ADVERTISEMENT

ಬೈಕ್‌ ಟ್ಯಾಕ್ಸಿ ನಿರ್ಬಂಧ ಆರಂಭ: ಮೊದಲ ದಿನವೇ 103 ದ್ವಿಚಕ್ರ ವಾಹನ ವಶ

ಹೊಸ ನಿಯಮ ರೂಪಿಸಿ ಅವಕಾಶ ನೀಡಲು ಬೈಕ್‌ ಟ್ಯಾಕ್ಸಿ ಅಸೋಸಿಯೇಶನ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 0:34 IST
Last Updated 17 ಜೂನ್ 2025, 0:34 IST
ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿರುವ ಬೈಕ್‌ ಟ್ಯಾಕ್ಸಿಗಳು
ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿರುವ ಬೈಕ್‌ ಟ್ಯಾಕ್ಸಿಗಳು   

ಬೆಂಗಳೂರು: ಹೈಕೊರ್ಟ್ ಆದೇಶದಂತೆ ಬೈಕ್‌ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಲು ಸಾರಿಗೆ ಅಧಿಕಾರಿಗಳು ಸೋಮವಾರ ವಿವಿಧೆಡೆ ಕಾರ್ಯಾಚರಣೆ ನಡೆಸಿ, 103 ಬೈಕ್‌ ಟ್ಯಾಕ್ಸಿಗಳನ್ನು ವಶಪಡಿಸಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ‘ನಮ್ಮ ಹೊಟ್ಟೆಗೆ ಹೊಡೆಯಬೇಡಿ. ಬೈಕ್‌ ಟ್ಯಾಕ್ಸಿಗಳಿಗಾಗಿಯೇ ಹೊಸ ನಿಯಮ ರೂಪಿಸಿ’ ಎಂದು ಬೈಕ್‌ ಟ್ಯಾಕ್ಸಿ ಅಸೋಸಿಯೇಶನ್‌ ಆಗ್ರಹಿಸಿದೆ.

ಬೆಂಗಳೂರು ಕೇಂದ್ರ, ಬೆಂಗಳೂರು ಪಶ್ಚಿಮ, ಬೆಂಗಳೂರು ಪೂರ್ವ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಜ್ಞಾನಭಾರತಿ, ದೇವನಹಳ್ಳಿ, ಯಲಹಂಕ, ಎಲೆಕ್ಟ್ರಾನಿಕ್‌ ಸಿಟಿ, ಕೆ.ಆರ್‌. ಪುರ, ಚಂದ್ರಾ‍ಪುರ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.

ADVERTISEMENT

ಉಬರ್‌ ಇಂಡಿಯಾ ಸಿಸ್ಟಮ್ಸ್‌ ಪ್ರೈವೇಟ್‌ ಲಿಮಿಟೆಡ್‌, ರೊಪ್ಪೆನ್‌ ಟ್ರಾನ್ಸ್‌ಪೋರ್ಟೇಶನ್‌ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್‌ (ರ‍್ಯಾಪಿಡೊ), ಎಎನ್‌ಐ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ (ಓಲಾ) ಮುಂತಾದ ಕಂಪನಿಗಳ ಅಡಿಯಲ್ಲಿ ಬೈಕ್‌ ಟ್ಯಾಕ್ಸಿಗಳು ಕಾರ್ಯನಿರ್ವಹಿಸುತ್ತಿದ್ದವು.

‘ವೈಯಕ್ತಿಕ ಬಳಕೆಗೆ ಇರುವ ದ್ವಿಚಕ್ರ ವಾಹನಗಳನ್ನು ಪ್ರಯಾಣಿಕರನ್ನು ಒಯ್ಯಲು ಅನಧಿಕೃತವಾಗಿ ಬಳಸಲಾಗುತ್ತಿದೆ. ಪ್ರಯಾಣಿಕರಿಗಾಗಿಯೇ ಇರುವ ಆಟೊಗಳಿಗೆ ಇದರಿಂದ ನಷ್ಟ ಉಂಟಾಗುತ್ತಿದೆ’ ಎಂದು ನಗರದ ವಿವಿಧ ಆಟೊ ಸಂಘಟನೆಗಳು ನಾಲ್ಕೈದು ವರ್ಷಗಳಿಂದ ಬೈಕ್‌ ಟ್ಯಾಕ್ಸಿಗಳ ವಿರುದ್ಧ ಪ್ರತಿಭಟನೆ, ಕಾನೂನು ಹೋರಾಟ ಮಾಡಿಕೊಂಡು ಬಂದಿದ್ದವು. ಹಲವು ಬಾರಿ ಹೊಡೆದಾಟಗಳೂ ಆಗಿದ್ದವು. 

ಮೋಟಾರು ವಾಹನ ಕಾಯ್ದೆ–1988ರ ಕಲಂ 93ರ ಅನುಸಾರ ರಾಜ್ಯ ಸರ್ಕಾರ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ತನಕ ಸಂಬಂಧಿತ ಸಂಸ್ಥೆಗಳಾದ ಓಲಾ, ಉಬರ್‌ ಮತ್ತು ರ‍್ಯಾಪಿಡೊಗಳು ಬೈಕ್‌ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸಬೇಕು. ಆರು ವಾರಗಳ ಒಳಗೆ ಕ್ರಮ ಕೈಗೊಳ್ಳಬೇಕು ಎಂದು ಏಪ್ರಿಲ್‌ 2ರಂದು ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ ಆದೇಶ ಹೊರಡಿಸಿತ್ತು. ಇದರ ವಿರುದ್ಧ ಉಬರ್‌, ಓಲಾ, ರ‍್ಯಾಪಿಡೋ ಕಂಪನಿಗಳು ಮೇಲ್ಮನವಿ ಸಲ್ಲಿಸಿದ್ದವು. ಮೇಲ್ಮನವಿಯ ವಿಚಾರಣೆ ಕಾಯ್ದಿರಿಸಿ ಜೂನ್‌ 15ರವರೆಗೆ ಬೈಕ್‌ ಟ್ಯಾಕ್ಸಿ ಓಡಿಸಲು ಅವಕಾಶ ನೀಡಲಾಗಿತ್ತು.‌

ವಿಚಾರಣೆಯನ್ನು ಜೂನ್‌ 13ರಂದು ನಡೆಸಿದ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠವು ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತು. ಹಾಗಾಗಿ ಸೋಮವಾರದಿಂದ ಬೈಕ್‌ ಟ್ಯಾಕ್ಸಿಗಳನ್ನು ನಿರ್ಬಂಧಿಸಲು ಸಾರಿಗೆ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.

ಸಾರಿಗೆ ಇಲಾಖೆಗೆ ಶೀಘ್ರ ಮನವಿ: ಅಸೋಸಿಯೇಶನ್‌

‘ಬೈಕ್‌ ಟ್ಯಾಕ್ಸಿ ತಕ್ಷಣಕ್ಕೆ ನಿಷೇಧಿಸಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ ಪತ್ರ ಬರೆದಿದ್ದೆವು. ಆದರೂ ಬೈಕ್‌ ಟ್ಯಾಕ್ಸಿಗಳನ್ನು ವಶಪಡಿಸಿಕೊಳ್ಳುವ ಕಾರ್ಯ ಆರಂಭವಾಗಿದೆ. ಕೂಡಲೇ ನಿಯಮಾವಳಿಗಳನ್ನು ರೂಪಿಸಿ ಎಂದು ಸಾರಿಗೆ ಇಲಾಖೆ ಮೇಲೆ ಒತ್ತಡ ಹೇರಲಾಗುವುದು’ ಎಂದು ನಮ್ಮ ಬೈಕ್‌ ಟ್ಯಾಕ್ಸಿ ಅಸೋಸಿಯೇಶನ್‌ ಅಧ್ಯಕ್ಷ ಮೊಹಮ್ಮದ್ ಸಲೀಂ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಈಗಿನ ಕಾನೂನಿನಲ್ಲಿ ಬೈಕ್‌ ಟ್ಯಾಕ್ಸಿ ಓಡಿಸಲು ಪರವಾನಗಿ ನೀಡಲು ಅವಕಾಶ ಇಲ್ಲದೇ ಇದ್ದರೆ ಹೊಸ ನಿಯಮಾವಳಿಗಳನ್ನು ರೂಪಿಸಿ ಪರವಾನಗಿ ನೀಡಬೇಕು. ತರಬೇತಿ ವಿಮೆ ಸಹಿತ ಏನೆಲ್ಲ ಷರತ್ತುಗಳಿವೆಯೋ ಅದನ್ನೆಲ್ಲ ನಿಯಮಾವಳಿಗಳಲ್ಲಿ ಸೇರಿಸಲಿ. ನಾವು ಪಾಲನೆ ಮಾಡಲು ತಯಾರಿದ್ದೇವೆ. ಅದು ಬಿಟ್ಟು ಬೈಕ್ ಟ್ಯಾಕ್ಸಿ ಓಡಿಸುವುದನ್ನೇ ನಿರ್ಬಂಧಿಸುವುದು ಸರಿಯಲ್ಲ. ಇದನ್ನೇ ನಂಬಿರುವ ಒಂದು ಲಕ್ಷಕ್ಕೂ ಅಧಿಕ ಜನರ ಬದುಕು ಬೀದಿಗೆ ಬೀಳುವಂತಾಗಿದೆ’ ಎಂದು ತಿಳಿಸಿದರು. ‘ಸರ್ಕಾರ ನಿಯಮಾವಳಿ ರೂಪಿಸಲು ನಿರಾಸಕ್ತಿ ತೋರಿಸುತ್ತಿರುವುದು ಬೇಸರದ ಸಂಗತಿ’ ಎಂದೂ ಹೇಳಿದರು.

‘ಪಾರ್ಸೆಲ್‌’ ಎಂದು ಬುಕ್‌ ಮಾಡಿ

‘ಬೈಕ್‌ ಟ್ಯಾಕ್ಸಿಯನ್ನು ನಿರ್ಬಂಧಿಸಿದೆ. ಅದಕ್ಕೆ ತಲೆಬಿಸಿ ಮಾಡಬೇಡಿ. ನಿಮ್ಮನ್ನು ನೀವು ಪಾರ್ಸೆಲ್‌ ಅಂತಂದುಕೊಂಡು ಬುಕ್‌ ಮಾಡಿ ‍ಹೋಗಬೇಕಾದಲ್ಲಿಗೆ ಪ್ರಯಾಣ ಬೆಳೆಸಿ’ ಎಂದು ಧನ್ವಿ ಎನ್ನುವವರು ‘ಎಕ್ಸ್‌’ನಲ್ಲಿ ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.