೆಗೆ ಒತ್ತು ನೀಡಲಾಗಿದೆ. ಕೃತಕ ಬುದ್ಧಿಮತ್ತೆ, ಸೈಬರ್ ಸುರಕ್ಷತೆ, ಡೇಟಾ ಸೈನ್ಸ್ ಕ್ಷೇತ್ರಗಳಲ್ಲಿ ತರಬೇತಿ ನೀಡಿ ಹೆಚ್ಚಿನ ಉದ್ಯೋಗ ನಿರೀಕ್ಷಿಸಲಾಗಿದೆ’ ಎಂದು ತಿಳಿಸಿದರು.
ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಮಾತನಾಡಿ, ‘ಐದು ಕಡೆಗಳಲ್ಲಿ ಐಟಿ ಉದ್ಯಮ ವಿಸ್ತರಿಸುವ ಯೋಜನೆಗೆ ಒಪ್ಪಂದವಾಗಿದೆ. ₹2,600 ಕೋಟಿ ಹೂಡಿಕೆಯಾಗಲಿದ್ದು, 3,500 ಉದ್ಯೋಗ ಲಭಿಸಲಿದೆ. 450ಕ್ಕೂ ಹೆಚ್ಚು ನವೋದ್ಯಮಗಳು ಬೆಂಗಳೂರಿನ ಆಚೆಗಿನ ಮಂಗಳೂರು, ಮೈಸೂರು, ಹುಬ್ಬಳ್ಳಿ – ಧಾರವಾಡ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇನ್ನಷ್ಟು ಉತ್ತೇಜನ ನೀಡಲಾಗುವುದು’ ಎಂದರು.
ತುಮಕೂರಿನಲ್ಲಿ ಎಚ್‌ಡಿಐನಿಂದ ಪಿಸಿಬಿ ಉತ್ಪಾದನಾ ಘಟಕ. ₹ 1,500 ಕೋಟಿ ಹೂಡಿಕೆ, 1,000 ಉದ್ಯೋಗ ತುಮಕೂರಿನಲ್ಲಿ ಪಿಸಿಬಿ ಉತ್ಪಾದನೆ ಘಟಕ, 300 ಉದ್ಯೋಗ ಸೃಷ್ಟಿ, ₹250 ಕೋಟಿ ಹೂಡಿಕೆ. ಧಾರವಾಡದಲ್ಲಿ ಸೋಯೋ ಸಂಸ್ಥೆಯಿಂದ ಎಲೆಕ್ಟ್ರಿಕ್ ವಾಹನ ವಿದ್ಯುತ್ ಉತ್ಪಾದನೆ ಘಟಕ, 700 ಉದ್ಯೋಗ ನಿರೀಕ್ಷೆ ಗೌರಿಬಿದನೂರಿನಲ್ಲಿ ಲೀಥಿಯಂ ಬ್ಯಾಟರಿ ಮರುಬಳಕೆ ಘಟಕ, 600 ಉದ್ಯೋಗ ಅವಕಾಶ ಚಿಕ್ಕಬಳ್ಳಾಪುರದಲ್ಲಿ ಡ್ರೋನ್ ಟೆಸ್ಟಿಂಗ್ ಘಟಕ ಸ್ಥಾಪನೆ, ₹100 ಕೋಟಿ ಹೂಡಿಕೆ. 500 ಮಂದಿಗೆ ಉದ್ಯೋಗ ಸೃಷ್ಟಿ. ಕಣ್ಣು ಕಳೆದುಕೊಂಡವರಿಗೆ ದೃಷ್ಟಿ ನೀಡುವ ಐ ಸ್ಟೆಮ್ ಸಂಸ್ಥೆಯ ಸಂಶೋಧನೆಗೆ ಒತ್ತು, ಕಡಿಮೆ ದರದಲ್ಲಿ ಸೇವೆ.
ಚೀನಾ ಅಮೆರಿಕಕ್ಕೆ ಹೋಲಿಸಿದರೆ ಭಾರತ ಎಐ ಹಾಗೂ ಡೀಫ್‌ಟೆಕ್ ತಂತ್ರಜ್ಞಾನ ವಲಯದಲ್ಲಿ ಹಿಂದೆ ಇದೆ. ಇದಕ್ಕಾಗಿಯೇ ಡೇಟಾ ಕೇಂದ್ರವನ್ನು ಆರಂಭಿಸಿ ಒಂದೆಡೆ ಮಾಹಿತಿ ಕಲೆ ಹಾಕಲು ಒತ್ತು ನೀಡುತ್ತಿದ್ದೇವೆ.ಅಭಿಷೇಕ್ ಸಿಂಗ್ ಹೆಚ್ಚುವರಿ ಕಾರ್ಯದರ್ಶಿ ಭಾರತ ಸರ್ಕಾರ
ಚಂದ್ರಯಾನ 4 ಮತ್ತು 5ರ ಯೋಜನೆಯನ್ನು ಮುಂದಿನ ಮೂರು ದಶಕದಲ್ಲಿ ಜಾರಿಗೊಳಿಸಲು ಇಸ್ರೊ ಅಣಿಯಾಗುತ್ತಿದೆ. ಬಾಹ್ಯಾಕಾಶ ವಲಯದಲ್ಲಿ ವಿಶ್ವದಲ್ಲೇ ಮುಂಚೂಣಿಯ ಮೂರನೇ ದೇಶವಾಗುವತ್ತ ತಾಂತ್ರಿಕವಾಗಿ ಬೆಳೆಯುತ್ತಿದೆವಿ.ನಾರಾಯಣನ್ ಇಸ್ರೊ ಅಧ್ಯಕ್ಷ ಬೆಂಗಳೂರು
ತಂತ್ರಜ್ಞಾನ ಶೃಂಗಸಭೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಕಸದ ಬುಟ್ಟಿಯೂ ಆಕರ್ಷಿಸುತ್ತಿದೆ. ಈ ಎಐ ಆಧಾರಿತ ಯಂತ್ರದಲ್ಲಿ 6 ಬುಟ್ಟಿಗಳಿವೆ. ನೀವು ಬಿಸಾಕಬೇಕಿರುವ ವಸ್ತುವನ್ನು ಆ ಯಂತ್ರದ ಮುಂದೆ ಹಿಡಿದರೆ ಸಾಕು ನಿಮ್ಮ ಕೈಯಲ್ಲಿ ಪ್ಲಾಸ್ಟಿಕ್ ಇದೆಯೋ ಗಾಜಿನ ಬಾಟಲಿ ಇದೆಯೋ ಹಸಿ ಪದಾರ್ಥವಿದೆಯೋ ಎಂಬುದನ್ನು ಎಐ ಸೆನ್ಸರ್ ಗುರುತಿಸಿ ಪೂರಕವಾದ ಬುಟ್ಟಿಯ ಬಾಗಿಲು ತೆರೆಯುತ್ತದೆ.
‘ಬೆಂಗಳೂರಿನ ಎಚ್ಎಸ್ಆರ್ ಲೇಔಟ್‌ನ ಎಐ ಸ್ಮಾರ್ಟ್ ಬಿನ್ ಎಂಬ ಕಂಪನಿ ಅಭಿವೃದ್ಧಿಪಡಿಸಿದೆ. ಪೇಟೆಂಟ್‌ನೊಂದಿಗೆ ಮಾರುಕಟ್ಟೆಗೆ ಬಿನ್ ಪ್ರೊ ಅನ್ನು ತರುತ್ತಿದ್ದು ಮೊದಲ ಹಂತದಲ್ಲಿ ವಿಮಾನ ನಿಲ್ದಾಣ ರೈಲ್ವೆ ನಿಲ್ದಾಣ ಮಾಲ್ ಗುರಿಯಾಗಿಸಿಕೊಂಡಿದೆ. 400 ಲೀಟರ್ ಸಾಮರ್ಥ್ಯದ ಬಿನ್ ಪ್ರೊ ಬೆಲೆ ₹ 40ಸಾವಿರದಿಂದ ₹ 1.5 ಲಕ್ಷ ಆಗಲಿದೆ’ ಎಂದು ಸಂಸ್ಥೆಯ ಸಂಸ್ಥಾಪಕ ಅನುಪಮ್ ಮಹಾಜನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.