ADVERTISEMENT

ನ. 17ರಿಂದ ಬೆಂಗಳೂರು ತಾಂತ್ರಿಕ ಶೃಂಗ ಸಭೆ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 8:20 IST
Last Updated 9 ನವೆಂಬರ್ 2021, 8:20 IST
ಡಾ.ಸಿ.ಎನ್. ಅಶ್ವತ್ಥನಾರಾಯಣ
ಡಾ.ಸಿ.ಎನ್. ಅಶ್ವತ್ಥನಾರಾಯಣ   

ಬೆಂಗಳೂರು: ನವೆಂಬರ್ 17ರಿಂದ 19ರವರೆಗೆ ಬೆಂಗಳೂರು ತಾಂತ್ರಿಕ ಶೃಂಗ ಸಭೆ ನಡೆಯಲಿದೆ. 30 ರಾಷ್ಟ್ರಗಳ ಪ್ರತಿನಿಧಿಗಳು ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಭವಿಷ್ಯಕ್ಕೆ ಚಾಲನೆ ಎಂಬ ಪರಿಕಲ್ಪನೆ ಅಡಿಯಲ್ಲಿ ನಡೆಯುವ ಸಮ್ಮೇಳನವನ್ನು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ನ.17ರಂದು ಉದ್ಘಾಟಿಸುವರು. 300ಕ್ಕೂ ಹೆಚ್ಚು ಮಂದಿ ಉಪನ್ಯಾಸಕರು ಸಮ್ಮೇಳನದಲ್ಲಿ ಮಾತನಾಡುವರು' ಎಂದರು.

ಈ ಬಾರಿಯೂ ವರ್ಚ್ಯುಯಲ್ ರೂಪದಲ್ಲಿ ಶೃಂಗ ಸಭೆ ನಡೆಯಲಿದೆ. 5,000ಕ್ಕೂ ಹೆಚ್ಚು ನವೋದ್ಯಮಗಳು ಸಭೆಯಲ್ಲಿ ಭಾಗವಹಿಸಲಿವೆ. 300ಕ್ಕೂ ಹೆಚ್ಚು ಪ್ರದರ್ಶಕರು ಮತ್ತು 20,000ಕ್ಕೂ ಹೆಚ್ಚು ವ್ಯಾಪಾರ ವಹಿವಾಟುದಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ವಿವರಿಸಿದರು.

ADVERTISEMENT

ಕಿಂಡ್ರಿಲ್, ಇನ್ಫೋಸಿಸ್, ಬಯೋಕಾನ್, ರಝೋರ್ ಪೇ, ರಾಬರ್ಟ್‌ ಬಾಷ್, ಟೆಲ್ ಸ್ಟ್ರಾ, ಎನ್ಆರ್ ಡಬ್ಲ್ಯು ಗ್ಲೋಬಲ್ ಬ್ಯುಸಿನೆಸ್, ಲಾರೀಸ್ ಬಯೋ, ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ, ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ ಮತ್ತು ಆಸ್ಟ್ರೇಲಿಯಾ ಸರ್ಕಾರ ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿವೆ ಎಂದು ಸಚಿವರು ಹೇಳಿದರು.

ರಾಜ್ಯ ಮಾಹಿತಿ ತಂತ್ರಜ್ಞಾನ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಮಾತನಾಡಿ, 'ಭವಿಷ್ಯಕ್ಕಾಗಿ ನಾವು ಹೇಗೆ ಸಿದ್ಧರಾಗಬೇಕು ಎಂಬ ಪಾಠವನ್ನು ಕೋವಿಡ್ ಕಲಿಸಿದೆ. ಚಿಕಿತ್ಸೆಯಲ್ಲಿನ ಹೊಸ ಕ್ರಮಗಳ ಶೋಧನೆ ಮತ್ತು ಲಸಿಕೆ ಅಭಿವೃದ್ಧಿ ಹಾಗೂ ಉತ್ಪಾದನೆ ಇದಕ್ಕೆ ಉತ್ತಮ ಉದಾಹರಣೆ. ಈ ದಿಸೆಯಲ್ಲಿ ಮತ್ತಷ್ಟು ಮುಂದೆ ಸಾಗುವ ಕುರಿತು ಶೃಂಗ ಸಭೆಯಲ್ಲಿ ಚರ್ಚೆ ನಡೆಯಲಿದೆ' ಎಂದರು.

ಜೈವಿಕ ತಂತ್ರಜ್ಞಾನ ವಿಷನ್ ಗ್ರೂಪ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಮಾತನಾಡಿ, 'ನವೋದ್ಯಮಗಳಿಗೆ ಈ ಸಮ್ಮೇಳನ ಅತ್ಯುತ್ತಮ ವೇದಿಕೆಯಾಗಲಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.