ADVERTISEMENT

ಬೆಸ್ಕಾಂ: ಠೇವಣಿ ಕಟ್ಟದಿದ್ದರೆ ಸಂಪರ್ಕ ಕಡಿತ ಬೆದರಿಕೆ !

ನಿಗದಿಗಿಂತ ಕಡಿಮೆ ವಿದ್ಯುತ್ ಬಳಸಿದ್ದರೂ ಹೆಚ್ಚುವರಿ ಠೇವಣಿ ಪಾವತಿಸಲೇಬೇಕು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 2:51 IST
Last Updated 19 ಅಕ್ಟೋಬರ್ 2020, 2:51 IST
ಬೆಸ್ಕಾಂ
ಬೆಸ್ಕಾಂ   

ಬೆಂಗಳೂರು: ಹೆಚ್ಚುವರಿ ಭದ್ರತಾ ಠೇವಣಿ (ಎಎಸ್‌ಡಿ) ಪಾವತಿಸಿ, ಇಲ್ಲದಿದ್ದರೆ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಬೆಸ್ಕಾಂ ಬೆದರಿಕೆ ಒಡ್ಡುತ್ತಿದೆ ಎಂದು ಗ್ರಾಹಕರು ದೂರಿದ್ದಾರೆ.

‘ವಿದ್ಯುತ್‌ ಶುಲ್ಕದ ಜೊತೆಗೆ ಈ ಬಾರಿ ಎಎಸ್‌ಡಿಯನ್ನೂ ಕಟ್ಟಬೇಕು ಎಂದು ನೋಟಿಸ್ ನೀಡಿದ್ದಾರೆ. ಎರಡು ತಿಂಗಳಿಂದ ₹410 ಪಾವತಿಸಬೇಕು. ಇಲ್ಲದಿದ್ದರೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ನಾವು ನಿಗದಿಗಿಂತಲೂ ಕಡಿಮೆ ವಿದ್ಯುತ್ ಬಳಕೆ ಮಾಡಿದ್ದೇವೆ’ ಎಂದು ಹೊಸಕೆರೆಹಳ್ಳಿಯ ವಾಣಿ ಹೇಳಿದರು.

‘ಮನೆಯಲ್ಲಿ ನಾವು ಗೀಸರ್‌ ಕೂಡ ಬಳಸುವುದಿಲ್ಲ. ವಿದ್ಯುತ್ ಉಳಿಸಲು ಎಲ್‌ಇಡಿ ಬಲ್ಬ್‌ಗಳನ್ನೇ ಹೆಚ್ಚಾಗಿ ಉಪಯೋಗಿಸುತ್ತೇವೆ. ವರ್ಷಗಳಿಂದ ತಿಂಗಳಿಗೆ ₹300 ರಿಂದ ₹400 ಮಾತ್ರ ವಿದ್ಯುತ್‌ ಬಿಲ್ ಬರುತ್ತಿತ್ತು. ಒಂದೆರಡು ತಿಂಗಳಿಂದ ₹600ರವರೆಗೆ ಬರುತ್ತಿದೆ. ಅದರ ಜೊತೆಗೆ ಈಗ ಹೆಚ್ಚುವರಿ ಹಣ ಬೇರೆ ಕಟ್ಟಬೇಕಾಗಿದೆ’ ಎಂದರು.

ADVERTISEMENT

‘ಈ ಠೇವಣಿ ಪಾವತಿಸಲು ಆನ್‌ಲೈನ್‌ನಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಈ ಕುರಿತು ಬೆಸ್ಕಾಂ ಸಿಬ್ಬಂದಿ ಸಮರ್ಪಕ ಮಾಹಿತಿಯನ್ನೂ ನೀಡುವುದಿಲ್ಲ. ಬೆಸ್ಕಾಂ ಕಚೇರಿಗೆ ಹೋಗಿ ಬಿಲ್ ಪಾವತಿಸಿ ಎನ್ನುತ್ತಾರೆ. ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಕಚೇರಿಗಳಿಗೆ ಅಲೆದಾಡಲು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದರು.

‘ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಲು ಹಲವು ಸಮಸ್ಯೆಗಳಿವೆ. ಶುಲ್ಕ ನೀಡಿ ಎರಡು– ಮೂರು ದಿನಗಳ ನಂತರ ಆನ್‌ಲೈನ್‌ನಲ್ಲಿ ಅಪ್‌ಡೇಟ್‌ ಆಗುತ್ತದೆ. ಕೆಲವೊಮ್ಮೆ ‘ಸರ್ವರ್ ಎರರ್’ ಎಂದು ಬರುತ್ತದೆ. ಆದರೆ, ಶುಲ್ಕ ಪಾವತಿಸಲು ಒಂದು ದಿನ ತಡವಾದರೂ ಬಂದು ಸಂಪರ್ಕ ಕಡಿತಗೊಳಿಸುತ್ತಾರೆ’ ಎಂದು ಅವರು ದೂರಿದರು.

‘ಬೆಸ್ಕಾಂ ಸೂಚಿಸಿದ ಬ್ಯಾಂಕುಗಳ ಮೂಲಕ ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸುವ ವೇಳೆಯೂ ತಾಂತ್ರಿಕ ತೊಂದರೆ ಎದುರಾಗುತ್ತಿದೆ. ಬೆಸ್ಕಾಂನವರನ್ನು ಕೇಳಿದರೆ, ನೀವು ಬ್ಯಾಂಕ್‌ನಲ್ಲಿಯೇ ವಿಚಾರಿಸಬೇಕು ಎನ್ನುತ್ತಾರೆ. ನಿಗದಿತ ಅವಧಿಯೊಳಗೆ ಶುಲ್ಕ ಪಾವತಿಸದಿದ್ದರೆ ಸಂಪರ್ಕ ಕಡಿತಗೊಳಿಸಲು ತಕ್ಷಣಕ್ಕೆ ಸಿಬ್ಬಂದಿ ಬರುತ್ತಾರೆ’ ಎಂದು ಮತ್ತೊಬ್ಬ ಗ್ರಾಹಕರು ಹೇಳಿದರು.

‘ವರ್ಷದ ಯಾವುದೇ ತಿಂಗಳಲ್ಲಿ ನಿಗದಿಗಿಂತ ಹೆಚ್ಚು ವಿದ್ಯುತ್‌ ಬಳಸಿದ್ದರೂ ಎಎಸ್‌ಡಿ ಕಟ್ಟಬೇಕಾಗುತ್ತದೆ. ಬಾಡಿಗೆದಾರರ ಬದಲು ಮನೆಯ ಮಾಲೀಕರು ಈ ಠೇವಣಿ ಪಾವತಿಸಬೇಕು. ಠೇವಣಿಯ ಬಡ್ಡಿಯ ಹಣವನ್ನು ವಿದ್ಯುತ್‌ ಶುಲ್ಕದಲ್ಲಿ ಕಡಿತಗೊಳಿಸಲಾಗುತ್ತದೆ’ ಎಂದು ಬೆಸ್ಕಾಂ ಸಹಾಯವಾಣಿಯ ಸಿಬ್ಬಂದಿ ಹೇಳಿದರು.

‘ಮೊದಲಿನಿಂದಲೂ ಎಎಸ್‌ಡಿ ವಿಧಿಸಲಾಗುತ್ತಿದೆ. ಈಗ ಕೋವಿಡ್ ಇರುವ ಕಾರಣ ಠೇವಣಿ ಬಡ್ಡಿಯ ಮೊತ್ತವನ್ನು ಶುಲ್ಕದಲ್ಲಿ ಕಡಿತಗೊಳಿಸುತ್ತಿಲ್ಲ’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.