
ಬೆಂಗಳೂರು: ಸೀಳು ತುಟಿ ಮತ್ತು ಸೀಳು ಅಂಗುಳದ ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ಒದಗಿಸಲು ಸ್ಮೈಲ್ ಟ್ರೈನ್ ಸಂಸ್ಥೆಯ ಸಹಯೋಗದಲ್ಲಿ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯು ಮೊಬೈಲ್ ಕ್ಲಿನಿಕ್ ಪ್ರಾರಂಭಿಸಿದೆ.
ನಗರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ‘ಸ್ಮೈಲ್ ಟ್ರೈನ್ ಸೀಳು ತುಟಿ ಸಂಚಾರ ಘಟಕ’ಕ್ಕೆ ಚಾಲನೆ ನೀಡಿ, ವ್ಯವಸ್ಥೆಯನ್ನು ಪರಿಶೀಲಿಸಿದರು. ಈ ಮೊಬೈಲ್ ವ್ಯಾನ್ ಪ್ರತಿ ವಾರ ತಾಲ್ಲೂಕು ಕೇಂದ್ರಗಳಿಗೆ ತೆರಳಲಿದ್ದು, ಉಚಿತವಾಗಿ ವಾಕ್ ಚಿಕಿತ್ಸೆ, ದಂತ ತಪಾಸಣೆ ಹಾಗೂ ಸಾಮಾನ್ಯ ಚಿಕಿತ್ಸೆಗಳನ್ನು ಒದಗಿಸಲಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದಲ್ಲಿ ಆಸ್ಪತ್ರೆಗೆ ಕರೆತರಲಾಗುತ್ತದೆ. ಶಸ್ತ್ರಚಿಕಿತ್ಸೆಯನ್ನೂ ಉಚಿತವಾಗಿ ಮಾಡಲಾಗುತ್ತದೆ.
ಈ ವೇಳೆ ಮಾತನಾಡಿದ ದಿನೇಶ್ ಗುಂಡೂರಾವ್, ‘ಸೀಳು ತುಟಿ ಅಥವಾ ಸೀಳು ಅಂಗುಳದ ಸಮಸ್ಯೆ ಎದುರಿಸುತ್ತಿರುವ ಮಕ್ಕಳು ಬೆರೆಯವರೊಂದಿಗೆ ಬೆರೆಯಲು ಹಿಂಜರಿಯುತ್ತಾರೆ. ಆತ್ಮವಿಶ್ವಾಸದ ಕೊರತೆ ಎದುರಿಸಿ, ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಶ್ರವಣ ಸಮಸ್ಯೆಯಿಂದ ಕಲಿಕೆಯಲ್ಲಿ ಹಿಂದೆ ಬೀಳುವ ಸಂಭವವೂ ಇರುತ್ತದೆ. ಶಸ್ತ್ರಚಿಕಿತ್ಸೆಯ ಮೂಲಕ ಈ ಸಮಸ್ಯೆಯನ್ನು ನಿವಾರಿಸಬಹುದಾಗಿದೆ. ಬಡ ಕುಟುಂಬದ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ಒದಗಿಸುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.
ಸೀಳು ತುಟಿ ಮತ್ತು ಸೀಳು ಅಂಗುಳದ ಶಸ್ತ್ರಚಿಕಿತ್ಸೆಯ ಯೋಜನಾ ನಿರ್ದೇಶಕ ಡಾ. ಪ್ರೀತಮ್ ಶೆಟ್ಟಿ, ‘ಸೀಳು ತುಟಿ ಮತ್ತು ಸೀಳು ಅಂಗುಳದ ಸಮಸ್ಯೆ ನಿವಾರಣೆಗೆ ಶಸ್ತ್ರಚಿಕಿತ್ಸೆ ನಡೆಸಿ, ವಾಕ್ ಥೆರಪಿ ನೀಡಬೇಕಾಗುತ್ತದೆ. ಹಲ್ಲಿನ ಆರೋಗ್ಯದ ಕಡೆಗೂ ಗಮನ ಹರಿಸಬೇಕಾಗುತ್ತದೆ. 18 ವರ್ಷಗಳಿಂದ ಸೀಳು ತುಟಿ ಮತ್ತು ಸೀಳು ಅಂಗುಳ ಸಮಸ್ಯೆಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಜತೆಗೆ ಥೆರಪಿ ಸೇರಿ ವಿವಿಧ ಚಿಕಿತ್ಸೆಗಳನ್ನು ಒದಗಿಸಲಾಗುತ್ತಿದೆ. ಮಗುವಿಗೆ ಹುಟ್ಟಿನಿಂದ 18 ವರ್ಷದವರೆಗೆ ಎಲ್ಲ ರೀತಿಯ ಚಿಕಿತ್ಸೆ ನೀಡಲಾಗುತ್ತದೆ. ವಾಕ್ ಥೆರಪಿಗೆ ದೂರದ ಊರುಗಳಿಂದ ಆಸ್ಪತ್ರೆಗೆ ಬರುವುದನ್ನು ತಪ್ಪಿಸಲು ಈ ಮೊಬೈಲ್ ವ್ಯಾನ್ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.
‘ಸ್ಮೈಲ್ ಟ್ರೈನ್ ಸಂಸ್ಥೆ ಉಚಿತವಾಗಿ ಬಸ್ ನೀಡಿದ್ದು, ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯು ವೈದ್ಯರನ್ನು ಒದಗಿಸಲಿದೆ. ಈ ಬಸ್‌ನಲ್ಲಿ ಹಲ್ಲಿನ ಆರೈಕೆಯ ಚಿಕಿತ್ಸೆಯೂ ದೊರೆಯಲಿದೆ. ಬಸ್‌ನಲ್ಲಿ ಐದಾರು ಮಂದಿ ವೈದ್ಯರು ತೆರಳಲು ಅವಕಾಶವಿದೆ. 18 ವರ್ಷಗಳಲ್ಲಿ ಹತ್ತು ಸಾವಿರಕ್ಕೂ ಅಧಿಕ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಪ್ರತಿ ತಿಂಗಳು 40ರಿಂದ 50 ಮಂದಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.