ADVERTISEMENT

ಬೆಂಗಳೂರು ವಿ.ವಿ: ಕುಲಪತಿಯಾಗಿ ವೇಣುಗೋಪಾಲ್‌ ಮುಂದುವರಿಕೆ

ನೇಮಕಾತಿ ರದ್ದುಪಡಿಸಿದ್ದ ಹೈಕೋರ್ಟ್‌ ಆದೇಶಕ್ಕೆ ‘ಸುಪ್ರೀಂ’ ತಡೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 19:48 IST
Last Updated 4 ಏಪ್ರಿಲ್ 2022, 19:48 IST
ಪ್ರೊ.ಕೆ.ಆರ್‌. ವೇಣುಗೋಪಾಲ್‌
ಪ್ರೊ.ಕೆ.ಆರ್‌. ವೇಣುಗೋಪಾಲ್‌   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ್‌ ಅವರ ನೇಮಕವನ್ನು ಅಸಿಂಧುಗೊಳಿಸಿ ರಾಜ್ಯ ಹೈಕೋರ್ಟ್‌ನ ವಿಭಾಗೀಯಪೀಠ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್‌ ಸೋಮವಾರ ತಡೆಯಾಜ್ಞೆ ನೀಡಿದೆ.

ಇದರಿಂದಾಗಿ, ಕುಲಪತಿಯಾಗಿ ಪ್ರೊ. ವೇಣುಗೋಪಾಲ್‌ ಮುಂದುವರಿಯಲಿದ್ದಾರೆ. ರಾಜ್ಯ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ರಾಜ್ಯಪಾಲರು, ಸರ್ಕಾರ ಹಾಗೂ ಪ್ರೊ. ವೇಣುಗೋಪಾಲ್ ಅವರು ಸುಪ್ರೀ೦ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಹಾಗೂ ಸೂರ್ಯಕಾಂತ್ ಅವರು ಆರಂಭದಲ್ಲಿ ತಡೆಯಾಜ್ಞೆ ನೀಡುವ ಇಂಗಿತ ವ್ಯಕ್ತಪಡಿಸಿದರು. ಆದರೆ, ಪ್ರತಿವಾದಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದಾಗ, ಲಿಖಿತ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ತಡೆಯಾಜ್ಞೆ ನೀಡಿದರು.

ADVERTISEMENT

ವಿವಾದ ಏನು?: ಡಾ. ಸಂಗಮೇಶ್‌ ಪಾಟೀಲ ಅವರು ಪ್ರೊ. ಕೆ.ಆರ್‌. ವೇಣುಗೋಪಾಲ್‌ ಅವರ ನೇಮಕಾತಿಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಸರ್ಕಾರದ ಅನುಮತಿಯನ್ನು ಪಡೆಯದೆ ಈ ನೇಮಕಾತಿಮಾಡಲಾಗಿದೆ ಎಂದು ಅವರು ಅರ್ಜಿ ಸಲ್ಲಿಸಿದ್ದರು.
ವೇಣುಗೋಪಾಲ್‌ ಅವರ ನೇಮಕಾತಿಯನ್ನು ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ ರದ್ದುಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.