ಬಂಧನ
ಬೆಂಗಳೂರು: ಮದ್ಯದ ಅಮಲಿನಲ್ಲಿದ್ದಾಗ, ಬೈಕ್‌ನಲ್ಲಿ ತೆರಳುತ್ತಿದ್ದ ಯುವಕನನ್ನು ಅಡ್ಡಗಟ್ಟಿ ಕೊಲೆ ಮಾಡಿರುವ ಘಟನೆ ಬ್ಯಾಡರಹಳ್ಳಿಯ ತಿಗಳರಪಾಳ್ಯ ಮುಖ್ಯರಸ್ತೆಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಪ್ರೇಮ್ ಕೊಲೆಯಾದ ಯುವಕ.
ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶಾಲ್, ಹೇಮಂತ್ ಹಾಗೂ ಪುನೀತ್ ಅವರನ್ನು ಬಂಧಿಸಲಾಗಿದೆ ಎಂದು ಬ್ಯಾಡರಹಳ್ಳಿ ಠಾಣೆಯ ಪೊಲೀಸರು ತಿಳಿಸಿದರು.
ಕೊಲೆಯಾದ ಪ್ರೇಮ್ ಅವರು ಕಾರು ಸರ್ವಿಸ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಪ್ರೇಮ್ ಅವರ ಪೋಷಕರು ನೀಡಿದ ದೂರು ಆಧರಿಸಿ ಕೊಲೆ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಬಂಧಿತರ ಪೈಕಿ ವಿಶಾಲ್ ಎಂಬಾತ ಬ್ಯಾಡರಹಳ್ಳಿ ಠಾಣೆಯ ರೌಡಿಶೀಟರ್ ಆಗಿದ್ದಾನೆ. ಮತ್ತೊಬ್ಬ ರೌಡಿಶೀಟರ್ ನವೀನ್ ಎಂಬಾತ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ಸ್ನೇಹಿತರಿಬ್ಬರ ಜತೆಗೆ ಪ್ರೇಮ್ ಅವರು ಬೈಕ್‌ನಲ್ಲಿ ಬರುತ್ತಿದ್ದರು. ಆಗ ಆರೋಪಿಗಳ ಗುಂಪು ಪ್ರೇಮ್ ಅವರನ್ನು ಅಡ್ಡಗಟ್ಟಿದೆ. ಹಣ ನೀಡುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಸಿದೆ. ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಆರೋಪಿಗಳು ಚಾಕುವಿನಿಂದ ಪ್ರೇಮ್ ಅವರಿಗೆ ಚುಚ್ಚಿ ಪರಾರಿಯಾಗಿದ್ದರು ಎಂದು ವಾಯುವ್ಯ ವಿಭಾಗದ ಡಿಸಿಪಿ ನಾಗೇಶ್ ತಿಳಿಸಿದರು.
ಹಣವಿಲ್ಲದೇ ವಾಪಸ್ ಕರೆತಂದಿದ್ದ ಸ್ನೇಹಿತರು: ಪ್ರೇಮ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ದೇಹದ ವಿವಿಧ ಭಾಗಗಳಿಗೆ ಗಂಭೀರ ಸ್ವರೂಪದ ಗಾಯವಾಗಿದ್ದ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಪ್ರೇಮ್ ಅವರ ಸ್ನೇಹಿತರಿಗೆ ಸೂಚಿಸಿದ್ದರು. ಹಣವಿಲ್ಲದ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸದೇ ಕಾರು ಸರ್ವಿಸ್ ಸೆಂಟರ್‌ಗೆ ಪ್ರೇಮ್ ಅವರನ್ನು ಕರೆತಂದು ಮಲಗಿಸಿ ಹೋಗಿದ್ದರು. ಸ್ವಲ್ಪಸಮಯದ ನಂತರ ಸ್ನೇಹಿತರಿಬ್ಬರು ವಾಪಸ್ ಬಂದು ನೋಡಿದಾಗ ತೀವ್ರ ರಕ್ತಸ್ರಾವದಿಂದ ಯುವಕ ಮೃತಪಟ್ಟಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.