ಬೆಂಗಳೂರು: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಮಹಿಳೆಯರಿಗಾಗಿ ಸ್ಥಾಪಿಸಿರುವ ‘ಭೂಮಿಕಾ ಕ್ಲಬ್’ ವೇದಿಕೆ ವತಿಯಿಂದ ಜೂನ್ 21ರಂದು ಮಧ್ಯಾಹ್ನ 2.30ಕ್ಕೆ ಕೋರಮಂಗಲ ಕ್ಲಬ್‌ನಲ್ಲಿ 28ನೇ ಆವೃತ್ತಿಯ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
‘ಫ್ರೀಡಂ ಹೆಲ್ತಿ ಕುಕ್ಕಿಂಗ್ ಆಯಿಲ್‘, ‘ಮಣಿಪಾಲ್ ಆಸ್ಪತ್ರೆಗಳ ಸಮೂಹ’, ‘ಇಕೊ ಕ್ರಿಸ್ಟಲ್’ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಚಂದನವನದ ನಟಿ ಅಂಕಿತಾ ಅಮರ್ ಉದ್ಘಾಟಿಸಲಿದ್ದಾರೆ. ವಿಚಾರಸಂಕಿರಣ ಹಾಗೂ ಸಂಗೀತ ಕಾರ್ಯಕ್ರಮ ಸೇರಿ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.
ಈ ಬಾರಿ ಪ್ರಮುಖ ಆಕರ್ಷಣೆಯಾಗಿ ‘ಚಂದನವನ’ ರಸಪ್ರಶ್ನೆಯಲ್ಲಿ ಪಾಲ್ಗೊಂಡು ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಕಾರ್ಯಕ್ರಮದಲ್ಲಿ ಭಾಗವಹಿಸುವ ಪಾಸ್‌ಗಳನ್ನು ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿದೆ.
ಒಗ್ಗರಣೆ ಡಬ್ಬಿ ಮುರಳಿ ಮತ್ತು ಸುಚಿತ್ರ ಅವರು ಅಡುಗೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮಣಿಪಾಲ್ ಆಸ್ಪತ್ರೆಯ ಹೃದಯತಜ್ಞೆ ಡಾ. ಅನುಷಾ ಎ. ರಾವ್ ಅವರು ಆರೋಗ್ಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಿನಿ ಸಮ್ಮಾನ ಪುರಸ್ಕಾರ ಸಮಾರಂಭಕ್ಕೆ ಸಿದ್ಧರಾಗುವ ಕುರಿತು ಶೋಭಾ ಬಿ.ಜಿ. ಮಾಹಿತಿ ನೀಡಲಿದ್ದಾರೆ. ದಿವ್ಯಾ ರಾಮಚಂದ್ರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಅಚ್ಚರಿ ಉಡುಗೊರೆ ಗೆಲ್ಲುವ ಅವಕಾಶವೂ ಇರಲಿದೆ. ಮೋಜಿನ ಆಟಗಳು, ಹೈ-ಟೀ ಮತ್ತು ನೆಟ್‌ವರ್ಕಿಂಗ್ ಹೊಂದಿರುವ ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನೋಂದಣಿ ಮಾಡಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.