ಸಿದ್ದರಾಮಯ್ಯ
ಬೆಂಗಳೂರು: ನಗರದ ಹೊರ ವರ್ತುಲ ರಸ್ತೆಯಲ್ಲಿ (ಒಆರ್‌ಆರ್) ವಿಪರೀತ ದಟ್ಟಣೆ ಇರುವ ಕಾರಣ ವಿಪ್ರೊ ಕ್ಯಾಂಪಸ್ ಮೂಲಕ ಸೀಮಿತ ಪ್ರಮಾಣದಲ್ಲಿ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪ್ರೊ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಅವರಿಗೆ ಪತ್ರ ಬರೆದಿದ್ದಾರೆ.
ಹೊರ ವರ್ತುಲ ರಸ್ತೆಯಲ್ಲಿ ದಟ್ಟಣೆ ಅವಧಿಯಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಅದರಲ್ಲೂ ಇಬ್ಲೂರು ಜಂಕ್ಷನ್‌ನಲ್ಲಿ ಸಮಸ್ಯೆ ತೀವ್ರವಾಗಿದೆ. ಇದು ಉತ್ಪಾದನಾ ವಲಯ ಹಾಗೂ ಸ್ಥಳೀಯ ಜನರ ಜೀವನದ ಗುಣಮಟ್ಟದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಹಾಗಾಗಿ ಪರಸ್ಪರ ಒಪ್ಪಿತ ಷರತ್ತು ಮತ್ತು ಅಗತ್ಯ ಭದ್ರತೆಯೊಂದಿಗೆ ವಿಪ್ರೊ ಕ್ಯಾಂಪಸ್ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ.
‘ನಗರ ಸಂಚಾರ ತಜ್ಞರು ನಡೆಸಿದ ಪ್ರಾಥಮಿಕ ಮೌಲ್ಯಮಾಪನ ಪ್ರಕಾರ, ಈ ಕ್ರಮವು ಹೊರ ವರ್ತುಲ ರಸ್ತೆಯಲ್ಲಿನ ದಟ್ಟಣೆಯನ್ನು, ವಿಶೇಷವಾಗಿ ದಟ್ಟಣೆ ಅವಧಿಯಲ್ಲಿ ಶೇಕಡ 30ರಷ್ಟು ತಗ್ಗಿಸಲಿದೆ. ಈ ವಿಚಾರದಲ್ಲಿ ನೀವು ನೀಡುವ ಸಹಕಾರವು ದೂರಗಾಮಿ ಪರಿಣಾಮ ಬೀರಲಿದ್ದು, ಸಂಚಾರ ಸಮಸ್ಯೆ ಬಗೆಹರಿಸುವ ಜತೆಗೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ’ ಎಂದಿದ್ದಾರೆ.
‘ಬೆಂಗಳೂರು ವಾಸ ಯೋಗ್ಯ ನಗರವಾಗಲು ಇದು ಸಹಕಾರಿ ಆಗಲಿದೆ. ನಿಮ್ಮ ತಂಡ ನಮ್ಮ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಪರಸ್ಪರ ಸ್ವೀಕಾರಾರ್ಹವಾದ ಯೋಜನೆಯನ್ನು ಆದಷ್ಟು ಬೇಗ ರೂಪಿಸಬೇಕು’ ಎಂದು ಈಚೆಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.