ADVERTISEMENT

ಬೆಂಗಳೂರಲ್ಲಿ ಭಾರಿ ಮಳೆ: ರಸ್ತೆಗಳು ಜಲಾವೃತ– ಟ್ರ್ಯಾಕ್ಟರ್‌, ಬೋಟ್‌ಗಳಲ್ಲಿ ಸಂಚಾರ

ರಾತ್ರಿ ಮಳೆಗೆ ಅರ್ಧ ಬೆಂಗಳೂರು ಮುಳುಗಡೆ

​ಪ್ರಜಾವಾಣಿ ವಾರ್ತೆ
Published 20 ಮೇ 2025, 6:20 IST
Last Updated 20 ಮೇ 2025, 6:20 IST
<div class="paragraphs"><p>ಧಾರಾಕಾರ ಮಳೆಯಿಂದಾಗಿ ಶಾಂತಿನಗರ ಬಿಎಂಟಿಸಿ ಬಸ್ ಡಿಪೊದಲ್ಲಿ ಬಸ್‌ಗಳು ನೀರಿನಲ್ಲಿ ಮುಳುಗಿರುವ ದೃಶ್ಯ</p></div>

ಧಾರಾಕಾರ ಮಳೆಯಿಂದಾಗಿ ಶಾಂತಿನಗರ ಬಿಎಂಟಿಸಿ ಬಸ್ ಡಿಪೊದಲ್ಲಿ ಬಸ್‌ಗಳು ನೀರಿನಲ್ಲಿ ಮುಳುಗಿರುವ ದೃಶ್ಯ

   

ಬೆಂಗಳೂರು: ಮುಳುಗಿರುವ ರಸ್ತೆಗಳು, ರಸ್ತೆಗಳಲ್ಲೇ ಕೆಟ್ಟು ನಿಂತ ಕಾರು, ಬೈಕುಗಳು, ಬಸ್‌ಗಳು, ಜಲಾವೃತಗೊಂಡ ಬಡಾವಣೆಗಳು, ಬೈಕ್- ಕಾರಲ್ಲಿ ಓಡಾಡುತ್ತಿದ್ದ ರಸ್ತೆಯಲ್ಲಿ ಟ್ರ್ಯಾಕ್ಟರ್‌, ಬೋಟುಗಳ‌ಲ್ಲಿ ಪ್ರಯಾಣಿಸಿದ ನಾಗರಿಕರು, ಬಿಬಿಎಂಪಿ ಅಧಿಕಾರಿಗಳು...

ನಗರದಲ್ಲಿ ಭಾನುವಾರ ತಡರಾತ್ರಿಯಿಂದ ಸೋಮವಾರ ಮುಂಜಾನೆವರೆಗೆ ಸುರಿದ ಬಿರುಸಾದ ಮಳೆಯಿಂದ ಉಂಟಾದ ಅವಾಂತರಗಳಿವು.

ADVERTISEMENT

ಸುಮಾರು ನಾಲ್ಕು ಗಂಟೆ ಸುರಿದ ಭಾರಿ ಮಳೆಗೆ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ನಾಲ್ಕು ವಲಯಗಳ ಪ್ರದೇಶಗಳು ಜಲಾವೃತಗೊಂಡಿವೆ. ಮಹದೇವಪುರ, ಯಲಹಂಕ, ಬೊಮ್ಮನಹಳ್ಳಿ ಹಾಗೂ ಪೂರ್ವ ವಲಯದ ಹಲವು ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಸಂಕಷ್ಟ ಅನುಭವಿಸಿದರೆ, ಕೆಲವು ಬಡಾವಣೆಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರಿತಪಿಸಿದರು.

ಮಳೆಯಿಂದಾಗಿ ವಿಲ್ಸನ್ ಗಾರ್ಡನ್‌ ಮುಖ್ಯರಸ್ತೆ ಜಲಾವೃತಗೊಂಡಿದ್ದು, ರಸ್ತೆಯಲ್ಲೇ ಬಸ್ಸು ಕಾರುಗಳು ಕೆಟ್ಟು ನಿಂತವು. ಸಮೀಪದಲ್ಲಿರುವ ಲೋಕೋಪಯೋಗಿ ಇಲಾಖೆಯ ವಸತಿಗೃಹಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುವಂತಾಯಿತು.

ಮಾಗಡಿ ರಸ್ತೆಯ ಕೆ.ಪಿ.ಅಗ್ರಹಾರದ 7ನೇ ಅಡ್ಡರಸ್ತೆ ಸಂಪೂರ್ಣ ಜಲಾವೃತಗೊಂಡು ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳು ನೀರಿನಲ್ಲಿ ತೇಲಿದವು. ಮನೆಗಳ ಬೇಸ್‌ಮೆಂಟ್ ಪ್ರದೇಶಕ್ಕೆ ನೀರು ನುಗ್ಗಿತು. ನೀರನ್ನು ಹೊರ ಹಾಕಲು ಹರಸಾಹಸಪಡಬೇಕಾಯಿತು.

ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಲ್ಲಿ ಮಳೆ ನೀರಿನಲ್ಲೇ ಸಾಗಿದ ವಾಹನಗಳು

ಶಾಂತಿನಗರದ ಬಿಎಂಟಿಸಿ ಬಸ್‌ ನಿಲ್ದಾಣಕ್ಕೆ ನೀರು ನುಗ್ಗಿ ಬಸ್‌ಗಳು ಸಂಚರಿಸದಂತಾಯಿತು. ಕೋರಮಂಗಲ ಕಣಿವೆಯಿಂದ ನೀರು ಹಿಮ್ಮುಖವಾಗಿ ಹರಿದಿದ್ದರಿಂದ ಬಸ್‌ ನಿಲ್ದಾಣದಲ್ಲಿ ನೀರು ತುಂಬಿಕೊಂಡಿತು.

ಥಣಿಸಂದ್ರದ ಎಂ.ಎಸ್.ರಾಮಯ್ಯ ನಾರ್ತ್ ಸಿಟಿ ರಸ್ತೆಗಳು ಜಲಾವೃತಗೊಂಡಿದ್ದವು. ಮಾನ್ಯತಾ ಟೆಕ್ ಪಾರ್ಕ್‌ಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಸಿಲ್ಕ್ ಬೋರ್ಡ್‌ ಜಂಕ್ಷನ್‌ನಲ್ಲಿ ತುಂಬಿಕೊಂಡಿದ್ದ ಮಳೆ ನೀರನ್ನು ಅಗ್ನಿಶಾಮಕ ದಳದವರು ಹೆಚ್ಚುವರಿ ಮೋಟಾರ್‌ಗಳ ಮೂಲಕ ತೆರವುಗೊಳಿಸಿದರು. ನಿರ್ಮಾಣ ಹಂತದಲ್ಲಿರುವ ಸಿಲ್ಕ್‌ ಬೋರ್ಡ್ ಮೆಟ್ರೊ ನಿಲ್ದಾಣಕ್ಕೆ ಮಳೆ ನೀರು ನುಗ್ಗಿದೆ. ನಿಲ್ದಾಣದ ಎದುರಿನ ರಸ್ತೆಯಲ್ಲೂ ನೀರು ನಿಂತು ವಾಹನಸವಾರರು ಪರದಾಡುವಂತಾಯಿತು.

ಚಾಮರಾಜಪೇಟೆ, ಅರಮನೆ ಮೈದಾನದ ಬಳಿ ಬೃಹತ್ ಮರಗಳು ಧರೆಗುರುಳಿದ್ದು, ಸಂಚಾರಕ್ಕೆ ತೊಂದರೆಯಾಯಿತು. 

ಆಡಳಿತಾಧಿಕಾರಿ, ಮುಖ್ಯ ಆಯುಕ್ತರಿಂದ ಪರಿಶೀಲನೆ: ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಹಾಗೂ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಮಳೆಯಿಂದ ಜಲಾವೃತವಾದ ಸ್ಥಳಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಮಹದೇವಪುರ ವಲಯದ ಸಾಯಿ ಲೇಔಟ್‌ನಲ್ಲಿ ಟ್ರ್ಯಾಕ್ಟರ್‌ನಲ್ಲಿ ಸಂಚರಿಸಿದ ತುಷಾರ್ ಗಿರಿನಾಥ್, ‘ಸಾಯಿಲೇಔಟ್ ಹಾಗೂ ಪಕ್ಕದಲ್ಲಿರುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಲಾವೃತವಾಗಿದೆ. ಗೆದ್ದಲಹಳ್ಳಿ ಬಳಿ ರೈಲ್ವೆ ವೆಂಟ್ ವಿಸ್ತರಣೆ ಮಾಡಬೇಕಿದ್ದು, ಅದಕ್ಕೆ ಈಗಾಗಲೇ ಕಾರ್ಯಾದೇಶ ನೀಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ’ ಎಂದರು.

‘ಶ್ರೀಸಾಯಿ ಲೇಔಟ್‌ನಲ್ಲಿ ನೀರಿನ ಮಟ್ಟ ತಗ್ಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಇವತ್ತು ರಾತ್ರಿ ಮತ್ತೆ ಮಳೆಯಾದರೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರವಾಹ ಸ್ಥಳಗಳಿಂದ ಹೊರಬರಲು ನಿವಾಸಿಗಳಿಗೆ ಸೂಚನೆ ನೀಡಲಾಗಿದೆ. ಹೊರ ಬರದೆ ಇರುವ ಸಾರ್ವಜನಿಕರಿಗೆ ಸ್ಥಳದಲ್ಲಿಯೇ ಆಹಾರ, ನೀರು ಅಗತ್ಯ ವಸ್ತುಗಳನ್ನು ತಲುಪಿಸುತ್ತೇವೆ’ ಎಂದು ತಿಳಿಸಿದರು.

ಸಿಲ್ಕ್ ಬೋರ್ಡ್‌ ಜಂಕ್ಷನ್‌ನಲ್ಲಿ ತುಂಬಿಕೊಂಡಿದ್ದ ಮಳೆ ನೀರನ್ನು ಜೆಸಿಬಿ ಮೂಲಕ ಹೊರ ಹಾಕುತ್ತಿರುವ ದೃಶ್ಯ 

‘ಸಾಯಿ ಲೇಔಟ್‌ನಲ್ಲಿ ಅಕ್ರಮ ನಿರ್ಮಾಣಗಳಿದ್ದು, ಅವುಗಳಿಂದ ಸಮಸ್ಯೆ ಉಂಟಾಗಿದೆ’ ಎಂದು ಬಿಡಿಎ ಆಯುಕ್ತ ಜಯರಾಂ ತಿಳಿಸಿದರು. ‘ಅಕ್ರಮ ಕಟ್ಟಡಗಳ ತೆರವಿಗೆ ಕ್ರಮ ಕೈಗೊಳ್ಳುತ್ತೀರಾ’ ಎಂಬ ಸುದ್ದಿಗಾರರ ಪ್ರಶ್ನೆಗೆ ಜಯರಾಂ ನಿರುತ್ತರರಾದರು.

ಬೆಳ್ಳಂದೂರು ಪರಿಶೀಲನೆ: ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು  ಬೆಳ್ಳಂದೂರು ಕೆರೆಯ ಒಳಹರಿವಿನ ಬಳಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಕೆ-100, ಕೆ-200 ಬೃಹತ್ ನೀರುಗಾಲುವೆಗಳು ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ಅಗಲ ಕಡಿಮೆ ಇರುವುದರಿಂದ, ನೀರಿನ ಹರಿವಿನ ಮಟ್ಟ ಹೆಚ್ಚಾಗಿ ಮಡಿವಾಳದ ಡಾಲರ್ಸ್ ಕಾಲೊನಿ, ಕೋರಮಂಗಲದ 6ನೇ ಬ್ಲಾಕ್, ಈಜೀಪುರ ಪ್ರದೇಶಗಳು ಜಲಾವೃತವಾಗಿವೆ’ ಎಂದು ತಿಳಿಸಿದರು.

ಮುಂದುವರಿದ ಮಳೆ: ಸೋಮವಾರ ಮಧ್ಯಾಹ್ನ ಆರಂಭವಾದ ಮಳೆ, ಸಂಜೆಯವರೆಗೆ ಸುರಿಯಿತು. ದೊರೆಸಾನಿ ಪಾಳ್ಯ, ಬಿಳೇಕಹಳ್ಳಿ, ಹಂಪಿನಗರದಲ್ಲಿ ತಲಾ 3.4 ಸೆಂ.ಮೀ ಮಳೆಯಾಯಿತು. ಕೋರಮಂಗಲ, ವಿದ್ಯಾಪೀಠ, ಕೆಂಗೇರಿ,  ರಾಜರಾಜೇಶ್ವರಿನಗರ, ನಾಗಪುರ, ಬಸವೇಶ್ವರನಗರ, ಕೊಡಿಗೇಹಳ್ಳಿ, ರಾಜಾಜಿನಗರ, ಹೆಮ್ಮಿಗೆಪುರ, ಅರಕೆರೆ, ಹೆಮ್ಮಿಗೆಪುರ, ನಂದಿನಿ ಲೇಔಟ್‌ ಸುತ್ತಮುತ್ತ ಪ್ರದೇಶದಲ್ಲಿ ತಲಾ 2 ಸೆಂ.ಮೀ ಮಳೆಯಾಯಿತು. 

ಕೋರಮಂಗಲದ 80 ಅಡಿ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರ ನೆಲಮಹಡಿ ಸಂಪೂರ್ಣ ಜಲಾವೃತವಾಗಿ 100ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ನೀರಿನಲ್ಲಿ ಸಿಲುಕಿದ್ದವು

27 ಮರ  ಧರೆಗೆ; 29 ಕೆರೆಗಳು ಭರ್ತಿ

ಬೆಂಗಳೂರು: ನಗರದಲ್ಲಿ 27 ಮರಗಳು ಹಾಗೂ 43 ರೆಂಬೆಗಳು ಧರೆಗುರುಳಿದ್ದು 30 ತಂಡಗಳು ತೆರವು ಕಾರ್ಯಾಚರಣೆ ನಡೆಸುತ್ತಿವೆ. ಯಲಹಂಕ ವಲಯ ವ್ಯಾಪ್ತಿಯಲ್ಲಿ 29 ಕೆರೆಗಳಿದ್ದು ಎಲ್ಲಾ ಕೆರೆಗಳೂ ಸಂಪೂರ್ಣ ತುಂಬಿವೆ ಎಂದು ಬಿಬಿಎಂಪಿ ತಿಳಿಸಿದೆ.

ಮಳೆಯಿಂದಾಗುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ನಾಗರಿಕರು ಬಿಬಿಎಂಪಿ ಸಹಾಯವಾಣಿ 1533ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಮಹದೇವಪುರ ವಲಯದಲ್ಲಿ ಸುಮಾರು 10 ಕಡೆ ಜಲಾವೃತವಾಗಿದೆ. ಸಾಯಿ ಲೇಔಟ್ ಪ್ರದೇಶವು ಸಂಪೂರ್ಣ ಜಲಾವೃತವಾಗಿದ್ದು ಆರು ಟ್ರ್ಯಾಕ್ಟರ್ ಎರಡು ಜೆಸಿಬಿ 35 ಸಿಬ್ಬಂದಿ ಮೂರು ಅಗ್ನಿ ಶಾಮಕ ವಾಹನ ಎಸ್‌ಡಿಆರ್‌ಎಫ್ ತಂಡದಿಂದ ಎರಡು ಬೋಟ್ ಮೂಲಕ ಸುರಕ್ಷಿತ ಕ್ರಮ ಕೈಗೊಳ್ಳಲಾಗುತ್ತಿದೆ. ಸ್ಥಳೀಯ ನಿವಾಸಿಗಳಿಗೆ ಉಪಾಹಾರ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ.

ಮಾರತ್‌ಹಳ್ಳಿಯ ದೀಪ ನರ್ಸಿಂಗ್ ಹೋಂ ಚಿನ್ನಪ್ಪನಹಳ್ಳಿ 5ನೇ ಕ್ರಾಸ್ ಪಣತ್ತೂರ್ ರೈಲ್ವೆ ಕೆಳಸೇತುವೆ ಗ್ರೀನ್ ಹುಡ್ ಇಬ್ಬಲೂರು ಜಂಕ್ಷನ್ ಬಾಲಾಜಿ ಲೇಔಟ್ - ಕೊತ್ತನೂರು ಎ. ನಾರಾಯಣಪುರದ ಕೃಷ್ಣ ನಗರ ಸುನೀಲ್ ಲೇಔಟ್ ಹರಳೂರು ಬಿ.ಎಸ್‌.ಪಿ ಲೇಔಟ್‌ನ ಕಸವನಹಳ್ಳಿ ಕಡೆಗಳಲ್ಲಿ ರಸ್ತೆಗಳ ಮಲೆ ನೀರು ಮತ್ತು ಮನೆಗಳಿಗೆ ನೀರು ನುಗ್ಗಿದ್ದು ಬಹುತೇಕ ಕಡೆ ಸಮಸ್ಯೆ ಬಗೆಹರಿಸಲಾಗಿದೆ. ಪೂರ್ವ ವಲಯದಲ್ಲಿ ರಾಜಕಾಲುವೆಯಲ್ಲಿ ನೀರು ತುಂಬಿ ಹಿಮ್ಮುಖವಾಗಿ ಚಲಿಸಿದ್ದು ಎಚ್‌ಬಿಆರ್ 5 6 7 8ನೇ ಬ್ಲಾಕ್ ಬೈರಸಂದ್ರ ಲೇಔಟ್ ಕೆಂಪೇಗೌಡ ರಸ್ತೆ ಕಾಮರಾಜ ನಗರ ಪ್ರದೇಶಗಳು ಜಲಾವೃತವಾಗಿವೆ.

ನೀರು ಹೊರ ಹಾಕಲು ನಿರ್ವಹಣಾ ತಂಡಗಳು ಆರು ಟ್ರ್ಯಾಕ್ಟರ್‌ಗಳ ತಂಡ ಎರಡು ಜೆಸಿಬಿಗಳು ಹಾಗೂ 10 ಪಂಪ್‌ಗಳು ಕಾರ್ಯನಿರ್ವಹಿಸುತ್ತಿವೆ. ಬೊಮ್ಮನಹಳ್ಳಿ ವಲಯದ ಎಚ್.ಎಸ್.ಆರ್ ಲೇಔಟ್ 6 ಮತ್ತು 7ನೇ ಸೆಕ್ಟರ್ ಮತ್ತು ಬನ್ನೇರುಘಟ್ಟ ಬಿಳೇಕಹಳ್ಳಿ ಸಿಗ್ನಲ್‌ ರಸ್ತೆಯಲ್ಲಿ ನೀರು ತುಂಬಿದ್ದು ಯಲಚೇನಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ನಿರ್ವಹಣಾ ತಂಡ ಹಾಗೂ ಪಂಪ್‌ಗಳ ವ್ಯವಸ್ಥೆ ಮಾಡಿ ಸಮಸ್ಯೆ ಬಗೆಹರಿಸಲಾಗಿದೆ.

ದಕ್ಷಿಣ ವಲಯದ ಕೆ-100 ಕೆ-200 ಬೃಹತ್ ನೀರುಗಾಲುವೆಗಳು ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚಾಗಿ ಮಡಿವಾಳ ಡಾಲರ್ಸ್ ಕಾಲೊನಿ ಕೋರಮಂಗಲದ 6ನೇ ಬ್ಲಾಕ್ ಈಜಿಪುರ ಪ್ರದೇಶಗಳು ಜಲಾವೃತವಾಗಿವೆ.

ಬೆಳ್ಳಂದೂರು ಬಳಿ ಮಳೆ ನೀರಿನ ಹರಿವಿನ ಮಟ್ಟವನ್ನು ಕಡಿಮೆ ಮಾಡಲು ತಾತ್ಕಾಲಿಕವಾಗಿ ಜೆಸಿಬಿ ಮೂಲಕ ಬಂಡ್ ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಲಾಗಿದೆ. ವೃಷಭಾವತಿ ವ್ಯಾಲಿ ಗಾಳಿ ಆಂಜನೇಯ ದೇವಸ್ಥಾನದ ಬಳಿ ಜಲಾವೃತವಾಗಿ ಮನೆಗಳಿಗೆ ನೀರು ನುಗ್ಗಿದೆ. ಯಲಹಂಕ ವಲಯದ ಚೌಡೇಶ್ವರಿ ನಗರದ ಅಟ್ಟೂರು ವ್ಯಾಪ್ತಿಯಲ್ಲಿ ಸುಮಾರು 15 ಮನೆಗಳಿಗೆ ಡಿಫೆನ್ಸ್ ಲೇಔಟ್ ಹಾಗೂ ದ್ವಾರಕಾ ನಗರದಲ್ಲಿ ಸುಮಾರು ಐದು ಮನೆಗಳಿಗೆ ನೀರು ನುಗ್ಗಿದ್ದು ಪಂಪ್‌ಗಳನ್ನು ಅಳವಡಿಸಿ ನೀರು ತೆರವು ಮಾಡಲಾಗಿದೆ.

ಟಾಟಾ ನಗರ ಮುಖ್ಯರಸ್ತೆಯಲ್ಲಿ ನಿಂತಿದ್ದ ನೀರನ್ನು ತೆರವುಗೊಳಿಸಲಾಗಿದೆ. ರಾಜರಾಜೇಶ್ವರಿ ನಗರ ವಲಯದ ಐಡಿಯಲ್ಸ್ ಹೋಮ್ಸ್ 1ನೇ ಎ ಕ್ರಾಸ್ ವೃಷಭಾವತಿ ವ್ಯಾಲಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಹಿಮ್ಮುಖವಾಗಿ ಚಲಿಸಿದ ಪರಿಣಾಮ ಮೂರು ಹಸು ಒಂದು ಕರು ಹಾಗೂ ಒಂದು ಎಮ್ಮೆ ಸೇರಿ 5 ಜಾನುವಾರಗಳು ಮೃತಪಟ್ಟಿವೆ.

ಅಲ್ಲದೆ 12 ಮನೆಗಳಿಗೆ ನೀರು ನುಗ್ಗಿದ್ದು ಸೈಡ್ ಡೈನ್‌ಗಳನ್ನು ಸ್ವಚ್ಚಗೊಳಿಸಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ವಿಜಯಶ್ರೀ ಬಡವಾಣೆ ಹೆಮ್ಮಿಗೆಪುರ ರಾಜಕಾಲುವೆಯಲ್ಲಿ ನೀರು ಹಿಮ್ಮುಖವಾಗಿ ಚಲಿಸಿ ಜಲಾವೃತವಾಗಿದೆ. ಕೆಂಗೇರಿ ಬಳಿಯ ಕೋಟೆ ಲೇಔಟ್‌ನಲ್ಲಿ ಸುಮಾರು 100 ಮನೆಗಳಿಗೆ ನಿರು ನುಗ್ಗಿದ್ದು ನಾಲ್ಕು ಪಂಪ್‌ಗಳನ್ನು ಅಳವಡಿಸಿ ನೀರು ತೆರವು ಕಾರ್ಯ ಮಾಡಲಾಗುತ್ತಿದೆ.

ದಾಸರಹಳ್ಳಿ ವಲಯ ಕೆ.ಜಿ ಹಳ್ಳಿ ಡಿಫೆನ್ಸ್ ಕಾಲೊನಿ ಮೇಡರಹಳ್ಳಿಯ ಶ್ರೀದೇವಿ ಬಡಾವಣೆ ರುಕ್ಮಿಣಿ ನಗರ ವಿದ್ಯಾನಗರ ಬಿಟಿಎಸ್ ಲೇಔಟ್‌ಗಳಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗಿದ್ದು ಪಂಪ್‌ಗಳನ್ನು ಅಳವಡಿಸಿ ನೀರು ತೆರವುಗೊಳಿಸಲಾಗಿದೆ. ಪಶ್ಚಿಮ ವಲಯದಲ್ಲಿ ಕೆ.ಪಿ ಅಗ್ರಹಾರದಲ್ಲಿ ರಾಜಕಾಲುವೆಯಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚಾಗಿ 20 ಮನೆಗಳಿಗೆ ನೀರು ನುಗ್ಗಿದ್ದು ನಾಲ್ಕು ಪಂಪ್‌ಗಳನ್ನು ಅಳವಡಿಸಿ ನೀರು ತೆರವುಗೊಳಿಸಲಾಗುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ.

ಧಾರಾಕಾರ ಮಳೆಯಿಂದಾಗಿ

ವಲಯದ ಯಾವ ಪ್ರದೇಶದಲ್ಲಿ ಅತಿಹೆಚ್ಚು ಮಳೆ?

  • ರಾಜರಾಜೇಶ್ವರಿ ನಗರ ವಲಯದ ಕೆಂಗೇರಿಯಲ್ಲಿ 13.2 ಸೆಂ.ಮೀ

  • ಯಲಹಂಕ ವಲಯದ ಚೌಡೇಶ್ವರಿ ನಗರದಲ್ಲಿ 10.3 ಸೆಂ.ಮೀ

  • ದಕ್ಷಿಣ ವಲಯದ ಕೋರಮಂಗಲದಲ್ಲಿ 9.6 ಸೆಂ.ಮೀ

  • ಮಹದೇವಪುರ ವಲಯದ ಎಚ್‌ಎಎಲ್ ವ್ಯಾಪ್ತಿಯಲ್ಲಿ 9.3 ಸೆಂ.ಮೀ

  • ದಾಸರಹಳ್ಳಿ ವಲಯದ ಬಾಗಲಗುಂಟೆಯಲ್ಲಿ 8.9 ಸೆಂ.ಮೀ

  • ಪಶ್ಚಿಮ ವಲಯ ಕಾಟನ್‌ಪೇಟೆಯಲ್ಲಿ 8.9 ಸೆಂ.ಮೀ

  • ಪೂರ್ವ ವಲಯದ ಬಾಣಸವಾಡಿಯಲ್ಲಿ 8.5 ಸೆಂ.ಮೀ

  • ಬೊಮ್ಮನಹಳ್ಳಿ ವಲಯದ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ 7.3 ಸೆಂ.ಮೀ

ಎಲ್ಲೆಲ್ಲಿ ಎಷ್ಟು ಮಳೆ? (ಭಾನುವಾರ ರಾತ್ರಿ ಸೋಮವಾರ ಮುಂಜಾನೆವರೆಗೆ– ಸೆಂ.ಮೀನಲ್ಲಿ)

  • ಕೆಂಗೇರಿ;13.2

  • ಯಲಹಂಕ;10.35

  • ಅತ್ತೂರು;10.35

  • ಚೌಡೇಶ್ವರಿ;10.35

  • ಕೋರಮಂಗಲ;9.65

  • ಬೊಮ್ಮನಹಳ್ಳಿ;9.65

  • ಬಸವೇಶ್ವರನಗರ;9.45

  • ಅಗ್ರಹಾರ ದಾಸರಹಳ್ಳಿ;9.45

  • ಎಚ್‌ಎಎಲ್‌ ವಿಮಾನ ನಿಲ್ದಾಣ;9.3

  • ಕುಮಾರಸ್ವಾಮಿ ಲೇಔಟ್;9.25

  • ಬಸವನಗುಡಿ;9.25

  • ವಿದ್ಯಾಪೀಠ;9.25

  • ಮಾರತ್ತಹಳ್ಳಿ;9.15

  • ಹಂಪಿ ನಗರ;9.1

  • ಗಾಳಿ ಆಂಜನೇಯ ದೇವಸ್ಥಾನ;9.1

  • ಬಾಗಲಕುಂಟೆ;8.9

  • ಮಾರುತಿ ಮಂದಿರ;8.9

  • ಕಾಟನ್ ಪೇಟೆ;8.9

  • ಚಾಮರಾಜಪೇಟೆ;8.8

  • ವಿಶ್ವೇಶ್ವರಪುರ;8.8

  • ಸಂಪಂಗಿರಾಮನಗರ;8.8

  • ಯಶವಂತಪುರ;8.8

  • ಶೆಟ್ಟಿಹಳ್ಳಿ;8.8

  • ಬ್ಯಾಟರಾಯನಪುರ;8.65

  • ಜಕ್ಕೂರು;8.65

  • ಪೂರ್ವ ಬಾಣಸವಾಡಿ;8.5

  • ಎಚ್‌ಬಿಆರ್ ಲೇಔಟ್;8.5

  • ನಾಗಾಪುರ;8.4

  • ರಾಜರಾಜೇಶ್ವರಿನಗರ;7.95

  • ಹೊರಮಾವು;7.95

  • ಜ್ಞಾನಭಾರತಿ;7.95

  • ಸಂಪಂಗಿರಾಮನಗರ;7.85

  • ರಾಜರಾಜೇಶ್ವರಿನಗರ;7.8

  • ವನ್ನರಪೇಟ್;7.55

  • ಎಚ್‌ಎಸ್ಆರ್‌ ಲೇಔಟ್;7.3

  • ಮನೋರಾಯನಪಾಳ್ಯ;7.2

  • ಪುಲಕೇಶಿನಗರ;7.2

  • ರಾಧಾಕೃಷ್ಣ ದೇವಸ್ಥಾನ ವಾರ್ಡ್;7.0

  • ಕೊಡಿಗೇಹಳ್ಳಿ;7.0

  • ವಿ.ನಾಗೇನಹಳ್ಳಿ;7.0

  • ಪೀಣ್ಯ ಕೈಗಾರಿಕಾ ಪ್ರದೇಶ;6.85

  • ಹೆಗ್ಗೇನಹಳ್ಳಿ;6.85

  • ಜಕ್ಕೂರು;6.75

  • ನಾಗರಬಾವಿ;6.55

  • ಹೇರೋಹಳ್ಳಿ;6.55

  • ನಂದಿನಿ ಲೇಔಟ್;6.2

  • ಮಾರಪ್ಪನಪಾಳ್ಯ;6.2

  • ಸಾರಕ್ಕಿ;6.15

  • ಕೋಣನಕುಂಟೆ;6.15

  • ದೊರೆಸಾನಿಪಾಳ್ಯ;6.15

  • ಬೆಳ್ಳಂದೂರು;6.1

  • ಎಚ್.ಗೊಲ್ಲಹಳ್ಳಿ;6.05

  • ಹೆಮ್ಮಿಗೆಪುರ;6.05

  • ಪಟ್ಟಾಭಿರಾಮನಗರ;5.9

  • ಲಕ್ಕಸಂದ್ರ;5.9

  • ನಾಯಂಡಹಳ್ಳಿ;5.8

  • ಕೊನೇನ ಅಗ್ರಹಾರ;54.5

  • ರಾಜಮಹಲ್ ಗುಟ್ಟಹಳ್ಳಿ;5.1

  • ದಯಾನಂದನಗರ;5.0

  • ಬಿಟಿಎಂ ಲೇಔಟ್;5.0

  • ಬಿಳೇಕಹಳ್ಳಿ;5.0

  • ರಾಜಾಜಿನಗರ;5.0

ಜಲಾವೃತಗೊಂಡಿರುವ ಸಾಯಿಲೇಔಟ್‌ನ ಮನೆಯಲ್ಲಿ ಸಿಲುಕಿದ್ದ ನಿವಾಸಿಯೊಬ್ಬರನ್ನು ಬಿಬಿಎಂಪಿ ಸಿಬ್ಬಂದಿ ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ದರು ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ದನ

ಎಲ್ಲೆಲ್ಲಿ ಏನೇನಾಯ್ತು ?

  • ಮಹದೇವಪುರದಲ್ಲಿ 10 ಪ್ರದೇಶಗಳು ಜಲಾವೃತ ನಿವಾಸಿಗಳಿಗೆ ಟ್ರ್ಯಾಕ್ಟರ್‌ ಮೂಲಕ ಉಪಾಹಾರ ನೀರು ಪೂರೈಕೆ

  • ರಾಜಕಾಲುವೆಗಳಿಂದ ನೀರು ಹಿಮ್ಮುಖವಾಗಿ ಹರಿದು ಎಚ್‌ಆರ್‌ ಬಿಆರ್ ಲೇಔಟ್‌ ಹೊರಮಾವು ಬೈರಸಂದ್ರ ಲೇಔಟ್ ಜಲಾವೃತ

  • ವೃಷಭಾವತಿ ಕಣಿವೆಯಲ್ಲಿ ನೀರಿನಮಟ್ಟ ಹೆಚ್ಚಾಗಿ ಮೂರು ಹಸು ಒಂದು ಕರು ಹಾಗೂ ಒಂದು ಎಮ್ಮೆ ಸಾವು

  • ಧರೆಗುರುಳಿದ 27 ಮರಗಳು 43 ಮರದ ಕೊಂಬೆಗಳು ತೆರವು ಕಾರ್ಯಾಚರಣೆಗೆ 30 ತಂಡ

ಎಚ್‌ಬಿಆರ್ ಲೇಔಟ್‌ನಲ್ಲಿ ರಸ್ತೆ ಜಲಾವೃತಗೊಂಡಿರುವುದು  ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ದನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.