
ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ಪಾವತಿಸಲು ಹೋಗಿ ಟೆಕಿಯೊಬ್ಬರು ₹2.32 ಲಕ್ಷ ಕಳೆದುಕೊಂಡಿದ್ದು, ಈ ಸಂಬಂಧ ವೈಟ್‌ಫೀಲ್ಡ್ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
57 ವರ್ಷದ ವ್ಯಕ್ತಿಯು ನೀಡಿದ ದೂರಿನ ಮೇಲೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ವೈಟ್‌ಫೀಲ್ಡ್‌ನಲ್ಲಿ ನೆಲಸಿರುವ ಟೆಕಿಯ ವಾಟ್ಸ್‌ಆ್ಯಪ್‌ಗೆ ಜ.26ರಂದು ‘ನಿಮ್ಮ ₹500 ಟ್ರಾಫಿಕ್ ಚಲನ್ ಬಾಕಿ ಇದೆ’ ಎಂದು ಹೇಳುವ ಸಂದೇಶವೊಂದು ಬಂದಿತ್ತು. ಆ ಸಂದೇಶದ ಜತೆಗೆ ಹಣ ಪಾವತಿಗೆ ಲಿಂಕ್ ಕೂಡ ಇತ್ತು. ದೂರುದಾರರು ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ, ₹500 ದಂಡ ಪಾವತಿ ವಿವರ ಕೇಳುವ ವೆಬ್ಸೈಟ್ ತೆರೆದುಕೊಂಡಿತ್ತು. ಅವರು ತಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿ ನಮೂದಿಸಿದ್ದರು. ತಕ್ಷಣವೇ ಅವರ ಖಾತೆಯಿಂದ ₹2.32 ಲಕ್ಷ ಡೆಬಿಟ್ ಆಗಿತ್ತು ಎಂದು ಮೂಲಗಳು ಹೇಳಿವೆ.
‘ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ನಾವು ಯಾವುದೇ ಲಿಂಕ್ ಕಳುಹಿಸುವುದಿಲ್ಲ. ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ದಂಡ ಪಾವತಿ ಮಾಡಬೇಕು’ ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಅಪರಿಚಿತ ಸಂಖ್ಯೆಯಿಂದ ಬರುವ ಲಿಂಕ್‌ಗಳು, ದಂಡ ಅಥವಾ ಬಹುಮಾನ ಎಂಬ ಸಂದೇಶಗಳನ್ನು ಎಂದಿಗೂ ನಂಬಬಾರದು. ಯಾವುದೇ ಸಂದರ್ಭದಲ್ಲೂ ಲಿಂಕ್ ಕ್ಲಿಕ್ ಮಾಡಿ ಬ್ಯಾಂಕ್ ಅಥವಾ ಕಾರ್ಡ್ ವಿವರಗಳನ್ನು ನಮೂದಿಸಬಾರದು ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.