ADVERTISEMENT

ಬಿಗ್‌ಬಾಸ್‌ | ಸಮಯಾವಕಾಶ ನೀಡುವ ಅಧಿಕಾರ ಜಿಲ್ಲಾಧಿಕಾರಿಗೆ ಇಲ್ಲ: ನರೇಂದ್ರ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 10:54 IST
Last Updated 8 ಅಕ್ಟೋಬರ್ 2025, 10:54 IST
   

ಬೆಂಗಳೂರು: ‘ಬಿಡದಿಯ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್‌ ಬೀಗಮುದ್ರೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದ್ದು, ಅವರಿಗೆ ಸಮಯಾವಕಾಶ ನೀಡುವ ಅಧಿಕಾರ ಜಿಲ್ಲಾಧಿಕಾರಿಗೆ ಇಲ್ಲ’ ಎಂದು ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ ಸ್ಪಷ್ಟಪಡಿಸಿದರು.

‘ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಿರುವ ಕಾನೂನು ಅಧಿಕಾರದಂತೆ ಜಾಲಿವುಡ್‌ ಸ್ಟುಡಿಯೋಸ್‌ಗೆ 2024ರಿಂದ ಮೂರು ನೋಟಿಸ್‌ ನೀಡಿ, ಅಂತಿಮವಾಗಿ ಬೀಗಮುದ್ರೆಯ ಆದೇಶವನ್ನು ಹೊರಡಿಸಲಾಗಿದೆ. ಈ ಬಗ್ಗೆ, ಸಮಯಾವಕಾಶ ಸೇರಿದಂತೆ ಯಾವುದೇ ರೀತಿಯ ಕ್ರಮವಾಗಬೇಕಿದ್ದರೆ ಮಾಲಿನ್ಯ ನಿಯಂತ್ರಣ ಮಂಡಳಿಯವರಿಗೇ ಆ ಸಂಸ್ಥೆಯವರು ಮನವಿ ಸಲ್ಲಿಸಬೇಕು. ಮನವಿ ಪರಿಶೀಲಿಸಿ, ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುತ್ತದೆ’ ಎಂದು ಸುದ್ದಿಗಾರರಿಗೆ ಬುಧವಾರ ತಿಳಿಸಿದರು.

‘ಜಾಲಿವುಡ್‌ ಸ್ಟುಡಿಯೋಸ್‌ 30 ಎಕರೆ ಪ್ರದೇಶದಲ್ಲಿದೆ. ಅಲ್ಲಿ ಜಲಮಾಲಿನ್ಯ ಸೇರಿದಂತೆ ಇತರೆ ಮಾಲಿನ್ಯವಾಗುತ್ತಿರುವುದಕ್ಕೆ ಆ ಸಂಸ್ಥೆಗೆ ನೋಟಿಸ್‌ ನೀಡಿ, ಬೀಗಹಾಕಲಾಗಿದೆ. ಅಲ್ಲಿನ ಒಂದೂವರೆ ಎಕರೆ ಪ್ರದೇಶದಲ್ಲಿ ನಡೆಯುತ್ತಿರುವ ಬಿಗ್‌ಬಾಸ್‌ ಕಾರ್ಯಕ್ರಮಕ್ಕೂ ಮಂಡಳಿಗೂ ಯಾವುದೇ ಸಂಬಂಧ ಇಲ್ಲ. ಬಿಗ್‌ಬಾಸ್‌ಗೆ ನಾವು ನೋಟಿಸ್‌ ನೀಡಿಲ್ಲ. ಬಿಗ್‌ಬಾಸ್‌ಗೆ ಮೋಸವಾಗಿದ್ದರೆ ಜಾಲಿವುಡ್‌ ಸ್ಟುಡಿಯೋಸ್‌ ಅದಕ್ಕೆ ಕಾರಣ’ ಎಂದು ಅವರು ಹೇಳಿದರು.

ADVERTISEMENT

‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸರ್ಕಾರ ಹಾಗೂ ಬಹುಜನರ ಪ್ರತಿನಿಧಿ. ಅವರು ಯಾವ ಸಂದರ್ಭದಲ್ಲಿ ಜಾಲಿವುಡ್‌ ಸಂಸ್ಥೆಗೆ ಕಾಲಾವಕಾಶ ನೀಡಲಾಗುತ್ತದೆ ಎಂದು ಹೇಳಿದ್ದಾರೋ ಅದು ನನಗೆ ಗೊತ್ತಿಲ್ಲ. ನನ್ನೊಂದಿಗೆ ಅವರು ಮಾತನಾಡಿಲ್ಲ. ಜಾಲಿವುಡ್‌ಗೆ ಬೀಗ ಹಾಕಲು ಮಂಡಳಿಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇದರ ಬಗ್ಗೆ ಜಿಲ್ಲಾಧಿಕಾರಿಯಾಗಲಿ, ಇತರೆ ಅಧಿಕಾರಿಯಾಗಿ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ’ ಎಂದರು.

‘ಜಾಲಿವುಡ್‌ ಸಂಸ್ಥೆಯವರು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ’ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ನರೇಂದ್ರ ಸ್ವಾಮಿ, ‘ಮಾಲಿನ್ಯ ನಿಯಂತ್ರಣ ಮಂಡಳಿಗೆ ಅವರು ಮನವಿ ಸಲ್ಲಿಸಬೇಕು. ಮಂಡಳಿ ಆದೇಶ ಹೊರಡಿಸಿರುವುದರಿಂದ ಬೇರೆ ಯಾರಿಗೋ ಮನವಿ ಸಲ್ಲಿಸಿದರೆ ಅದು ಪ್ರಯೋಜನಕ್ಕೆ ಬರುವುದಿಲ್ಲ. ಏನಿದ್ದರೂ ಕಾನೂನು ಪ್ರಕಾರವೇ ಮುಂದಿನ ಪ್ರಕ್ರಿಯೆ ನಡೆಯಲಿದೆ’ ಎಂದು ಹೇಳಿದರು.

‘ಬೀಗಮುದ್ರೆ ಹಾಕಿದ ಮೇಲೆ ಜಾಲಿವುಡ್‌ ಸ್ಟುಡಿಯೋಸ್‌ ಸಂಸ್ಥೆಯವರು ನನಗೆ ಕರೆ ಮಾಡಿದ್ದರು. ಸೆಪ್ಟೆಂಬರ್‌ 30ರಂದೇ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅದರ ಬಗ್ಗೆ ನಮಗೆ ಮಾಹಿತಿ ಇತ್ತು. ನೀವು ನ್ಯಾಯಾಲಯದಲ್ಲಿ ಅರ್ಜಿ ಹಾಕಿ ಇಲ್ಲಿ ಮಾತನಾಡಿದರೆ ಸರಿಹೋಗುವುದಿಲ್ಲ. ಮನವಿ ಸಲ್ಲಿಸಿದರೆ ಪರಿಶೀಲಿಸಬಹುದು. ನ್ಯಾಯಾಲಯದಲ್ಲೇ ತೀರ್ಮಾನ ಮಾಡಿಕೊಳ್ಳುತ್ತೇವೆ ಎಂದರೆ ಅದು ನಿಮ್ಮ ನಿರ್ಣಯ ಎಂದು ಅವರಿಗೆ ತಿಳಿಸಿದ್ದೆ’ ಎಂದು ನರೇಂದ್ರ ಸ್ವಾಮಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.