ಬಂಧನ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯನ್ನು ಕೊಲೆ ಮಾಡಿ ಸಂಬಂಧಿಕನ ನೆರವು ಪಡೆದು ಮೃತದೇಹವನ್ನು ಕೋಲಾರದ ಸ್ಮಶಾನದಲ್ಲಿ ಸುಟ್ಟುಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಕಾಡುಗೋಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕೃತ್ಯ ಎಸಗಿದ್ದ ಆರೋಪದ ಅಡಿ ದಿಣ್ಣೂರಿನ ಮುನಿರತ್ನಾ (40), ಈಕೆಯ ಭಾವಿ ಅಳಿಯ ರಾಮಮೂರ್ತಿ(28) ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯದಲ್ಲಿ 17 ವರ್ಷದ ಬಾಲಕಿಯೂ ಶಾಮೀಲಾಗಿದ್ದು ಆಕೆಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಮೂವರು ಆರೋಪಿಗಳು ಸೇರಿಕೊಂಡು ಜುಲೈ 26ರಂದು ದಿಣ್ಣೂರಿನ ಮನೆಯಲ್ಲಿ ಬಾಬು (46) ಅವರನ್ನು ಕೊಲೆ ಮಾಡಿದ್ದರು. ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಮರುದಿನ ಆಂಬುಲೆನ್ಸ್‌ನಲ್ಲಿ ಮೃತದೇಹವನ್ನು ಕೋಲಾರಕ್ಕೆ ಸಾಗಿಸಿ ಸ್ಮಶಾನದಲ್ಲಿ ಸುಟ್ಟು ಹಾಕಿದ್ದರು. ಕೇಳಿದವರಿಗೆ ಪತಿ ಅನಾರೋಗ್ಯದಿಂದ ಬಳಲುತ್ತಿದ್ದರು. ಕಾಯಿಲೆ ಗುಣವಾಗದೇ ಮೃತಪಟ್ಟರು ಎಂಬುದಾಗಿ ಮುನಿರತ್ನ ಹೇಳಿದ್ದಳು ಎಂದು ಪೊಲೀಸರು ಹೇಳಿದರು.
‘ಕೃತ್ಯದಲ್ಲಿ ಆಂಬುಲೆನ್ಸ್ ಚಾಲಕ ಸೇರಿ ಇನ್ನೂ ಹಲವರು ಶಾಮೀಲಾಗಿರುವ ಶಂಕೆಯಿದ್ದು, ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
ದೇವನಹಳ್ಳಿಯ ಬಾಬು ಹಾಗೂ ಮಾಲೂರಿನ ಮುನಿರತ್ನಾ ದಂಪತಿಗೆ 17 ವರ್ಷ ಹಾಗೂ 15 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕುಟುಂಬ ದಿಣ್ಣೂರಿನ ಬಾಡಿಗೆ ಮನೆಯಲ್ಲಿ ನೆಲಸಿತ್ತು. ಬಾಬು ಅವರಿಗೆ ಮದ್ಯ ಸೇವನೆ ಅಭ್ಯಾಸವಿತ್ತು. ಈ ವಿಚಾರಕ್ಕೆ ಮನೆಯಲ್ಲಿ ನಿತ್ಯವೂ ಗಲಾಟೆ ನಡೆಯುತ್ತಿತ್ತು. ಪತಿಯ ಕೊಲೆಗೆ ಮುನಿರತ್ನಾ ಸಂಚು ರೂಪಿಸಿದ್ದಳು ಎಂದು ಪೊಲೀಸರು ಹೇಳಿದರು.
ಮುನಿರತ್ನಾ ಸಂಬಂಧಿ ರಾಮಮೂರ್ತಿ ಕೂಡ ಇವರ ಕುಟುಂಬದ ಜತೆಗೇ ವಾಸಿಸುತ್ತಿದ್ದ. ಹಿರಿಯ ಪುತ್ರಿಯನ್ನು ಕೊಟ್ಟು ಮದುವೆ ಮಾಡಿಕೊಡುವುದಾಗಿ ಮುನಿರತ್ನಾ ಭರವಸೆ ನೀಡಿದ್ದಳು. ಇಬ್ಬರು ಸೇರಿಕೊಂಡು ಬಾಬು ಅವರನ್ನು ಕೊಲೆ ಮಾಡಿದ್ದರು. ಕೃತ್ಯಕ್ಕೆ 17 ವರ್ಷದ ಪುತ್ರಿ ಸಹ ನೆರವು ನೀಡಿದ್ದಳು ಎಂದು ಮೂಲಗಳು ತಿಳಿಸಿವೆ.
‘ತನಗೆ ಪರಿಚಯವಿದ್ದ ಆಂಬುಲೆನ್ಸ್ ಚಾಲಕನಿಗೆ ಕರೆ ಮಾಡಿ, ನನ್ನ ಪತಿ ಅನಾರೋಗ್ಯದಿಂದ ಬಳಲುತ್ತಿದ್ದರು. ಮನೆಯಲ್ಲಿ ಪ್ರಜ್ಞೆತಪ್ಪಿ ಕುಸಿದು ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಳು. ಆ ಮನೆಯ ಬಳಿಗೆ ಬಂದಾಗ ಆಂಬುಲೆನ್ಸ್‌ನಲ್ಲಿ ಮೃತದೇಹ ಹಾಕಿಕೊಂಡಿದ್ದಳು. ದಾರಿ ಮಧ್ಯೆ ಬಾಬು ಮೃತಪಟ್ಟರು ಎಂದು ನಾಟಕವಾಡಿದ್ದಳು. ನಮ್ಮ ಊರು ಕೋಲಾರ. ಅಲ್ಲೇ ಅಂತ್ಯಸಂಸ್ಕಾರ ಮಾಡುವುದಾಗಿ ಚಾಲಕನಿಗೆ ತಿಳಿಸಿದ್ದಳು. ಚಾಲಕನನ್ನು ಒಪ್ಪಿಸಿ ಕೋಲಾರದ ರುದ್ರಭೂಮಿಗೆ ಮೃತದೇಹ ಕೊಂಡೊಯ್ದು ಸುಟ್ಟು ಹಾಕಿದ್ದರು’ ಎಂದು ಮೂಲಗಳು ತಿಳಿಸಿವೆ.
ಕೊಲೆ ವಿಚಾರ ತಿಳಿಸಿದ್ದ ಎರಡನೇ ಪುತ್ರಿ ತಂದೆಯನ್ನು ಕೊಲೆ ಮಾಡಿರುವ ವಿಚಾರವನ್ನು ಬಾಬು ಅವರ ಎರಡನೇ ಪುತ್ರಿ ತನ್ನ ಚಿಕ್ಕಪ್ಪನಿಗೆ ತಿಳಿಸಿದ್ದಳು. ಜುಲೈ26ರಂದು ರಾತ್ರಿ ನಾನು ನಿದ್ರೆ ಮಾಡುತ್ತಿದೆ. ಆಗ ತಂದೆ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಸಾಧ್ಯತೆಯಿದೆ. ತಂದೆ ಕಾಣಿಸುತ್ತಿಲ್ಲ ಎಂದು ತನ್ನ ಚಿಕ್ಕಪ್ಪ ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ್ದಳು. ರಾಘವೇಂದ್ರ ಅವರು ಜುಲೈ 31ರಂದು ರಾತ್ರಿ ಕಾಡುಗೋಡಿ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.