ADVERTISEMENT

ಕಸ ಎಲ್ಲೆಂದರಲ್ಲಿ: ಇದು ಬಿದರಹಳ್ಳಿ

ತ್ಯಾಜ್ಯ ಸುರಿಯುತ್ತಿರುವವರ ಮೇಲೆ ಯಾವುದೇ ಕ್ರಮ ಕೈಗೊಳ್ಳದ ಗ್ರಾ.ಪಂ.

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 20:02 IST
Last Updated 25 ಆಗಸ್ಟ್ 2025, 20:02 IST
ಬಿದರಹಳ್ಳಿಯಿಂದ ಕಿತ್ತಗನೂರು ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಕಸ ಬಿಸಾಡಿರುವುದು
ಬಿದರಹಳ್ಳಿಯಿಂದ ಕಿತ್ತಗನೂರು ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಕಸ ಬಿಸಾಡಿರುವುದು   

ಕೆ.ಆರ್.ಪುರ: ಬಿದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಮುಖ ರಸ್ತೆಗಳ ಬದಿಯಲ್ಲಿ, ಬೀದಿಬದಿಗಳಲ್ಲಿ ಕಸ ಕಸದ ರಾಶಿ ಬಿದ್ದಿದೆ. ಈ ಬಗ್ಗೆ ಯಾವುದೇ ಕ್ರಮ ವಹಿಸದ ಬಿದರಹಳ್ಳಿ ಪಂಚಾಯಿತಿ ವಿರುದ್ಧ ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿದರಹಳ್ಳಿಯಿಂದ ಕಿತ್ತಗನೂರು ಹಾಗೂ ರಾಂಪುರ ಸಂಪರ್ಕ ಮುಖ್ಯರಸ್ತೆಗಳು, ಪ್ರಮುಖ ಬಿದಿ ಬದಿಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯ, ನಿರ್ಮಾಣ ಹಂತದ ಕಟ್ಟಡಗಳ ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಗ್ರಾಮ ಪಂಚಾಯತಿ ಸರಿಯಾದ ರೀತಿಯಲ್ಲಿ ಕಸ ನಿರ್ವಹಣೆ ಮಾಡುತ್ತಿಲ್ಲ. ಬಿದರಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಹೊಸ ಬಡಾವಣೆಗಳು ತಲೆ ಎತ್ತಿವೆ. ಇದರಿಂದ ಕಸದ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ ಎಂದು ಸ್ಥಳೀಯರು ದೂರಿದರು.

‘ಮಾಂಸದ ಅಂಗಡಿಗಳ ಮಾಲೀಕರು ಕೋಳಿ, ಕುರಿ ಮಾಂಸದ ತ್ಯಾಜ್ಯವನ್ನು ಯಾವುದೇ ಭಯವಿಲ್ಲದೆ ಖಾಲಿ ಜಾಗ, ರಸ್ತೆಗಳಲ್ಲಿ ಸುರಿದು ಹೋಗುತ್ತಾರೆ. ತ್ಯಾಜ್ಯ ಸಂಗ್ರಹಗೊಂಡು ಗಬ್ಬು ನಾರುತ್ತಿದೆ. ಆದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಈ ಸಮಸ್ಯೆಗೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ’ ಎಂದು ಬಿದರಹಳ್ಳಿ ನಿವಾಸಿ ರಮೇಶ್ ದೂರಿದರು.

ADVERTISEMENT

ಮುಖ್ಯರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಶಾಲೆ, ಕಾಲೇಜುಗಳಿಗೆ ಇದೇ ಮಾರ್ಗದಲ್ಲಿ ಸಂಚರಿಸಬೇಕಿದೆ. ಕೆಲವೊಮ್ಮೆ ತ್ಯಾಜ್ಯಕ್ಕೆ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ತ್ಯಾಜ್ಯದ ವಿಷಪುರಿತ ಗಾಳಿ ಸಾರ್ವಜನಿಕರ ಶ್ವಾಸಕೋಶ ಸೇರುತ್ತಿದೆ ಎಂದು ಹೇಳಿದರು.

ಕಸ ಸುರಿಯದಂತೆ ಗ್ರಾಮ ಪಂಚಾಯಿತಿ ಕಾಟಚಾರಕ್ಕೆ ನೋಟಿಸ್ ಬೋರ್ಡ್‌ಗಳನ್ನು ಹಾಕಿ ಕೈತೊಳೆದುಕೊಂಡಿದೆ. ಕಸ ಸುರಿಯುವವರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ. ಗ್ರಾಮ ಪಂಚಾಯಿತಿ ಸಿಬ್ಬಂದಿ ಕಚೇರಿಗೆ  ಸಿಮೀತರಾಗಿದ್ದಾರೆ. ಹಿರಿಯ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಧಿಕಾರಿಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಬಿದರಹಳ್ಳಿ ನಿವಾಸಿ ದಿಲೀಪ್ ದೂರಿದರು.

ಹಿರಂಡಹಳ್ಳಿಯಲ್ಲೂ ಕಸದ ಸಮಸ್ಯೆ ವ್ಯಾಪಕವಾಗಿದೆ. ಎಲ್ಲೆಂದರಲ್ಲಿ ಕಸ ಸುರಿಯುವುದರಿಂದ ಬೀದಿ ನಾಯಿಗಳು ಆಹಾರ ಹುಡುಕಿಕೊಂಡು ರಸ್ತೆಗೆ ಬರುತ್ತವೆ. ನಾಯಿಗಳು ಅಡ್ಡಬಂದು ಹಲವು ಬಾರಿ ರಸ್ತೆ ಅಪಘಾತಗಳು ಉಂಟಾಗಿವೆ ಎಂದು ದಲಿತ ಮುಖಂಡ ಅದೂರು ಮಂಜುನಾಥ್ ಹೇಳಿದರು.

ಕಸ ವಿಲೇವಾರಿ ಮಾಡುತ್ತಿಲ್ಲ. ರಸ್ತೆಯ ಅಕ್ಕಪಕ್ಕದಲ್ಲಿ ಬೆಳೆದಿರುವ ಹುಲ್ಲು ತೆಗೆದು ಸ್ವಚ್ಛಗೊಳಿಸುವ ಕಾರ್ಯಗಳೂ ಆಗುತ್ತಿಲ್ಲ. ಚರಂಡಿಗಳು ಕಸಕಡ್ಡಿ ತುಂಬಿ ತುಳುಕುತ್ತಿವೆ ಎಂದು ಕರ್ನಾಟಕ ರಿಪಬ್ಲಿಕನ್ ಸೇನೆಯ ಕಾರ್ಮಿಕ ಘಟಕದ ಅಧ್ಯಕ್ಷ ಕಾವೇರಪ್ಪ ಹೇಳಿದರು.

ಎಲ್ಲೆಂದರಲ್ಲಿ ಬಿಸಾಡಿರುವ ಕಸವನ್ನು ವಿಲೇವಾರಿ ಮಾಡಬೇಕು. ಕಸ ತಂದು ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬಿದರಹಳ್ಳಿ ರಾಂಪುರ ಮುಖ್ಯರಸ್ತೆಯಲ್ಲಿ ಕಸ ಬಿದ್ದರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.