
ಬೆಂಗಳೂರು: ‘ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಸೌಲಭ್ಯಗಳನ್ನು ಪಡೆಯಲು ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಜನವರಿ 15ರೊಳಗೆ ಸಲ್ಲಿಸುವಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಗಡುವು ನೀಡಲಾಗಿದೆ. ಪಟ್ಟಿ ಸಲ್ಲಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ನಿಗಮದ ಅಧ್ಯಕ್ಷ ಎಂ. ರಾಮಪ್ಪ ಎಚ್ಚರಿಕೆ ನೀಡಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2025–26ನೇ ಸಾಲಿನಲ್ಲಿ ಭೋವಿ ನಿಗಮಕ್ಕೆ ₹93.75 ಕೋಟಿ ಅನುದಾನ ಬಿಡುಗಡೆಯಾಗಿದೆ. ಹಿಂದಿನ ವರ್ಷದ ಅನುದಾನ ಸೇರಿಸಿಕೊಂಡು ಒಟ್ಟು ₹164.86 ಕೋಟಿ ವೆಚ್ಚದ ಕ್ರಿಯಾ ಯೋಜನೆ ರೂಪಿಸಲಾಗಿದೆ. ಇದರಲ್ಲಿ ₹68.81 ಕೋಟಿ ಬಳಕೆಯಾಗಿದೆ. ಉಳಿದ ಅನುದಾನವನ್ನು ಮೂರು–ನಾಲ್ಕು ತಿಂಗಳಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು. ನಿಗಮದ ವಿವಿಧ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ಕಳುಹಿಸುವಂತೆ 224 ಶಾಸಕರಿಗೂ ಪತ್ರ ಬರೆದಿದ್ದೇನೆ’ ಎಂದು ತಿಳಿಸಿದರು.
‘ಶೇಕಡ 80ರಷ್ಟು ಫಲಾನುಭವಿಗಳನ್ನು ಶಾಸಕರು, ಶೇ 15ರಷ್ಟು ಫಲಾನುಭವಿಗಳನ್ನು ಸಮಾಜ ಕಲ್ಯಾಣ ಸಚಿವರು ಹಾಗೂ ಶೇ 5ರಷ್ಟು ಫಲಾನುಭವಿಗಳನ್ನು ನಿಗಮದ ಅಧ್ಯಕ್ಷರು ಆಯ್ಕೆ ಮಾಡುತ್ತಾರೆ. ಭೂ ಒಡೆತನ ಯೋಜನೆ ಅಡಿಯಲ್ಲಿ 2025-26ನೇ ಸಾಲಿನಲ್ಲಿ 169 ಮಹಿಳೆಯರಿಗೆ ಜಮೀನು ನೀಡಲಾಗಿದೆ. ಈ ಬಾರಿ ವಿವಿಧ ಯೋಜನೆಗಳ ಅಡಿಯಲ್ಲಿ ಒಟ್ಟು 90 ಸಾವಿರ ಅರ್ಜಿಗಳು ಬಂದಿದ್ದು, ಇದರಲ್ಲಿ 10 ಸಾವಿರ ಅರ್ಜಿಗಳನ್ನು ಪರಿಗಣಿಸಲಾಗುತ್ತದೆ’ ಎಂದು ವಿವರಿಸಿದರು.
‘ನಿಗಮದಲ್ಲಿ ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಲು ಸಮುದಾಯದ ಮುಖಂಡರು ಹಾಗೂ ಅಧಿಕಾರಿಗಳು ಸಹಕಾರ ನೀಡಬೇಕು. ಫಲಾನುಭವಿಗಳು ನೇರವಾಗಿ ನನ್ನನ್ನು ಅಥವಾ ವ್ಯವಸ್ಥಾಪಕ ನಿರ್ದೇಶಕರನ್ನು ಸಂಪರ್ಕಿಸಬಹುದು. ನಿಗಮದಲ್ಲಿರುವ ಸ್ವಯಂ ಉದ್ಯೋಗ ನೇರಸಾಲ, ಉದ್ಯಮ ಶೀಲತೆ, ಮೈಕ್ರೊ ಕ್ರೆಡಿಟ್, ಭೂ ಒಡೆತನ, ಗಂಗಾ ಕಲ್ಯಾಣ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ’ ಎಂದರು.
‘ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಭೋವಿ ಅಭಿವೃದ್ಧಿ ನಿಗಮದ ಶಾಶ್ವತ ಕಚೇರಿ ತೆರೆಯಬೇಕು ಎಂಬ ಉದ್ದೇಶ ಇದೆ. ಮುಂದಿನ ಬಜೆಟ್‌ನಲ್ಲಿ ಭೋವಿ ಅಭಿವೃದ್ಧಿ ನಿಗಮಕ್ಕೆ ₹300 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.