
ಜೈ ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿಯು ಗುರುವಾರ ಆಯೋಜಿಸಿದ್ದ ಭೀಮಾ ಕೋರೆಗಾಂವ್ 208ನೇ ವರ್ಷದ ಸಂಭ್ರಮಾಚರಣೆ
ಬೆಂಗಳೂರು: ಭಾರತೀಯ ದಲಿತ ಪ್ಯಾಂಥರ್ ರಾಜ್ಯ ಸಮಿತಿಯು ಫೆ.3ರಂದು ಬೆಳಿಗ್ಗೆ 11 ಗಂಟೆಗೆ ಗಾಂಧಿ ಭವನದಲ್ಲಿ ‘ಭೀಮಾ ಕೋರೆಗಾಂವ್ ವಿಜಯೋತ್ಸವ’ ಹಾಗೂ ‘ದಲಿತರ ಮುಂದಿನ ಸವಾಲುಗಳು’ ವಿಷಯದ ಮೇಲೆ ವಿಚಾರಸಂಕಿರಣ ಹಮ್ಮಿಕೊಂಡಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಮಲ್ಲಪ್ಪ ಹೊಸ್ಮನಿ ಇಂಗನಕಲ್, ‘ಜ್ಞಾನಪ್ರಕಾಶ ಸ್ವಾಮೀಜಿ, ವರಜ್ಯೋತಿ ಭಂತೇಜಿ ಅವರು ಸಾನ್ನಿಧ್ಯ ವಹಿಸಲಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ’ ಎಂದು ಹೇಳಿದರು.
‘ಬಿ.ಆರ್. ಅಂಬೇಡ್ಕರ್ ಹಾಗೂ ವಿವಿಧ ಮಹಾ ಪುರುಷರ ವಿಚಾರಧಾರೆಗಳನ್ನು ಯುವಜನರಿಗೆ ತಿಳಿಸುವುದು, ಸಂವಿಧಾನ ರಕ್ಷಣೆಗಾಗಿ ಹೋರಾಟಕ್ಕೆ ಅಣಿಗೊಳಿಸುವುದು, ಧರ್ಮದ ಹೆಸರಿನಲ್ಲಿ ಯುವಕರನ್ನು ಬೀದಿಪಾಲು ಮಾಡುತ್ತಿರುವ ಕೇಂದ್ರ ಸರ್ಕಾರದ ನೀತಿಗಳನ್ನು ಧಿಕ್ಕರಿಸುವುದು ವಿಚಾರ ಸಂಕಿರಣದ ಆಶಯವಾಗಿದೆ’ ಎಂದರು.
‘ಭೀಮಾ ಕೋರೆಗಾಂವ್ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ಅಳವಡಿಸುವಂತೆ, ಮರ್ಯಾದೆಗೇಡು ಹತ್ಯೆಯಂತಹ ಹೀನಕೃತ್ಯಗಳ ವಿರುದ್ಧ ಕಠಿಣ ಕಾನೂನು ರೂಪಿಸುವಂತೆ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು’ ಎಂದು ಹೇಳಿದರು.
ಸಮಿತಿಯ ರಾಜ್ಯ ಉಪಾಧ್ಯಕ್ಷ ಆರ್.ತಿಮ್ಮಾರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಸಿ.ದಾನಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಆದಪ್ಪ ಹೊಸಮನಿ ಉಪಸ್ಥಿತರಿದ್ದರು.
8–9ಕ್ಕೆ ರಾಷ್ಟ್ರೀಯ ಅಧಿವೇಶನ
ಬೆಂಗಳೂರು: ಅಖಿಲ ಭಾರತ ಬೌದ್ಧರ ವೇದಿಕೆಯು ಫೆ.8 ಮತ್ತು 9ರಂದು ಬುದ್ಧಗಯಾದಲ್ಲಿ ರಾಷ್ಟ್ರೀಯ ಅಧಿವೇಶನ ಹಮ್ಮಿಕೊಂಡಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ರಾಜ್ಯ ಸಂಚಾಲಕ ಎಂ. ವೆಂಕಟಸ್ವಾಮಿ, ‘ಬುದ್ಧಗಯಾದ ಮಹಾಬೋಧಿ ಮಹಾವಿಹಾರದ ಆಡಳಿತ ಮಂಡಳಿಯಲ್ಲಿ ಅನ್ಯ ಧರ್ಮೀಯರ ಹಸ್ತಕ್ಷೇಪವಿಲ್ಲದೆ, ಬೌದ್ಧ ಬಿಕ್ಕುಗಳು ಮಾತ್ರ ಆಡಳಿತ ನಡೆಸುವಂತಾಗಬೇಕು. ಆದ್ದರಿಂದ ಬುದ್ಧಗಯಾ ಕಾಯ್ದೆ–1949 ರದ್ದು ಮಾಡುವಂತೆ ಹೋರಾಟ ಮಾಡಲಾಗುತ್ತಿದೆ. ರಾಷ್ಟ್ರೀಯ ಅಧಿವೇಶನದಲ್ಲಿ ಮುಂದಿನ ಜನಾಂದೋಲನದ ರೂಪುರೇಷೆ ಸಿದ್ಧಪಡಿಸಲಾಗುವುದು’ ಎಂದು ಹೇಳಿದರು.
‘ಈ ಅಧಿವೇಶನಕ್ಕೆ ದಕ್ಷಿಣ ಭಾರತದಿಂದ 100 ಬೌದ್ಧ ಬಿಕ್ಕುಗಳು ತೆರಳಲಿದ್ದಾರೆ. ಬೌದ್ಧ ಮತ್ತು ಅಂಬೇಡ್ಕರ್‌ವಾದಿ ಸಂಘಟನೆಗಳ ರಾಜ್ಯ ಮುಖಂಡರು ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.