ADVERTISEMENT

ಬೆಸ್ಕಾಂ ‘ಇ.ವಿ ಎಕ್ಸ್‌ಪೋ’: ಎಲೆಕ್ಟ್ರಿಕಲ್‌ ವಾಹನ ಉದ್ಯಮದ ಅನಾವರಣ

ಬೆಸ್ಕಾಂ ಆಯೋಜಿಸಿರುವ ‘ಇ.ವಿ ಎಕ್ಸ್‌ಪೋ’ದಲ್ಲಿ ವೈವಿಧ್ಯಮಯ ವಾಹನಗಳು

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 20:04 IST
Last Updated 1 ಜುಲೈ 2022, 20:04 IST
ನಗರದಲ್ಲಿ ಶುಕ್ರವಾರದಿಂದ ಆರಂಭವಾದ ‘ಇ.ವಿ’ ಎಕ್ಸ್‌ಪೋದಲ್ಲಿ ಗಮನ ಸೆಳೆದ ಎಲೆಕ್ಟ್ರಿಕಲ್‌ ಟ್ರ್ಯಾಕ್ಟರ್   –ಪ್ರಜಾವಾಣಿ ಚಿತ್ರ
ನಗರದಲ್ಲಿ ಶುಕ್ರವಾರದಿಂದ ಆರಂಭವಾದ ‘ಇ.ವಿ’ ಎಕ್ಸ್‌ಪೋದಲ್ಲಿ ಗಮನ ಸೆಳೆದ ಎಲೆಕ್ಟ್ರಿಕಲ್‌ ಟ್ರ್ಯಾಕ್ಟರ್   –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೃಷಿ ಬಳಕೆಗೂ ಎಲೆಕ್ಟ್ರಿಕ್‌ ಟ್ರ್ಯಾಕ್ಟರ್‌, ವೈವಿಧ್ಯಮಯ ಆಕರ್ಷಕ ಬೈಕ್‌ ಮತ್ತು ಕಾರುಗಳು, ಆ್ಯಪ್‌ ಮೂಲಕ ಚಾರ್ಚಿಂಗ್‌ ಸ್ಟೇಷನ್‌ಗಳ ಮಾಹಿತಿ, ಎರಡು ನಿಮಿಷದಲ್ಲಿ ಬ್ಯಾಟರಿ ಬದಲಾವಣೆ ವ್ಯವಸ್ಥೆ...

ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಎಲೆಕ್ಟಿಕಲ್‌ ವಾಹನಗಳ ಕ್ಷೇತ್ರ ಸಾಧಿಸಿ ರುವ ಪ್ರಗತಿಯ ಅನಾವರಣ ಇದು. ಉತ್ಪಾದಕರು, ಪೂರೈಕೆದಾರರು ಮತ್ತು ಗ್ರಾಹಕರನ್ನು ಒಂದೇ ಸೂರಿನಡಿಯಲ್ಲಿ ಸೇರಿಸಿದ ಈ ಎಕ್ಸ್‌ಪೋ ಹೊಸ ತಂತ್ರಜ್ಞಾನಗಳನ್ನು ಸಹ ಪರಿಚಯಿಸಿದೆ.

ಎಲೆಕ್ಟ್ರಿಕಲ್‌ ವಾಹನಗಳ ಬಳಕೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ‘ಇ.ವಿ’ ಅಭಿಯಾನ ಹಮ್ಮಿಕೊಂಡಿದೆ. ಇದರ ಅಂಗವಾಗಿ ಬೆಸ್ಕಾಂ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದ ಚಾಮರವಜ್ರ ಸಭಾಂಗಣದಲ್ಲಿ ‘ಇ.ವಿ ಎಕ್ಸ್‌ಪೋ’ ಆಯೋಜಿಸಿದೆ. ಶುಕ್ರವಾರ ಆರಂಭವಾದ ಎಕ್ಸ್‌ಪೋ ಭಾನುವಾರದ ವರೆಗೆ ನಡೆಯಲಿದೆ. 90ಕ್ಕೂ ಹೆಚ್ಚು ಕಂಪನಿಗಳು ‘ಇ.ವಿ ಎಕ್ಸ್‌ಪೋ’ದಲ್ಲಿ ಭಾಗವಹಿಸಿವೆ.

ADVERTISEMENT

ಕೃಷಿ ಚಟುವಟಿಕೆಗಳಲ್ಲೂ ಅನು ಕೂಲ ಕಲ್ಪಿಸುವ ಎಲೆಕ್ಟಿಕಲ್‌ ಟ್ರ್ಯಾಕ್ಟರ್‌ ಅನ್ನು ‘ಸೆಲ್ಟಿಸ್ಟಿಯಲ್‌ ಮೊಬಿಲಿಟಿ’ ಕಂಪನಿ ಅಭಿವೃದ್ಧಿಪಡಿಸಿದೆ. 27ಎಚ್‌ಪಿ ಸಾಮರ್ಥ್ಯದ ಈ ಟ್ರ್ಯಾಕ್ಟರ್‌ ಬ್ಯಾಟರಿ ಚಾರ್ಜ್‌ ಮಾಡಲು ಆರು ಗಂಟೆಗಳು ಸಾಕು. ಒಂದು ಬಾರಿ ಚಾರ್ಜ್‌ ಮಾಡಿದರೆ 75 ಕಿಲೋ ಮೀಟರ್‌ ದೂರದವರೆಗೆ ಸಂಚರಿಸುತ್ತದೆ ಮತ್ತು ಜಮೀನುಗಳಲ್ಲಿ ಆರು ಗಂಟೆಗಳ ಕಾಲ ಬಳಸಬಹುದಾಗಿದೆ.

ಈ ಟ್ರ್ಯಾಕ್ಟರ್‌ ಮೌಲ್ಯ ₹6 ಲಕ್ಷದಿಂದ 8 ಲಕ್ಷ. ಡೀಸೆಲ್‌ ಟ್ಯಾಕ್ಟರ್‌ಗೆ ಹೋಲಿಸಿದರೆ ಎಲೆಕ್ಟ್ರಿಕಲ್‌ ಟ್ರ್ಯಾಕ್ಟರ್‌ ಇಂಧನ ಮತ್ತು ನಿರ್ವಹಣೆ ವೆಚ್ಚ ಅತಿ ಕಡಿಮೆ. ಜತೆಗೆ ಸುಲಭವಾಗಿ ಚಲಾಯಿಸಬಹುದು ಎಂದು ಕಂಪನಿಯ ಪ್ರತಿನಿಧಿ ಲಕ್ಷ್ಮೀಕಾಂತ್‌ ವಿವರಿಸಿದರು.

ಐವರು ಪ್ರಯಾಣಿಸುವ ‘ಇ–ರಿಕ್ಷಾ’ ಅಭಿವೃದ್ಧಿಪಡಿಸಿರುವ ನವೋದ್ಯಮ ಕಂಪನಿ ‘ಇಕೊ ಡೈನಾಮಿಕ್‌’, ಈಗಾಗಲೇ ವಿವಿಧ ಮಾದರಿಯ ಮೂರು ಸಾವಿರ ವಾಹನಗಳನ್ನು ಭಾರತದಲ್ಲಿ ಮಾರಾಟ ಮಾಡಿದೆ. ವಿವಿಧ ಕಂಪನಿಗಳ ಕ್ಯಾಂಪಸ್‌ಗಳಲ್ಲಿಯೂ ಈ ವಾಹನಗಳನ್ನು ಹೆಚ್ಚು ಬಳಸಲಾ
ಗುತ್ತಿದೆ. ಈ ವಾಹನಗಳು 100 ಕಿ.ಮೀ. ಸಂಚರಿಸಿದರೆ ₹25 ಮಾತ್ರ ವೆಚ್ಚವಾಗುತ್ತದೆ. ಹೀಗಾಗಿ, ಇದು ಅತ್ಯಂತ ಅಗ್ಗದ ಸಾರಿಗೆ ವಾಹನ ಎಂದು ಕಂಪನಿಯ ಪ್ರತಿನಿಧಿ ವಿವೇಕ್‌ ತಿಳಿಸಿದರು.

ಎರಡೇ ನಿಮಿಷದ ಒಳಗೆ ತ್ರಿಚಕ್ರಗಳ ಬ್ಯಾಟರಿಗಳನ್ನು ಬದಲಾಯಿಸುವ ವ್ಯವಸ್ಥೆ ರೂಪಿಸಿರುವ ‘ಸನ್‌ ಮೊಬಿಲಿಟಿ’ ದೇಶದಾದ್ಯಂತ 101 ಘಟಕಗಳನ್ನು ಸ್ಥಾಪಿಸಿದೆ. ಬೆಂಗಳೂರಿನಲ್ಲೂ 14 ಘಟಕಗಳನ್ನು ಸ್ಥಾಪಿಸಿದೆ. ಅಡುಗೆ ಅನಿಲ ಸಿಲಿಂಡರ್‌ಗಳನ್ನು ಬದಲಾಯಿಸುವ ವ್ಯವಸ್ಥೆಯ ರೀತಿಯಲ್ಲಿ ಈ ಬ್ಯಾಟರಿಗಳನ್ನು
ಬದಲಾಯಿಸಬಹುದಾಗಿದೆ. ದ್ವಿಚಕ್ರ ವಾಹನಗಳ ಬ್ಯಾಟರಿಗಳನ್ನು ಒಂದು ನಿಮಿಷದಲ್ಲಿ ಮತ್ತು ತ್ರಿಚಕ್ರ ವಾಹನಗಳ ಬ್ಯಾಟರಿಗಳನ್ನು ಎರಡು ನಿಮಿಷಗಳ ಒಳಗೆ ಬದಲಾಯಿಸುವ ವ್ಯವಸ್ಥೆಯನ್ನು ‘ಸನ್‌ ಮೊಬಿಲಿಟಿ’ ಹೊಂದಿದೆ.

ಪೆಟ್ರೋಲ್‌ ಬಂಕ್‌ಗಳಲ್ಲಿ ಈ ಘಟಕಗಳನ್ನು ಸ್ಥಾಪಿಸಲು ಅನುಮತಿ ದೊರೆತಿದ್ದು, ಭಾರತೀಯ ತೈಲ ನಿಗಮದ (ಐಒಸಿಲ್‌) ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕಂಪನಿಯ ಪ್ರತಿನಿಧಿ ಪ್ರಜ್ವಲ್‌ ಹೆಗಡೆ ಅವರು
ತಿಳಿಸಿದರು.

ಮಡಚುವ ಇ–ಬೈಸಿಕಲ್‌: ಮಡಚುವ ಎಲೆಕ್ಟಿಕಲ್‌ ಬೈಸಿಕಲ್‌ಗಳು ಎಕ್ಸ್‌ಪೋ ದಲ್ಲಿ ಗಮನಸೆಳೆದವು. 67 ಸಾವಿರ ರೂಪಾಯಿಗಳಿಂದ 1 ಲಕ್ಷ ರೂಪಾಯಿ ಮೌಲ್ಯದ ಈ ಬೈಸಿಕಲ್‌ಗಳು ವಿವಿಧ ಮಾದರಿಯಲ್ಲಿ ಲಭ್ಯ. ಪೆಡಲ್‌ ಮಾಡುವ ಸೌಲಭ್ಯವನ್ನು ಈ ಬೈಸಿಕಲ್‌ಗಳು ಹೊಂದಿವೆ. ಸುಲಭವಾಗಿ ಎಲ್ಲಿಗೆ ಬೇಕಾದರೂ ಕೊಂಡೊ ಯ್ಯಬಹುದಾದ ಈ ಸೈಕಲ್‌ಗಳ ಬ್ಯಾಟರಿಯನ್ನುಒಂದು ಬಾರಿ ಚಾರ್ಜ್‌ ಮಾಡಿದರೆ 120 ಕಿಲೋ ಮೀಟರ್‌ವರೆಗೂ ಸಂಚರಿಸಹುದಾಗಿದೆ ಎಂದು ಸ್ವಿಚ್‌ ಕಂಪನಿ ಪ್ರತಿನಿಧಿಪುನೀತ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.