
ರಾಜರಾಜೇಶ್ವರಿ ನಗರ: ಬೆಂಗಳೂರು ವಿಶ್ವವಿದ್ಯಾಲಯ ಸುತ್ತಮುತ್ತಲಿನ ಪ್ರದೇಶದಲ್ಲಿ ಮರಗಳ ಬುಡಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿದ್ದಾರೆ.
ಸರ್. ಎಂ. ವಿಶ್ವೇಶ್ವರಯ್ಯ ಎಂಟನೇ ಬ್ಲಾಕ್ ಮತ್ತು ಭಾರತ್ ನಗರಕ್ಕೆ ಹೊಂದಿಕೊಂಡಿರುವ ಉದ್ಯಾನದ ಬಳಿ ಮತ್ತು ಜ್ಞಾನಭಾರತಿ ಬಿಡಿಎ 1ನೇ ಬ್ಲಾಕ್‌ನ ಮರಿಯಪ್ಪನಪಾಳ್ಯದಿಂದ ಬೆಂಗಳೂರು ವಿಶ್ವವಿದ್ಯಾಲಯ ಪ್ರವೇಶ ದ್ವಾರದಲ್ಲಿರುವ ದೊಡ್ಡ ಮರಗಳ ಬುಡಗಳಿಗೆ ಕಸ, ಕಡ್ಡಿ, ತ್ಯಾಜ್ಯ, ಪ್ಲಾಸ್ಟಿಕ್ ಪೈಪುಗಳನ್ನು ಹಾಕಿ ಬೆಂಕಿ ಹಚ್ಚಲಾಗುತ್ತಿದೆ.
‘ಹಗಲು ವೇಳೆಯಲ್ಲಿ ಕಿಡಿಗೇಡಿಗಳು ಮರಗಳನ್ನು ನಾಶ ಮಾಡುತ್ತಿದ್ದರೂ ನಗರ ಪಾಲಿಕೆಯ ಅರಣ್ಯ ವಿಭಾಗದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಸ್ಥಳೀಯರು ಆರೋಪಿಸಿದರು.
‘ವಾಣಿಜ್ಯ ಮಳಿಗೆ, ಕಟ್ಟಡ, ಶಾಲಾ, ಕಾಲೇಜು, ಹೋಟೆಲ್, ಕಾಂಪ್ಲೆಕ್ಸ್‌ಗಳ ಮುಂಭಾಗದಲ್ಲಿರುವ ಮರ, ಮರಗಳ ಕೊಂಬೆಗಳನ್ನು ಹಂತ ಹಂತವಾಗಿ ಕತ್ತರಿಸುತ್ತಿದ್ದಾರೆ. ಬೇರುಗಳಿಗೆ ನೀರು ಸೇರದಂತೆ ಕಾಂಕ್ರೀಟ್ ಹಾಕುತ್ತಾರೆ. ಕಾಂಡಗಳಿಗೆ ಆ್ಯಸಿಡ್ ಹಾಕಿ ಮರಗಳನ್ನು ಒಣಗಿ ಬೀಳುವಂತೆ ಮಾಡುತ್ತಿದ್ದಾರೆ’ ಎಂದು ಸ್ಥಳೀಯ ನಿವಾಸಿಗಳಾದ ಸೌಮ್ಯ ಮತ್ತು ದೀಕ್ಷಿತ್ ಹೇಳಿದರು.
‘ಮರಗಳನ್ನು ನಾಶ ಮಾಡುತ್ತಿರುವವರಿಗೆ ನಗರ ಪಾಲಿಕೆ ಅಧಿಕಾರಿಗಳು ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ’ ಎಂದು ನಾಗರಿಕರು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.