ADVERTISEMENT

ಮೊಬೈಲ್‌ ರಿಚಾರ್ಜ್ ಮಾಡಿಸದ ಪತಿ: ಸಿಟ್ಟಿಗೆದ್ದ ಪತ್ನಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 14:40 IST
Last Updated 14 ಅಕ್ಟೋಬರ್ 2025, 14:40 IST
   

ಬೆಂಗಳೂರು: ಮೊಬೈಲ್ ರಿಚಾರ್ಜ್ ಮಾಡಿಸಲಿಲ್ಲ ಎಂಬ ಕಾರಣಕ್ಕೆ ಪತಿಯ ಮೇಲೆ ಕೋಪಗೊಂಡು ಪತ್ನಿ ಮನೆಯ ಮೂರನೇ ಮಹಡಿಯಿಂದ ಕಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಉತ್ತರ ಪ್ರದೇಶದ ಮೂಲದ ಶಿಖಾ ದೇವಿ (28) ಮೃತ ಮಹಿಳೆ. 2019ರಲ್ಲಿ ಸಂದೀಪ್ ಕುಮಾರ್ ಅವರನ್ನು ಶಿಖಾದೇವಿ ಮದುವೆಯಾಗಿದ್ದು, ಎರಡು ವರ್ಷದ ಮಗನ ಜತೆ ದಂಪತಿ ಕೆಂಗೇರಿಯಲ್ಲಿ ವಾಸವಿದ್ದರು.

ಸಂದೀಪ್ ಕುಮಾರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾನುವಾರ ಸಂಜೆ ತನ್ನ ಮೊಬೈಲ್ ಕರೆನ್ಸಿ ಖಾಲಿಯಾಗಿದ್ದು, ರಿಜಾರ್ಜ್ ಮಾಡಿಸುವಂತೆ ಪತಿಯನ್ನು ಕೇಳಿದ್ದರು. ಆದರೆ, ಸಂದೀಪ್ ನಿರಾಕರಿಸಿದ್ದರು. 

ಈ ವೇಳೆ ಪತಿಯ ಮೇಲೆ ಕೋಪಗೊಂಡು, ಮೊಬೈಲ್‌ ಮನೆಯಲ್ಲಿಯೇ ಬಿಸಾಡಿ ಮೂರನೇ ಮಹಡಿಯಿಂದ ಕೆಳಗೆ ಹಾರಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಯನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ದರೂ ಮಾರ್ಗಮಧ್ಯೆ ಅಸುನೀಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ನಗರದ ಪೊಲೀಸರಿಗೆ ಮಾಹಿತಿ ನೀಡಿರುವ ಶಿಖಾ ಅವರ ತಂದೆ ಅನಿಲ್ ಕುಮಾರ್ ತ್ರಿಪಾಠಿ,  ‘ದಂಪತಿ ಈ ಹಿಂದೆ ಜಗಳವಾಡಿರಲಿಲ್ಲ. ಸಾವಿನ ಹಿಂದೆ ಯಾವುದೇ ಅನುಮಾನವಿಲ್ಲ’ ಎಂದು ತಿಳಿಸಿದ್ದಾರೆ.