
ಮದ್ಯ ಸೇವಿಸಿ ವಾಹನ ಚಾಲನೆ( ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಮದ್ಯಪಾನ ಮಾಡಿ, ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ ಕಾರ್ಯಾಚರಣೆ ನಡೆಸಿದ ನಗರದ ವಿವಿಧ ಸಂಚಾರ ಠಾಣೆ ಪೊಲೀಸರು, 501 ಚಾಲಕರ ವಿರುದ್ಧ ಬುಧವಾರ ರಾತ್ರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಬ್ ಹಾಗೂ ಕ್ಲಬ್ ಸೇರಿದಂತೆ ವಿವಿಧೆಡೆ ನಡೆದ ಹೊಸ ವರ್ಷಾಚರಣೆಯ ಪಾರ್ಟಿಗಳಲ್ಲಿ ಕೆಲವರು ಮದ್ಯ ಸೇವಿಸಿ ವಾಹನ ಚಾಲನೆ ಮಾಡಿಕೊಂಡು ಮನೆಗೆ ತೆರಳುತ್ತಿದ್ದರು. ಬುಧವಾರ ರಾತ್ರಿ 160ಕ್ಕೂ ಹೆಚ್ಚು ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡಿಸೆಂಬರ್ 22ರಿಂದ 31ರವರೆಗೆ ನಗರದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಈ ವಿಶೇಷ ಕಾರ್ಯಾಚರಣೆ ವೇಳೆ 3,30,106 ವಾಹನಗಳ ತಪಾಸಣೆ ಮಾಡಲಾಗಿದೆ. ಸಂಚಾರ ನಿಯಮ ಉಲ್ಲಂಘಿಸಿದ 4,648 ವಾಹನ ಸವಾರರು ಹಾಗೂ ಚಾಲಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ವಿಶೇಷ ಕಾರ್ಯಾಚರಣೆಯನ್ನು ನಿರಂತರವಾಗಿ ಮುಂದುವರಿಸಲಾಗುವುದು ಎಂದು ಸಂಚಾರ ಪೊಲೀಸರು ಹೇಳಿದರು.