ADVERTISEMENT

ಮಕ್ಕಳ ಮನದ ಮೂಸೆಯಲ್ಲಿ ಮೂಡಿದ ಮಾದರಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 2:11 IST
Last Updated 19 ನವೆಂಬರ್ 2019, 2:11 IST
ಮಾಲಿನ್ಯ ನಿಯಂತ್ರಣ ಕುರಿತು ರೂಪಿಸಿದ ರೊಬೋಟಿಕ್‌ ಮಾದರಿಯ ಬಗ್ಗೆ ವಿದ್ಯಾರ್ಥಿನಿಯೊಬ್ಬರು ಸಂದರ್ಶಕರಿಗೆ ವಿವರಿಸಿದರು  –- ಪ್ರಜಾವಾಣಿ ಚಿತ್ರ
ಮಾಲಿನ್ಯ ನಿಯಂತ್ರಣ ಕುರಿತು ರೂಪಿಸಿದ ರೊಬೋಟಿಕ್‌ ಮಾದರಿಯ ಬಗ್ಗೆ ವಿದ್ಯಾರ್ಥಿನಿಯೊಬ್ಬರು ಸಂದರ್ಶಕರಿಗೆ ವಿವರಿಸಿದರು  –- ಪ್ರಜಾವಾಣಿ ಚಿತ್ರ   

ಬೆಂಗಳೂರು: ಒಂದೆಡೆ, ದೇಶ ವಿದೇಶಗಳ ನವೋದ್ಯಮಿಗಳು, ಪ್ರಸಿದ್ಧ ಕಂಪನಿಗಳ ಪ್ರತಿನಿಧಿಗಳು ತಮ್ಮ ಸೇವೆಗಳು ಹಾಗೂ ಉತ್ಪನ್ನಗಳ ಬಗ್ಗೆ ಸಂದರ್ಶಕರಿಗೆ ವಿವರಿಸುತ್ತಿದ್ದರೆ, ಇನ್ನೊಂದೆಡೆ ಶಾಲಾ ವಿದ್ಯಾರ್ಥಿಗಳು ಅವರಿಗಿಂತಲೂ ಹೆಚ್ಚು ಹುಮ್ಮಸ್ಸಿನಿಂದ ತಾವು ರೂಪಿಸಿದ ಸಾಧನಗಳ ಬಗ್ಗೆ ವರ್ಣಿಸುತ್ತಿದ್ದರು.

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ವಸ್ತುಪ್ರದರ್ಶನ ಪ್ರಾಂಗಣದಲ್ಲಿ ಸೋಮವಾರ ವಿದ್ಯಾರ್ಥಿಗಳು ಸಿದ್ಧಪಡಿಸಿದ ರೋಬೊಗಳು, ಸಾಧನಗಳ ಮಾದರಿಗಳೂ ಗಮನ ಸೆಳೆದವು.

ಕುಳಿತಲ್ಲಿಂದ ಏಳಲಾಗದಂತಹ ಅಂಗವಿಕಲರೂ ಕೂಡ ಓಡಾಡಿಕೊಂಡು ಸಣ್ಣಪುಟ್ಟ ಕೆಲಸ ಮಾಡಿಕೊಳ್ಳಲು ನೆರವಾಗುವ ಸಾಧನವನ್ನು ವಿದ್ಯಾರ್ಥಿಗಳಾದ ಧೀರಜ್‌, ನಿಶಿಕಾಂತ್‌ ಹಾಗೂ ಪವನ್‌ ರೂಪಿಸಿದ್ದರು. ಈ ಸಾಧನ ಬಳಸಿ ಹೇಗೆ ಮುಂದಕ್ಕೆ ಹಿಂದಕ್ಕೆ ಹಾಗೂ ಅಡ್ಡಕ್ಕೆ ಚಲಿಸಬಹುದು ಎಂಬುದನ್ನು ವರ್ಣಿಸಿದರು. ಮದರ್‌ಬೋರ್ಡ್‌ ನೆರವಿನಿಂದ ಈ ಸಾಧನ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ವಿವರಿಸಿದರು.

ADVERTISEMENT

ವಾಯುಮಾಲಿನ್ಯ ಪ್ರಮಾಣ ಮಿತಿ ಮೀರಿ ಹೆಚ್ಚಾದರೆ ತಕ್ಷಣ ಮುನ್ಸೂಚನೆ ನೀಡಿ, ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಸ್ವಯಂಚಾಲಿತ ವ್ಯವಸ್ಥೆ ಬಗ್ಗೆ ಸರ್ಜಾಪುರ ರಸ್ತೆಯ ಬಿಜಿಎಸ್ ಗ್ಲೋಬಲ್‌ ಸ್ಕೂಲ್‌ನ ವಿದ್ಯಾರ್ಥಿಗಳು ಸಿದ್ಧಮಾದರಿಯೊಂದನ್ನು ಪ್ರದರ್ಶಿಸಿದರು. ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಸೇವಂತಿ ವಾಯುಮಾಲಿನ್ಯದಿಂದ ನವದೆಹಲಿಯಲ್ಲಿ ಇತ್ತೀಚೆಗೆ ಉಂಟಾಗಿರುವ ಸಂಕೀರ್ಣ ಪರಿಸ್ಥಿತಿಯನ್ನು ಕಟ್ಟಿಕೊಡುತ್ತಲೇ ಪರಿಸರ ಮಾಲಿನ್ಯ ತಡೆಯುವ ಕುರಿತು ತಾವು ಸಹಪಾಠಿಗಳ ಜೊತೆ ಸೇರಿ ಅಭಿವೃದ್ಧಿ ಪಡಿಸಿದ ಸ್ವಯಂಚಾಲಿತ ವ್ಯವಸ್ಥೆ ಬಗ್ಗೆ ವಿವರಿಸಿದರು.

ಈ ವಿದ್ಯಾರ್ಥಿಗಳಿಗೆಲ್ಲ ಪ್ರೇರಣೆಯಾಗಿರುವುದು ಕ್ಯುಟಿಪಿ ರೊಬೋಟಿಕ್‌ ಸಂಸ್ಥೆ. ಸಾಫ್ಟ್‌ವೇರ್‌ ಎಂಜಿನಿಯರ್‌ ಆಂಟೊ ಜೆರ್ಲಿನ್‌ ಅವರ ಕನಸಿನ ಕೂಸಾದ ಈ ಸಂಸ್ಥೆ ವಿದ್ಯಾರ್ಥಿಗಳು ರೋಬೊಟಿಕ್ ತಂತ್ರಜ್ಞಾನದ ಬಗ್ಗೆ ಒಲವು ಬೆಳೆಸಿಕೊಳ್ಳುವಂತೆ ಮಾಡುವ ಸಲುವಾಗಿ ದಕ್ಷಿಣ ಭಾರತದ 45ಕ್ಕೂ ಅಧಿಕ ಶಾಲೆಗಳಲ್ಲಿ ತರಬೇತಿ ನೀಡುತ್ತಿದೆ.

‘ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದಲ್ಲಿರುವ ವಿಚಾರಗಳನ್ನು ಓದಿ ಕಲಿಯುವುದಕ್ಕಿಂತ ಪ್ರಾಯೋಗಿಕ ಅನುಭವ ಪಡೆದುಕೊಳ್ಳಬೇಕು. ಆಗ ಅವರಿಗೆ ವಿಷಯಗಳ ಬಗ್ಗೆ ಆಸಕ್ತಿ ಹೆಚ್ಚುತ್ತದೆ. ನಾವು ಪಠ್ಯ ವಿಷಯಗಳಿಗೆ ಪೂರಕವಾಗಿ ರೋಬೋಟಿಕ್‌ ಮಾದರಿಗಳನ್ನು ನಿರ್ಮಿ
ಸುವ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದೇವೆ’ ಎಂದು ಆಂಟೊ ಜರ್ಲಿನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಸಂಸ್ಥೆಯ ನುರಿತ ಶಿಕ್ಷಕರು ನಮ್ಮ ಜೊತೆ ಒಪ್ಪಂದ ಮಾಡಿಕೊಂಡ ಶಾಲೆಗಳಿಗೆ ವಾರಕ್ಕೊಮ್ಮೆ ತೆರಳಿ ತರಗತಿ ನಡೆಸುತ್ತಾರೆ. ವಿದ್ಯಾರ್ಥಿಗಳು ತಮ್ಮ ಅನುಭವಕ್ಕೆ ನಿಲುಕುವ ವಿಚಾರಗಳ ಬಗ್ಗೆ ವೈಜ್ಞಾನಿಕವಾಗಿ ಯೋಚಿಸುವಂತೆ ಪ್ರೇರೇಪಿಸುತ್ತಾರೆ. ಸಮಸ್ಯೆಗಳಿಗೆ ಅವರು ಕಂಡುಕೊಳ್ಳುವ ಪರಿಹಾರಗಳನ್ನು ರೊಬೋಟಿಕ್‌ ಮಾದರಿ ರೂಪದಲ್ಲಿ ಕಾರ್ಯಗತಗೊಳಿಸಲು ಅಗತ್ಯವಿರುವ ಪರಿಕರಗಳನ್ನು ಒಳಗೊಂಡ ಕಿಟ್‌ಗಳನ್ನು ಒದಗಿಸುತ್ತೇವೆ. ಮದರ್‌ಬೋರ್ಡ್‌ಗಳನ್ನು ಅಭಿವೃದ್ಧಿಪಡಿಸಲು ನೆರವಾಗುತ್ತೇವೆ’ ಎಂದರು.

‘ಕಲಬುರ್ಗಿ, ಬೀದರ್‌, ಬೆಳಗಾವಿ, ಬಳ್ಳಾರಿಯಂತಹ ಜಿಲ್ಲೆಗಳ ಶಾಲೆಗಳೂ ಸೇರಿ 20ಸಾವಿರಕ್ಕೂ ಅಧಿಕ ಮಕ್ಕಳಿಗೆ ನಾವು ತರಬೇತಿ ನೀಡಿದ್ದೇವೆ’ ಎಂದರು.

ರೋಬೋಟಿಕ್‌ ಸ್ಪರ್ಧೆ

ವಿದ್ಯಾರ್ಥಿಗಳಿಗೆ ರೋಬೋಟಿಕ್‌ ತಂತ್ರಜ್ಞಾನದ ಬಗ್ಗೆ ಕ್ಯೂಟಿಪಿ ಸಂಸ್ಥೆ ತರಬೇತಿ ಕಾರ್ಯಾಗಾ
ರವನ್ನು ಸೋಮವಾರ ಹಮ್ಮಿಕೊಂಡಿತ್ತು. ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗಾಗಿ ಸಂಸ್ಥೆಯು ಶೃಂಗಸಭೆಯಲ್ಲಿ ಸ್ಪರ್ಧೆಯನ್ನೂ ಏರ್ಪಡಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.