ADVERTISEMENT

ಬೆಂಗಳೂರು| ಸಾಲ ತೀರಿಸಲು ವೃದ್ಧೆ ಕೊಲೆ: ಬಾಡಿಗೆದಾರರಿಂದ ಕೃತ್ಯ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 16:27 IST
Last Updated 5 ನವೆಂಬರ್ 2025, 16:27 IST
ಪ್ರಸಾದ್‌ 
ಪ್ರಸಾದ್‌    

ಬೆಂಗಳೂರು: ಸಾಲ ತೀರಿಸಲು ವೃದ್ಧೆಯನ್ನು ಕೊಲೆ ಮಾಡಿ ಮಾಂಗಲ್ಯದ ಸರ ಕಳವು ಮಾಡಿಕೊಂಡು ಪರಾರಿ ಆಗಿದ್ದ ದಂಪತಿಯನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ 24 ತಾಸಿನಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಆಗಿದ್ದಾರೆ.

ಉತ್ತರಹಳ್ಳಿಯ ನ್ಯೂಮಿಲೆನಿಯಂ ರಸ್ತೆ ನಿವಾಸಿ ಲಕ್ಷ್ಮೀ (60) ಕೊಲೆಯಾದ ವೃದ್ಧೆ.

ಕೊಲೆ ಪ್ರಕರಣದ ಸಂಬಂಧ ಪ್ರಸಾದ್ ಶ್ರೀಶೈಲ ಮಕಾಯ್(26) ಮತ್ತು ಆತನ ಪತ್ನಿ ಸಾಕ್ಷಿ ಹಣಮಂತ ಹೊದ್ಲೂರು(23) ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಲಕ್ಷ್ಮೀ ಅವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ ಆರೋಪಿಗಳು, ನ.4ರಂದು ಕೊಲೆ ಮಾಡಿ ಪರಾರಿ ಆಗಿದ್ದರು. ಲಕ್ಷ್ಮೀ ಅವರ ಪತಿ ಅಶ್ವತ್ಥನಾರಾಯಣ ಅವರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಉತ್ತರಹಳ್ಳಿಯಲ್ಲಿ ನ್ಯೂಮಿಲೆನಿಯಂ ರಸ್ತೆಯಲ್ಲಿರುವ ಸ್ವಂತ ಮನೆಯಲ್ಲಿ ಅಶ್ವತ್ಥನಾರಾಯಣ್ ಮತ್ತು ಪತ್ನಿ ಲಕ್ಷ್ಮೀ ದಂಪತಿ ವಾಸವಾಗಿದ್ದರು. ಅಗರಬತ್ತಿ ಕಾರ್ಖಾನೆಯಲ್ಲಿ ಅಶ್ವತ್ಥ ನಾರಾಯಣ ಅವರು ಕೆಲಸ ಮಾಡುತ್ತಿದ್ದಾರೆ. ಮಂಗಳವಾರ ಬೆಳಿಗ್ಗೆ ಅಶ್ವತ್ಥ ನಾರಾಯಣ ಕೆಲಸಕ್ಕೆ ತೆರಳಿದ್ದರು. ಲಕ್ಷ್ಮೀ ಅವರು ಒಬ್ಬರೇ ಮನೆಯಲ್ಲಿ ಇದ್ದರು. ಆಗ ಆರೋಪಿಗಳು ಕೃತ್ಯ ಎಸಗಿ ಪರಾರಿ ಆಗಿದ್ದಾರೆ.

ಸಾಲ ತೀರಿಸಲು ಕೃತ್ಯ: ಮಹಾರಾಷ್ಟ್ರದ ಸೊಲ್ಲಾಪುರದ ದಂಪತಿ, ಆರು ತಿಂಗಳಿಂದ ಅಶ್ವತ್ಥನಾರಾಯಣ ಮತ್ತು ಲಕ್ಷ್ಮೀ ದಂಪತಿಗೆ ಸೇರಿದ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು. ಪ್ರಸಾದ್‌ ಶ್ರೀಶೈಲ ಮಕಾಯ್ ಸೆಂಟ್ರಿಂಗ್‌ ಕೆಲಸ ಮಾಡುತ್ತಿದ್ದ. ಆತನ ಪತ್ನಿ ಸಾಕ್ಷಿ ಹಣಮಂತ ಹೊದ್ಲೂರು ಪದ್ಮನಾಭನಗರದ ಶ್ರೀಸಾಯಿಗೋಲ್ಡ್‌ ಪ್ಯಾಲೇಸ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಪ್ರಸಾದ್ ಅವರು ಸೊಲ್ಲಾಪುರದಲ್ಲಿ ಸಾಲ ಮಾಡಿದ್ದ. ಸಾಲ ನೀಡಿದವರು ಹಣ ಕೊಡುವಂತೆ ಒತ್ತಾಯ ಮಾಡುತ್ತಿದ್ದರು. ಅಲ್ಲಿಂದ ನಗರಕ್ಕೆ ಬಂದು ಆರೋಪಿ ವಾಸವಾಗಿದ್ದರು ಎಂದು ಪೊಲೀಸರು ಹೇಳಿದರು.

‘ಅಶ್ವತ್ಥನಾರಾಯಣ ಮತ್ತು ಲಕ್ಷ್ಮೀ ದಂಪತಿಗೆ ಮಕ್ಕಳು ಇರಲಿಲ್ಲ. ಅವರಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಕಟ್ಟಡವಿದ್ದು ಎರಡ್ಮೂರು ಮನೆಗಳಿಂದ ಬಾಡಿಗೆ ಬರುತ್ತಿತ್ತು. ಅದನ್ನು ಗಮನಿಸಿದ್ದ ಆರೋಪಿಗಳು, ಮಾಲೀಕರ ಮನೆಯಲ್ಲಿ ಕಳ್ಳತನ ಮಾಡಿದರೆ ಹಣ ದೋಚಬಹುದೆಂದು ಸಂಚು ರೂಪಿಸಿದ್ದರು. ಮನೆಯಲ್ಲಿ ಲಕ್ಷ್ಮೀ ಅವರು ಒಬ್ಬರೇ ಇರುವುದನ್ನು ಗಮನಿಸಿದ್ದ ಆರೋಪಿಗಳು ಮನೆಗೆ ನುಗ್ಗಿದ್ದರು. ಬಳಿಕ ಚಿನ್ನಾಭರಣ ಮತ್ತು ನಗದು ಕೊಡುವಂತೆ ಬೇಡಿಕೆ ಇಟ್ಟಿದ್ದರು. ಚಿನ್ನಾಭರಣ ಹಾಗೂ ನಗದು ಕೊಡಲು ನಿರಾಕರಿಸಿದ್ದಕ್ಕೆ ಕೋಪಗೊಂಡಿದ್ದ ಆರೋಪಿಗಳು, ಲಕ್ಷ್ಮೀ ಅವರನ್ನು ಕೊಂದು ಮನೆಯ ಬೀರುವನ್ನು ತೆಗೆಯಲು ಯತ್ನಿಸಿದ್ದರು. ಆದರೆ, ಸಾಧ್ಯವಾಗಿರಲಿಲ್ಲ. ಬಳಿಕ ಮಾಂಗಲ್ಯ ಸರ ಕಳವು ಮಾಡಿ ಪರಾರಿ ಆಗಿದ್ದರು’ ಎಂದು ಪೊಲೀಸರು ಹೇಳಿದರು.

ಸಾಕ್ಷಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.