ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಬುಧವಾರ ರಾಜ್ಯದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಯಿತು. ರಾಜ್ಯ ಸರ್ಕಾರದ ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳಿಗೂ ಪ್ರತಿಭಟನಕಾರರು ವಿರೋಧ ವ್ಯಕ್ತಪಡಿಸಿದರು.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ಭಾರತ್ ಬಂದ್‌ಗೆ ಕರೆ ನೀಡಲಾಗಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲೆಗಳ ವಿವಿಧ ಕಾರ್ಮಿಕ ಸಂಘಟನೆಗಳ ಸಾವಿರಾರು ಸದಸ್ಯರು ಪಾಲ್ಗೊಂಡಿದ್ದರು.
ಕೆಲವು ಸಂಘಟನೆಗಳು ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ನಡೆಸಲು ನಿರ್ಧರಿಸಿದ್ದವು. ಆದರೆ, ಪೊಲೀಸರು ಅವಕಾಶ ನೀಡದ ಕಾರಣ ಮೆರವಣಿಗೆ ನಡೆಯಲಿಲ್ಲ. ಸ್ವಾತಂತ್ರ್ಯ ಉದ್ಯಾನದಲ್ಲಿ ಕೆಂಪು ಬಾವುಟ ಹಾಗೂ ಭಿತ್ತಿಚಿತ್ರಗಳೇ ತುಂಬಿ ಹೋಗಿದ್ದವು. ಬಹುತೇಕ ಉದ್ದಿಮೆಗಳ ಕಾರ್ಮಿಕರು ಕೆಲಸ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಮೈದಾನದಲ್ಲಿ ಜಾಗ ಸಾಲದೇ ರಸ್ತೆಯಲ್ಲೇ ಜನ ನಿಲ್ಲುವಂತಾಯಿತು.
ಕಾರ್ಮಿಕ ಸಂಬಂಧಿ 29 ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾಡಿರುವ ಕೇಂದ್ರದ ಶಾಸನಗಳ ನಿಯಮಾವಳಿಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಬಾರದು. ಕಾರ್ಮಿಕರ ಪರವಾದ ಕಾನೂನುಗಳು ಜಾರಿಯಾಗಬೇಕು. ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರನ್ನು ಕಾಯಂ ಮಾಡಬೇಕು. ಅಲ್ಲಿಯವರೆಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಸರ್ಕಾರಿ ನೌಕರರಿಗೆ ನೀಡುವ ವೇತನವನ್ನು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕರಿಗೆ ನೀಡಬೇಕು. ಮುಷ್ಕರದ ಸಂದರ್ಭದಲ್ಲಿ ವಜಾಗೊಂಡ ಕಾರ್ಮಿಕರನ್ನು ಷರತ್ತಿಲ್ಲದೆ ಪುನರ್ ನೇಮಕಮಾಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಹೊಸದಾಗಿ ಜಾರಿಗೆ ತಂದಿರುವ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ (ಬಿಎಸ್‌ಎ) ಎಂಬ ಮೂರು ಕ್ರಿಮಿನಲ್ ಕಾನೂನುಗಳನ್ನು ರದ್ದುಗೊಳಿಸಲು ರಾಜ್ಯ ಸರ್ಕಾರ ಒತ್ತಾಯಿಸಬೇಕು. ಅತಿ ಹೆಚ್ಚು ದಂಡ ವಿಧಿಸುವ ಜನ ವಿರೋಧಿ ಮೊಟಾರು ವಾಹನ (ತಿದ್ದುಪಡಿ) ಕಾಯಿದೆ 2019 ಹಾಗೂ ಮೇಜರ್ ಪೋರ್ಟ್ ಅಥಾರಿಟೀಸ್ ಕಾಯಿದೆ 2021 ಅನ್ನು ಕೈಬಿಡಲು ರಾಜ್ಯ ಸರ್ಕಾರ ಒತ್ತಾಯಿಸಬೇಕು ಎಂದು ತಿಳಿಸಿದರು.
ಕೌಶಲರಹಿತ ಕಾರ್ಮಿಕರಿಗೆ ಕನಿಷ್ಠ ತಿಂಗಳಿಗೆ ₹ 31,566 ವೇತನ ನೀಡಬೇಕು. ಅಪಾಯಕಾರಿ ವಲಯದಲ್ಲಿ ಮಹಿಳೆಯರನ್ನು ದುಡಿಸಿಕೊಳ್ಳಲು ಅವಕಾಶ ನೀಡುವುದನ್ನು ಕೈಬಿಡಬೇಕು. ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ವಾಪಸ್ ಪಡೆಯಬೇಕು. ಬಿಸಿಯೂಟ ಯೋಜನೆಯ ಯಾವುದೇ ಸ್ವರೂಪದ ಖಾಸಗೀಕರಣ ಕೈಬಿಡಬೇಕು ಎಂಬುದು ಸೇರಿದಂತೆ 37 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಆಶಾ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಯಕರ್ತೆಯರು, ಸರ್ಕಾರಿ ಸ್ವಾಯತ್ತ ಸಂಸ್ಥೆಗಳ ಕಾರ್ಮಿಕರು, ಖಾಸಗಿ ಕಂಪನಿಗಳ ಕಾರ್ಮಿಕರು, ರೈತರು, ಕೂಲಿ ಕಾರ್ಮಿಕರು ಭಾಗವಹಿಸಿದ್ದರು.
ಸಿಐಟಿಯುನ ವರಲಕ್ಷ್ಮೀ, ಎಐಟಿಯುಸಿಯ ವಿಜಯ ಭಾಸ್ಕರ್, ಇಂಟಕ್‌ನ ಶಾಮಣ್ಣ ರೆಡ್ಡಿ, ಎಚ್‌ಎಂಎಸ್‌ನ ನಾಗನಾಥ್, ಎಐಯುಟಿಯುಸಿ ಸಂಘಟನೆಯ ಕೆ.ವಿ. ಭಟ್, ಎಐಸಿಸಿಟಿಯುನ ಅಪ್ಪಣ್ಣ, ಟಿಯುಸಿಸಿಯ ಜಿ.ಆರ್. ಶಿವಶಂಕರ್, ಎಚ್‌ಎಂಕೆಪಿಯ ಕಾಳಪ್ಪ, ಕೆಐಇಇಎಫ್‌ನ ಗಂಗಣ್ಣ, ಕೆಡಬ್ಲ್ಯುಯುನ ಇ.ಕೆ.ಎನ್. ರಾಜನ್, ಎನ್‌ಸಿಎಲ್‌ನ ಪಿ.ಕೆ. ಸ್ವಾಮಿ ಸೇರಿದಂತೆ ಅನೇಕ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.