ಸಾಂದರ್ಭಿಕ ಚಿತ್ರ
ಬೆಂಗಳೂರು: ಜೆ.ಪಿ. ನಗರದ ಆರನೇ ಹಂತದಲ್ಲಿ ಬೈಕ್ ತಾಗಿದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಟೆಕಿ ಮೇಲೆ ಇಬ್ಬರು ಅಪರಿಚಿತರು ಹಲ್ಲೆ ನಡೆಸಿ ಪರಾರಿ ಆಗಿದ್ದಾರೆ.
ಹಲ್ಲೆಗೆ ಒಳಗಾಗಿರುವ ಟೆಕಿ ಪ್ರತೀಕ್ ಅವರು ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಹಲ್ಲೆ ನಡೆಸಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿಸಿದ್ದಾರೆ.
ಹುಳಿಮಾವು ನಿವಾಸಿ ಪ್ರತೀಕ್ ಅವರು ಬುಧವಾರ ಬೆಳಿಗ್ಗೆ ಬೈಕ್‍ನಲ್ಲಿ ಕಚೇರಿಗೆ ತೆರಳುತ್ತಿದ್ದರು. ಜೆ.ಪಿ. ನಗರ ಆರನೇ ಹಂತದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಇಬ್ಬರು ಅಪರಿಚಿತರು ಪ್ರತೀಕ್ ಅವರ ಬೈಕ್‍ಗೆ ದಾರಿ ಬಿಡಲಿಲ್ಲ. ಪ್ರತೀಕ್ ಅವರೇ ಬೈಕ್ ಅನ್ನು ನಿಧಾನವಾಗಿ ಮುಂದಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದರು. ಆಗ ಬೈಕ್ ಆಕಸ್ಮಿಕವಾಗಿ ಅಪರಿಚಿತರಿಗೆ ತಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬೈಕ್ ತಾಗಿದ್ದರಿಂದ ಕೆರಳಿದ ಆರೋಪಿಗಳು ಬೈಕ್ ಕೀ ಕಿತ್ತುಕೊಂಡು ವಾಗ್ವಾದ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಪ್ರತೀಕ್, ಅಪರಿಚಿತರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದರು. ಇದರಿಂದ ಕೋಪಗೊಂಡ ಆರೋಪಿಗಳು ಮರದ ತುಂಡಿನಿಂದ ಪ್ರತೀಕ್ ಅವರ ತಲೆಗೆ ಹೊಡೆದು ಪರಾರಿ ಆಗಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿ ಪರಿಶೀಲಿಸಿ ಆರೋಪಿಗಳ ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.