ADVERTISEMENT

ಶ್ರೀಮಂತ ಕುಟುಂಬದ 20 ಮಹಿಳೆಯರಿಗೆ ರಾಜಕಾರಣಿಗಳ ಹೆಸರಲ್ಲಿ ₹30 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 15:57 IST
Last Updated 9 ಜುಲೈ 2025, 15:57 IST
ಸವಿತಾ 
ಸವಿತಾ    

ಬೆಂಗಳೂರು: ರಾಜಕಾರಣಿಗಳ ಹೆಸರು ಬಳಸಿಕೊಂಡು ಶ್ರೀಮಂತ ಕುಟುಂಬದ 20ಕ್ಕೂ ಹೆಚ್ಚು ಮಹಿಳೆಯರಿಗೆ ಅಂದಾಜು ₹30 ಕೋಟಿ ವಂಚಿಸಿರುವ ಆರೋಪದಡಿ ಎಚ್‌ವಿಕೆ ಗಾರ್ಡನ್‌ ನಿವಾಸಿ ಸವಿತಾ ಎಂಬಾಕೆಯನ್ನು ಬಸವೇಶ್ವರನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕಿಟ್ಟಿ ಪಾರ್ಟಿಯಲ್ಲಿ ಪರಿಚಯವಾದ ಸ್ನೇಹಿತೆಯರಿಗೆ ವಂಚಿಸಿದ್ದ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ₹85 ಲಕ್ಷ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಬಂದಿತ್ತು. ಆ ದೂರು ಆಧರಿಸಿ ತನಿಖೆ ನಡೆಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಎಂ.ಬಿ.ಪಾಟೀಲ, ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಹೆಸರು ಬಳಸಿಕೊಂಡು ಸವಿತಾ ವಂಚನೆ ನಡೆಸಿರುವುದು ಗೊತ್ತಾಗಿದೆ. ಅದಕ್ಕೆ ಸಂಬಂಧಿಸಿದ ಆಡಿಯೊವನ್ನು ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಈ ಹಿಂದೆ ₹2.50 ಕೋಟಿ ವಂಚನೆ ನಡೆಸಿದ್ದ ಆರೋಪದಡಿ ಸವಿತಾ ವಿರುದ್ಧ ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಪ್ರಕರಣದಲ್ಲೂ ಆಕೆಯನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ಹೇಳಿದರು.

‘ಸದ್ಯದ ತನಿಖೆಯಲ್ಲಿ ಅಂದಾಜು ₹30 ಕೋಟಿ ವಂಚನೆ ನಡೆಸಿರುವುದು ಕಂಡುಬಂದಿದೆ. ತನಿಖೆ ಪೂರ್ಣವಾದ ಮೇಲೆ ವಂಚನೆಯ ಮೊತ್ತ ಗೊತ್ತಾಗಲಿದೆ’ ಎಂದು ಪೊಲೀಸರು ಹೇಳಿದರು.

‘ಆರ್ಥಿಕವಾಗಿ ಪ್ರಬಲವಾಗಿರುವ ಕುಟುಂಬದ ಮಹಿಳೆಯರನ್ನು ಗುರುತಿಸುತ್ತಿದ್ದ ಆರೋಪಿ, ಅವರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು. ನಂತರ, ಕಿಟ್ಟಿ ಪಾರ್ಟಿಗೆ ಬರುವಂತೆ ಆಹ್ವಾನ ನೀಡುತ್ತಿದ್ದಳು. ತನಗೆ ಹಲವು ರಾಜಕಾರಣಿಗಳು ಗೊತ್ತು ಎಂದು ಹೇಳಿಕೊಂಡು ಗಾಳ ಹಾಕುತ್ತಿದ್ದಳು. ಬಳಿಕ ಅವರನ್ನು ಪುಸಲಾಯಿಸಿ ಹೂಡಿಕೆ ನೆಪದಲ್ಲಿ ಹಣ ಪಡೆದು ವಂಚಿಸುತ್ತಿದ್ದಳು’ ಎಂದು ಮೂಲಗಳು ಹೇಳಿವೆ.

‘ಅಮೆರಿಕ ಹಾಗೂ ದುಬೈನಲ್ಲಿ ಪರಿಚಯಸ್ಥರು ನೆಲಸಿದ್ದಾರೆ. ಅಲ್ಲಿಂದ ಕಡಿಮೆ ಬೆಲೆಗೆ ಚಿನ್ನ ತರಿಸಿಕೊಡುವುದಾಗಿಯೂ ಹೇಳಿ ವಂಚಿಸಿರುವುದು ಗೊತ್ತಾಗಿದೆ. ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವಂತೆ ಶ್ರೀಮಂತ ಕುಟುಂಬದ ಮಹಿಳೆಯರನ್ನು ಮನವೊಲಿಸಿ ಮೋಸ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.