ADVERTISEMENT

ಮಹಿಳಾ ಟೆಕಿಗೆ ₹1.53 ಕೋಟಿ ವಂಚನೆ: ದಂಪತಿ ಸೇರಿ ಮೂವರ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 23:30 IST
Last Updated 18 ಜನವರಿ 2026, 23:30 IST
<div class="paragraphs"><p>ಎಫ್‌ಐಆರ್</p></div>

ಎಫ್‌ಐಆರ್

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ, ₹1.53 ಕೋಟಿ ಪಡೆದು ಮಹಿಳಾ ಟೆಕಿಗೆ ವಂಚಿಸಿರುವ ಘಟನೆ ನಡೆದಿದೆ.

ADVERTISEMENT

ವೈಟ್‌ಫೀಲ್ಡ್‌ ನಿವಾಸಿ, 29 ವರ್ಷದ ಯುವತಿ ನೀಡಿದ ದೂರು ಆಧರಿಸಿ ವಿಜಯ್ ರಾಜ್‌ ಗೌಡ, ಆತನ ಪತ್ನಿ ಸೌಮ್ಯಾ ಮತ್ತು ತಂದೆ ಯು.ಜೆ. ಬೋರೇಗೌಡ ಎಂಬುವವರ ವಿರುದ್ಧ ಕೆಂಗೇರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

‘2024ರ ಮಾರ್ಚ್‌ನಲ್ಲಿ ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ವಿಜಯ್ ರಾಜ್ ಪರಿಚಯವಾಯಿತು. ವಿ.ಆರ್‌.ಜಿ ಎಂಟರ್‌ಪ್ರೈಸಸ್‌ ಎಂಬ ಕಂಪನಿ ಇದ್ದು, ರಾಜಾಜಿನಗರ ಮತ್ತು ಸದಾಶಿವನಗರದಲ್ಲಿ ಮನೆಗಳಿವೆ ಎಂದು ಹೇಳಿದ್ದ. ಬೆಂಗಳೂರಿನಲ್ಲಿ ₹715 ಕೋಟಿ ಆಸ್ತಿ ಇದೆ ಎಂದು ನಂಬಿಸಿ, ಒಟ್ಟಿಗೆ ಸೇರಿ ಬ್ಯುಸಿನೆಸ್‌ ಮಾಡುವ ನೆಪ ಹೇಳಿ ಹಂತ ಹಂತವಾಗಿ ₹1.75 ಕೋಟಿ ಪಡೆದುಕೊಂಡಿದ್ದ’ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

‘ಕೆಂಗೇರಿ ಬಳಿ ನನ್ನನ್ನು ಕರೆಯಿಸಿಕೊಂಡು ತನ್ನ ಕುಟುಂಬದವರಿಗೆ ಪರಿಚಯಿಸಿದ್ದ. ಪರಿಚಯ ಗಟ್ಟಿಯಾದ ನಂತರ ವಿಜಯ್, ತನ್ನ ಆಸ್ತಿಯ ಸಂಬಂಧ ಇ.ಡಿ. ದಾಳಿಯಲ್ಲಿ ಪ್ರಕರಣ ದಾಖಲಾಗಿದೆ, ಬ್ಯಾಂಕ್ ಖಾತೆಗಳು ಫ್ರೀಜ್ ಆಗಿವೆ ಎಂದು ವಿವಿಧ ಕೋರ್ಟ್‌ಗಳಲ್ಲಿ ಪ್ರಕರಣ ನಡೆಯುತ್ತಿರುವ ನಕಲಿ ದಾಖಲೆ ತೋರಿಸಿ, ಹಣ ಪಡೆದುಕೊಂಡ. ಮದುವೆಗೆ ಹೆಣ್ಣು ನೋಡಲು ನನ್ನ ಮನೆಗೆ ಬರುವುದಾಗಿ ಸುಳ್ಳು ಹೇಳಿ ಮತ್ತೆ ನನ್ನ ಬ್ಯಾಂಕ್ ಖಾತೆಯಿಂದ ಆತನ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಂಡ. ಅಲ್ಲದೇ ಸ್ನೇಹಿತರಿಗೆ ವ್ಯವಹಾರ ಮಾಡಲು ಪ್ರೇರೇಪಿಸಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದಾನೆ’ ಎಂದು ಆರೋಪಿಸಿದ್ದಾರೆ.

‘ಹಣ ವಾಪಸ್ ನೀಡುವಂತೆ ಕೇಳಿದಾಗ ₹22 ಲಕ್ಷ ಮಾತ್ರ ನೀಡಿದ. ಉಳಿದ ಹಣ ನೀಡುವಂತೆ ಕೇಳಲು ಆತನ ಮನೆಗೆ ಹೋದಾಗ, ಆರೋಪಿಗೆ ಮದುವೆಯಾಗಿದ್ದು, ಒಂದು ಮಗು ಇರುವುದು ಗೊತ್ತಾಯಿತು. ಅಲ್ಲದೇ ತನ್ನ ಅಕ್ಕ ಎಂದು ಪರಿಚಯಿಸಿದ್ದ ಮಹಿಳೆಯೇ ಆತನ ಪತ್ನಿ ಎಂಬುದು ಗೊತ್ತಾಯಿತು. ಹಣ ವಾಪಸ್ ಕೇಳಿದರೆ, ನನ್ನ ಮತ್ತು ಸ್ನೇಹಿತರನ್ನು ಕೊಲೆ ಮಾಡುವದಾಗಿ ಬೆದರಿಕೆ ಹಾಕಿದ್ದಾನೆ. ಆರೋಪಿ ಮತ್ತು ಆತನ ಪತ್ನಿ ಮತ್ತು ತಂದೆಯ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ಮಾರಕಾಸ್ತ್ರ ತೋರಿಸಿ ದಂಪತಿಗೆ ಬೆದರಿಕೆ: ಆರೋಪಿ ಸೆರೆ

ರಸ್ತೆ ಮಧ್ಯೆ ನಿಂತು ಗಲಾಟೆ ಮಾಡಿ, ದಂಪತಿಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿ ಪರಾರಿಯಾಗಿದ್ದ ದ್ವಿಚಕ್ರ ವಾಹನ ಸವಾರನನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಾಹನ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಆರೋಪಿ ಅರ್ಬಾಜ್ ಖಾನ್‌ ಎಂಬಾತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿ ಸಿದ್ದಾರೆ. ಆರೋಪಿಯು ಕನಕನಗರ ನಿವಾಸಿಯಾಗಿದ್ದು, ಮೀನು ಮಾರಾಟ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾನೆ.

ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ದಂಪತಿ ಕಾರಿನಲ್ಲಿ ಹೋಗುವಾಗ ಯಾವುದೋ ಕಾರಣಕ್ಕೆ ದ್ವಿಚಕ್ರ ವಾಹನ ಸವಾರನ ಜತೆ ಜಗಳ ಮಾಡಿಕೊಂಡಿದ್ದಾರೆ. ನಂತರ ವಸತಿ ಸಮುಚ್ಚಯ
ವೊಂದರ ಸಿಗ್ನಲ್ ಬಳಿ ಕಾರು ನಿಲ್ಲಿಸಿದ್ದಾಗ ಬೈಕ್ ನಿಲ್ಲಿಸಿ ಬಂದ ಸವಾರ, ರಸ್ತೆ ಮಧ್ಯೆಯಲ್ಲಿಯೇ ದಂಪತಿ ಜತೆ ಗಲಾಟೆ ಮಾಡಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಸವಾರ ಮಾರಕಾಸ್ತ್ರ ತೋರಿಸಿ, ಧಮ್ಕಿ ಹಾಕಿದ್ದಾನೆ.

ಈ ದೃಶ್ಯ ಕಾರ್‌ನಲ್ಲಿದ್ದ ಡ್ಯಾಶ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಎ.ರೆಡ್ಡಿ ಎಂಬುವರು ‘ಎಕ್ಸ್’ನಲ್ಲಿ ಹಂಚಿಕೊಂಡು, ನಗರ ಪೊಲೀಸರಿಗೆ ಟ್ಯಾಗ್ ಮಾಡಿದ್ದರು. ವಿಡಿಯೊ ಹರಿದಾಡಿದ ಬೆನ್ನಲ್ಲೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಬೈಕ್ ಸವಾರನನ್ನು ಬಂಧಿಸಿದ್ದಾರೆ.

ಆರೋಪಿ ವಿರುದ್ಧ ಗೋವಿಂದ ಪುರ, ಫ್ರೇಜರ್ ಟೌನ್ , ಸಂಪಂಗಿ ರಾಮನಗರ, ಅಶೋಕನಗರ ಠಾಣೆಗಳಲ್ಲೂ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.