
ಬೆಂಗಳೂರು: ನಗರದಲ್ಲಿ ಬೇಸಿಗೆ ಅವಧಿಯಲ್ಲಿ ನೀರಿನ ಬವಣೆ ನೀಗಿಸಲು ಬೆಂಗಳೂರು ಜಲಮಂಡಳಿ ಅಣಿಯಾಗುತ್ತಿದ್ದು, ನೀರಿನ ಸಮಸ್ಯೆ ಎದುರಾಗಬಹುದಾದ ಪ್ರದೇಶಗಳಲ್ಲಿ ‘ಮಿನಿ ಟ್ಯಾಂಕ್’ಗಳ ಅಳವಡಿಕೆಗೆ ನಿರ್ಧರಿಸಿದೆ.
ಮಂಡಳಿ ಅಧ್ಯಕ್ಷ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
‘ನೀರಿನ ಹೆಚ್ಚು ಬೇಡಿಕೆ ಹಾಗೂ ನೀರಿನ ಅಭಾವ ಎದುರಿಸಲಿರುವ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಜಲಮಂಡಳಿ ಅಗತ್ಯ ತಯಾರಿ ಮಾಡಿಕೊಂಡಿದೆ’ ಎಂದು ಸಭೆಯ ನಂತರ, ರಾಮ್ ಪ್ರಸಾತ್ ಮಾಹಿತಿ ನೀಡಿದರು.
ನೀರಿನ ಅಭಾವ ಎದುರಾಗಬಹುದಾದ ಹಾಗೂ ಜನಸಾಂದ್ರಿತ ಪ್ರದೇಶಗಳನ್ನು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿನ ಜನರಿಗೆ ಉಚಿತವಾಗಿ ಕುಡಿಯುವ ನೀರು ಒದಗಿಸಲು ‘ಮಿನಿ ವಾಟರ್ ಟ್ಯಾಂಕ್’ಗಳನ್ನು (ಸಿಂಟೆಕ್ಸ್ ಟ್ಯಾಂಕ್) ಅಳವಡಿಸಲಾಗುವುದು. ಈ ಮಿನಿ ಟ್ಯಾಂಕ್‌ಗಳಿಗೆ ನೀರು ತುಂಬಿಸಲು ಜಲಮಂಡಳಿ ಹಾಗೂ ಸಂಚಾರಿ ಕಾವೇರಿ ಟ್ಯಾಂಕರ್‌ಗಳಿಗೆ ಆದ್ಯತೆ ನೀಡಬೇಕು. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಖಾಸಗಿ ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯಬೇಕು ಎಂದು ಸೂಚನೆ ನೀಡಿದರು.
ಬೇಸಿಗೆ ನಿರ್ವಹಣೆಯಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು. ಎಲ್ಲಾ ಮುಖ್ಯ ಎಂಜಿನಿಯರ್‌ಗಳು, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ಮತ್ತು ನೀರು ಪರಿವೀಕ್ಷಕರು ಕಚೇರಿಯಲ್ಲಿ ಕುಳಿತುಕೊಳ್ಳದೆ ಕ್ಷೇತ್ರದಲ್ಲೇ ಹಾಜರಿರಬೇಕು ಎಂದು ತಿಳಿಸಿದರು.
ಎಂಜಿನಿಯರ್‌ಗಳಿಗೆ ಹೊಣೆ: ಎರಡು ವರ್ಷದ ಹಿಂದೆ ಬೇಸಿಗೆ ವೇಳೆ ಜಲ ಸಂಕಟ ಎದುರಿಸಿ ಜನರಿಗೆ ನಿತ್ಯ ನೀರು ಒದಗಿಸಲು ಹರಸಾಹಸ ಪಟ್ಟಿದ್ದ ಜಲಮಂಡಳಿ, ಈ ಬಾರಿ ಬೇಸಿಗೆ ಬವಣೆ ಎದುರಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಿದೆ. ಮುಖ್ಯ ಎಂಜಿನಿಯರ್‌ಗಳ ನೇತೃತ್ವದಲ್ಲಿ ಆಯಾ ಉಪವಿಭಾಗದ ಅಧೀಕ್ಷಕ ಹಾಗೂ ಕಾರ್ಯಪಾಲಕ ಎಂಜಿನಿಯರ್‌ಗಳು ನೋಡೆಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಅಧಿಕಾರಿಗಳು ಪ್ರತಿದಿನ ತಮ್ಮ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಬೇಕು. ಗುರುತಿಸಲಾದ ಪ್ರದೇಶಗಳಿಗೆ ನೀರು ತಲುಪುವುದನ್ನು ಖಚಿತಪಡಿಸಿಕೊಳ್ಳಬೇಕುಡಾ.ರಾಮಪ್ರಸಾತ್ ಮನೋಹರ್ ಅಧ್ಯಕ್ಷ ಬೆಂಗಳೂರು ಜಲಮಂಡಳಿ
ಅಪಾರ್ಟ್‌ಮೆಂಟ್‌ಗಳ ಮೇಲೆ ನಿಗಾ
ನಗರದಲ್ಲಿ ಬಳಕೆಯಲ್ಲಿರುವ ಹಾಗೂ ನಿರ್ಮಾಣದ ಹಂತದ ಅಪಾರ್ಟ್‌ಮೆಂಟ್‌ಗಳ ಮೇಲೆ ಜಲಮಂಡಳಿ ಈ ಬಾರಿ ನಿಗಾ ವಹಿಸಿದೆ. ಅಪಾರ್ಟ್‌ಮೆಂಟ್‌ಗಳು ಕಡ್ಡಾಯವಾಗಿ ಕಾವೇರಿ ನೀರಿನ ಸಂಪರ್ಕ ಪಡೆಯಬೇಕು. ಪ್ರತಿ ಮನೆಗೂ ನೀರಿನ ಮೀಟರ್ ಅಳವಡಿಸಬೇಕು. ಬೇಸಿಗೆ ವೇಳೆ ಆಗುವ ತೊಂದರೆ ತಪ್ಪಿಸಿಕೊಳ್ಳಬೇಕು ಎಂದು ಜಲಮಂಡಳಿ ತಾಕೀತು ಮಾಡಿದೆ. ನಗರದಲ್ಲಿ 12 ಸಾವಿರ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು 15 ಲಕ್ಷ ಮಂದಿ ನಿವಾಸಿಗಳಿರುವ ಅಂದಾಜಿದೆ. ಇದರಲ್ಲಿ ನಾಲ್ಕು ಸಾವಿರ ಅಪಾರ್ಟ್‌ಮೆಂಟ್‌ಗಳಲ್ಲಿ ನೀರಿನ ಸಂಪರ್ಕ ಇಲ್ಲ ಎಂದು ಜಲಮಂಡಳಿ ಮೂಲಗಳು ತಿಳಿಸಿವೆ. ‘ಎರಡು ವರ್ಷದ ಹಿಂದೆ ಬೇಸಿಗೆ ವೇಳೆ ಹಲವು ಅಪಾರ್ಟ್‌ಮೆಂಟ್‌ಗಳಿಂದ ಕಾವೇರಿ ನೀರಿಗೆ ಹೆಚ್ಚಿನ ಬೇಡಿಕೆ ಬಂದಿತ್ತು. ಪರಿಶೀಲನೆ ಮಾಡಿದಾಗ ಕೆಲವರು ಸಂಪರ್ಕ ಪಡೆಯದಿರುವುದು ತಿಳಿದುಬಂದಿತ್ತು. ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳ ಮೂಲಕ ನೀರಿನ ಸಂಪರ್ಕದ ಚಟುವಟಿಕೆ ಚುರುಕುಗೊಳಿಸಿದ್ದೇವೆ. ಈ ಬೇಸಿಗೆಯಲ್ಲಿ ಸಮಸ್ಯೆ ಆಗುವುದನ್ನು ತಪ್ಪಿಸಲು ಈಗಲೇ ಸಂಪರ್ಕ ಪಡೆಯಿರಿ ಎಂಬ ಸೂಚನೆಯನ್ನು ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ನೀಡಲಾಗುತ್ತಿದೆ’ ಎಂದು ಜಲಮಂಡಳಿ ಹಿರಿಯ ಅಧಿಕಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.