ADVERTISEMENT

Bengaluru 2040: 'ಜಾಗತಿಕ ಸಾಂಸ್ಕೃತಿಕ ತಾಣವಾಗುವ ಸಾಮರ್ಥ್ಯ ಬೆಂಗಳೂರಿಗಿದೆ'

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 14:28 IST
Last Updated 20 ಫೆಬ್ರುವರಿ 2026, 14:28 IST
<div class="paragraphs"><p>ಡೆಕ್ಕನ್‌ ಹೆರಾಲ್ಡ್‌ ಬೆಂಗಳೂರು 2040 ಸಮಾವೇಶದಲ್ಲಿ ನಡೆದ ಚರ್ಚೆ...</p></div>

ಡೆಕ್ಕನ್‌ ಹೆರಾಲ್ಡ್‌ ಬೆಂಗಳೂರು 2040 ಸಮಾವೇಶದಲ್ಲಿ ನಡೆದ ಚರ್ಚೆ...

   

ಬೆಂಗಳೂರು: ಜಾಗತಿಕ ಸಾಂಸ್ಕೃತಿಕ ತಾಣವಾಗಿ ಗುರುತಿಸಿಕೊಳ್ಳುವ ಎಲ್ಲ ಸಾಮರ್ಥ್ಯ ಬೆಂಗಳೂರಿಗೆ ಇದೆ. ಆದರೆ, ಅದಕ್ಕಾಗಿ ಕೆಲವು ಅಂಶಗಳನ್ನು ಪೂರೈಸಬೇಕಿದೆ.

'ತಂತ್ರಜ್ಞಾನ ತಾಣವು 2040ರ ಹೊತ್ತಿಗೆ ತನ್ನದೇ ಸಾಂಸ್ಕೃತಿಕ ಗುರುತನ್ನು ಹೇಗೆ ರೂಪಿಸಿಕೊಳ್ಳಬಲ್ಲದು?' ಎನ್ನುವ ವಿಚಾರದ ಕುರಿತು ಡೆಕ್ಕನ್‌ ಹೆರಾಲ್ಡ್‌ ಬೆಂಗಳೂರು 2040 ಸಮಾವೇಶದಲ್ಲಿ ನಡೆದ ಚರ್ಚೆಯಲ್ಲಿ ವ್ಯಕ್ತವಾದ ಅಭಿಪ್ರಾಯವಿದು.

ADVERTISEMENT

ಚರ್ಚೆಯಲ್ಲಿ ಭಾಗವಹಿಸಿದ್ದ ಸಮಾಲೋಚಕಿ ನಳಿನಿ ಮಾಳವೀಯಾ ಅವರು, ಸಂಸ್ಕೃತಿ ಎಂದರೆ ಕೇವಲ ಸಂಪ್ರದಾಯ, ಗುರುತು ಅಥವಾ ಸಾಮಾಜಿಕ ಅಂಶಗಳಷ್ಟೇ ಅಲ್ಲ. ಅದು, ಮಹತ್ವದ ಆರ್ಥಿಕ ಮೌಲ್ಯವನ್ನೂ ರೂಪಿಸುತ್ತದೆ ಎಂದು ಹೇಳಿದ್ದಾರೆ.

ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ಸಾಂಸ್ಕೃತಿಕ ಪ್ರವಾಸೋದ್ಯಮವು, ವಾರ್ಷಿಕ ಅಂದಾಜು ₹ 15 ಸಾವಿರ ಕೋಟಿ (170 ಕೋಟಿ ಡಾಲರ್‌) ಆದಾಯ ತಂದುಕೊಡುತ್ತಿದೆ. ಪ್ಯಾರಿಸ್‌ನಲ್ಲಿರುವ The Louvre ವಸ್ತುಸಂಗ್ರಹಾಲಯಕ್ಕೆ, ಕೋವಿಡ್‌ ಸಾಂಕ್ರಾಮಿಕಕ್ಕೂ ಮೊದಲು ವಾರ್ಷಿಕ 1 ಕೋಟಿ ಜನರು ಭೇಟಿ ನೀಡುತ್ತಿದ್ದರು. ಲಂಡನ್‌ನಲ್ಲಿ 190ಕ್ಕೂ ಅಧಿಕ ವಸ್ತುಸಂಗ್ರಹಾಲಯಗಳು, 400 ಕಲಾ ಗ್ಯಾಲರಿಗಳು ಇವೆ. ಭಾರತದಲ್ಲಿ ಜೈಪುರ ಸಾಹಿತ್ಯ ಉತ್ಸವಕ್ಕೆ ಪ್ರತಿವರ್ಷ ನಾಲ್ಕು ಲಕ್ಷ ಮಂದಿ ಪಾಲ್ಗೊಳ್ಳುತ್ತಾರೆ ಎಂಬುದನ್ನು ಉಲ್ಲೇಖಿಸಿದ್ದಾರೆ.

ಚರ್ಚೆಯಲ್ಲಿ ಪಾಲ್ಗೊಂಡಿದ್ದ ಅಭಿಷೇಕ್‌ ಪೊದ್ದಾರ್‌ ಅವರು, ಬೆಂಗಳೂರು ಸಾಂಸ್ಕೃತಿಕ ತಾಣವಾಗಲು ಒತ್ತು ನೀಡಬೇಕಿರುವ ಮೂರು ಪ್ರಮುಖ ವಿಚಾರಗಳನ್ನು ಒತ್ತಿ ಹೇಳಿದ್ದಾರೆ. ಕಲೆ ಮತ್ತು ಛಾಯಾಗ್ರಹಣ ವಸ್ತು ಸಂಗ್ರಹಾಲಯದ ಸ್ಥಾಪಕರಾಗಿರುವ ಅವರು, ಹವ್ಯಾಸಗಳನ್ನು ಲಯಬದ್ಧವಾಗಿ ರೂಪಿಸುವುದು, ನಗರದ ಪ್ರವೇಶ ಸ್ಥಳಗಳು, ವಿಮಾನ ನಿಲ್ದಾಣಗಳು, ಸಾರ್ವಜನಿಕ ಸ್ಥಳಗಳಲ್ಲಿ ಕಲಾ ಸಂಗಮ ಹಾಗೂ ವರ್ಷಪೂರ್ತಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಅಗತ್ಯ ಎಂದಿದ್ದಾರೆ.

ಅಭಿಷೇಕ್‌ ಅವರ ಮಾತನ್ನು ಪುನರುಚ್ಚರಿಸಿದ ಅಭಿವೃದ್ಧಿ ಆಯುಕ್ತೆ ಉಮಾ ಮಹದೇವನ್‌ ದಾಸ್‌ಗುಪ್ತಾ, ಎಲ್ಲರನ್ನೂ ಒಳಗೊಳ್ಳುವಿಕೆ, ಪಾಲ್ಗೊಳ್ಳುವಿಕೆ ಮತ್ತು ವೈವಿಧ್ಯತೆಯಿಂದ ಸಾಂಸ್ಕೃತಿಕ ಅಭಿವೃದ್ಧಿ ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ.

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್‌. ಶಂಕರ್‌ ಅವರು, ನಗರದಲ್ಲಿ ನಿರ್ಮಾಣ ಕಾರ್ಯಗಳು ವೇಗವಾಗಿ ನಡೆಯುತ್ತಿದ್ದು, ವಸತಿ ಸಮುಚ್ಚಯಗಳು ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ವಸ್ತು ಸಂಗ್ರಹಾಲಯ, ರಂಗಮಂದಿರ, ಕಲಾ ಗ್ಯಾಲರಿಗಳಿಗೆ ಅವಕಾಶ ಕಲ್ಪಿಸುವುದಕ್ಕೆ ಆದ್ಯತೆ ಸಿಗಬೇಕು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.