ಬೆಂಗಳೂರು: ‘ಯಾವುದೇ ಸಂಸ್ಕೃತಿ, ಧರ್ಮ ಅಥವಾ ನಾಗರಿಕತೆ ಮಾಯವಾದರೆ ಈ ಜಗತ್ತು ಬಡವಾಗುತ್ತದೆ. ಪ್ರತಿಯೊಂದು ಸಂಸ್ಕೃತಿಯೂ ಜಗತ್ತಿನ ಪರಂಪರೆಯ ಒಂದು ಭಾಗವಾಗಿರುವ ಕಾರಣ ಎಲ್ಲಾ ಸಂಸ್ಕೃತಿಯನ್ನು ಸಂರಕ್ಷಿಸಿ, ಉಳಿಸಬೇಕು’ ಎಂದು ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಹೇಳಿದರು.
ಆರ್ಟ್ ಆಫ್ ಲಿವಿಂಗ್ ಆವರಣದಲ್ಲಿ ಆಯೋಜಿಸಿದ್ದ ‘ಭಾವ್ 2025’ ರಲ್ಲಿ ಪಾಲ್ಗೊಂಡು ಮಾತನಾಡಿದರು.
ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಮಾತನಾಡಿ, ‘ಪ್ರಯಾಗ್‌ರಾಜ್‌ನ ಮಹಾಕುಂಭದಲ್ಲಿ ಎಲ್ಲಾ ಜಾತಿಗಳ ಜನರು, ವಿವಿಧ ದೈವಗಳನ್ನು ಪ್ರಾರ್ಥಿಸುವವರು ಒಂದಾಗಿ ಸೇರಿದ್ದಾರೆ. ಅದು ಧಾರ್ಮಿಕ ಕುಂಭವಾಗಿದ್ದರೆ, ಇಲ್ಲಿ ಭಾವ್ 2025ರ ಹೆಸರಿನಲ್ಲಿ ಕಲಾವಿದರ, ಕಲಾ ಸಾಧಕರ ಕುಂಭ ನಡೆಯುತ್ತಿದೆ’ ಎಂದರು.
ಕಾರ್ಯಕ್ರಮದಲ್ಲಿ ವರ್ಲ್ಡ್ ಫೋರಂ ಫಾರ್ ಆರ್ಟ್ಸ್ ಆ್ಯಂಡ್ ಕಲ್ಚರ್ಸ್‌ನ (ಡಬ್ಲ್ಯುಎಫ್ ಎಸಿಯ) ನಿರ್ದೇಶಕಿ ಶ್ರೀವಿದ್ಯಾ ವರ್ಚಸ್ವಿ, ಮಂಜಮ್ಮ ಜೋಗತಿ, ಓಂ ಪ್ರಕಾಶ್ ಶರ್ಮಾ, ಉಮಾ ಮಹೇಶ್ವರಿ, ಆಂಧ್ರದ ಹರಿಕಥಾ ದಿಗ್ಗಜ ಚಿತ್ರವೀಣಾ ಎನ್.ರವಿಕಿರಣ್ ಹಾಜರಿದ್ದರು.
ಜೀವಮಾನ ಸಾಧನೆಗಾಗಿ 94ರ ಹರೆಯದ ವೀಣಾ ವಿದ್ವಾನ್ ಆರ್.ವಿಶ್ವೇಶ್ವರನ್, ಮೃದಂಗ ವಿದ್ವಾನ್ ಎ.ಆನಂದ್, ಯಕ್ಷಗಾನ ಕಲಾವಿದರಾದ ಬನ್ನಂಜೆ ಸುವರ್ಣ, ಗಾಯಕ ಅತುಲ್ ಪುರೋಹಿತ್ ಹಾಗೂ ಇತರೆ ಸಾಧಕರಿಗೆ 2025ನೇ ಸಾಲಿನ ಕಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
‘ಸೀತಾಚರಿತಂ’ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚಿನ ಕಲಾವಿದರು, 30 ನೃತ್ಯ ಹಾಗೂ ಸಂಗೀತ ಪ್ರಕಾರಗಳು, ನೇರ ಕಲಾ ಪ್ರದರ್ಶನದ ಮೂಲಕ ಜಗತ್ತಿನ 180 ರಾಷ್ಟ್ರಗಳಲ್ಲಿ ಪ್ರಸಾರವಾದವು. ದೇಶದ ಶ್ರೀಮಂತ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಲು ಆಯೋಜಿಸಲಾಗಿದ್ದ ಭಾವ್ 2025ರಲ್ಲಿ ವೈವಿಧ್ಯಮಯ ಪ್ರದರ್ಶನ ಗಮನ ಸೆಳೆಯಿತು.
ಪಶ್ಚಿಮ ಬಂಗಾಳದ ಲಿಂಗತ್ವ ಅಲ್ಪಸಂಖ್ಯಾತ ಕಲಾವಿದರ ತಂಡವು ಪ್ರದರ್ಶಿಸಿದ ಸಪ್ತಮಾತೃಕೆಯರ ನೃತ್ಯ ಮತ್ತು ಆರ್ಟ್ ಆಫ್ ಲಿವಿಂಗ್‌ನ ‘ಔಟ್ ಆಫ್ ಬಾಕ್ಸ್' ಮ್ಯೂಸಿಕ್ ಬ್ಯಾಂಡ್ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.