ADVERTISEMENT

ಬೈಕ್‌ ಟ್ಯಾಕ್ಸಿಗೆ ಅವಕಾಶ: ಆಟೊ ಚಾಲಕರಿಗೆ ಆತಂಕ

ಆಗಸ್ಟ್‌ನಿಂದಲೇ ಸಂಚರಿಸುತ್ತಿದ್ದ ಬೈಕ್‌ ಟ್ಯಾಕ್ಸಿಗಳು * ನಿಯಮಾವಳಿ ರಚಿಸದ ಸರ್ಕಾರ

ಬಾಲಕೃಷ್ಣ ಪಿ.ಎಚ್‌
Published 24 ಜನವರಿ 2026, 23:30 IST
Last Updated 24 ಜನವರಿ 2026, 23:30 IST
ಮಿಜೋರಾಂನಲ್ಲಿ ಅಧಿಕೃತವಾಗಿ ವಾಣಿಜ್ಯ ಸಂಚಾರ ಮಾಡುವ ಬೈಕ್‌ಟ್ಯಾಕ್ಸಿಗಳು (ಹಳದಿ ಸಂಖ್ಯಾಫಲಕ)
ಮಿಜೋರಾಂನಲ್ಲಿ ಅಧಿಕೃತವಾಗಿ ವಾಣಿಜ್ಯ ಸಂಚಾರ ಮಾಡುವ ಬೈಕ್‌ಟ್ಯಾಕ್ಸಿಗಳು (ಹಳದಿ ಸಂಖ್ಯಾಫಲಕ)   

ಬೆಂಗಳೂರು: ‘ಅರ್ಹ ಮೋಟಾರ್‌ ಸೈಕಲ್‌ಗಳನ್ನು ಬೈಕ್‌ ಟ್ಯಾಕ್ಸಿಗಳನ್ನಾಗಿ ಬಳಸಬಹುದು’ ಎಂಬ ಆದೇಶವು ಬೈಕ್‌ ಟ್ಯಾಕ್ಸಿ ಚಾಲಕರಿಗೆ, ಅಗ್ರಿಗೇಟರ್‌ ಕಂಪನಿಗಳಿಗೆ ಖುಷಿ ನೀಡಿದ್ದರೆ, ‘ಬೈಕ್‌ ಟ್ಯಾಕ್ಸಿಗಳು ಹೆಚ್ಚಾದರೆ ನಮ್ಮ ಆದಾಯಕ್ಕೆ ಹೊಡೆತ ಬೀಳಲಿದೆ’ ಎಂದು ಆಟೊ ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.

2025ರ ಜೂನ್‌ನಲ್ಲಿ ಬೈಕ್‌ ಟ್ಯಾಕ್ಸಿಗಳನ್ನು ನಿಷೇಧಿಸಲಾಗಿತ್ತು. ವಿವಿಧ ಅಗ್ರಿಗೇಟರ್‌ ಕಂಪನಿಗಳು ಈ ನಿಷೇಧವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರಿಂದ ‘ಬೈಕ್‌ ಟ್ಯಾಕ್ಸಿ ಸೇವೆ ಒದಗಿಸುವ ವ್ಯಕ್ತಿಗಳಿಗೆ ಕಿರುಕುಳ ನೀಡಬಾರದು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ 2025ರ ಆಗಸ್ಟ್‌ನಲ್ಲಿಯೇ ಮೌಖಿಕ ಸೂಚನೆಯನ್ನು ನೀಡಿತ್ತು. ಅಲ್ಲದೇ ಈ ಬಗ್ಗೆ ನಿಯಮಾವಳಿಯನ್ನು ರಚಿಸುವಂತೆಯೂ ತಿಳಿಸಿತ್ತು.

ಅಂದಿನಿಂದ ಬೈಕ್‌ ಟ್ಯಾಕ್ಸಿಗಳು ಮತ್ತೆ ಸಂಚಾರ ಆರಂಭಿಸಿದ್ದವು. ಹಾಗಾಗಿ, ಬೈಕ್‌ ಟ್ಯಾಕ್ಸಿಗಳ ಪರವಾಗಿ ಹೈಕೋರ್ಟ್‌ ಆದೇಶ ಬಂದಿದ್ದರೂ ಸಾರ್ವಜನಿಕವಾಗಿ ಯಾವುದೇ ಬದಲಾವಣೆಗಳು ಉಂಟಾಗಲಿಲ್ಲ. ಬೈಕ್‌ ಟ್ಯಾಕ್ಸಿಗಳ ಹೆಚ್ಚಳವೂ ಆಗಿಲ್ಲ.

ADVERTISEMENT

‘ಬೈಕ್‌ ಟ್ಯಾಕ್ಸಿ ಅವಲಂಬಿಸಿ ದುಡಿಯುವ ಲಕ್ಷಾಂತರ ಮಂದಿಗೆ ಹೈಕೋರ್ಟ್‌ ಆದೇಶವು ಉಸಿರು ನೀಡಿದಂತಾಗಿದೆ. ಹಲವು ಸಮಯದ ಹೋರಾಟವು ಫಲ ನೀಡಿದೆ. ಬೈಕ್‌ ಟ್ಯಾಕ್ಸಿಗಳಿಗೆ ನಿಯಮ ರೂಪಿಸುವುದನ್ನು ನಾವು ವಿರೋಧಿಸಿರಲಿಲ್ಲ. ಆದರೆ, ನಿಷೇಧ ಮಾಡಿದ್ದರಿಂದ ಬೈಕ್‌ ಟ್ಯಾಕ್ಸಿ ಚಾಲಕರು ಬೀದಿಗೆ ಬೀಳುವಂತಾಗಿತ್ತು. ಓಲಾ, ಉಬರ್‌, ರ‍್ಯಾಪಿಡೊ ಮುಂತಾದ ಅಗ್ರಿಗೇಟರ್‌ ಸಂಸ್ಥೆಗಳಲ್ಲಿ ಬೈಕ್‌ ಮಾತ್ರವಲ್ಲ ಆಟೊ, ಕ್ಯಾಬ್‌ಗಳಿವೆ. ಹಾಗಾಗಿ ಕಂಪನಿಗಳಿಗೆ ನಷ್ಟವಾಗುವುದಿಲ್ಲ. ಈ ಕಂಪನಿಗಳ ಮೂಲಕವೇ ಬೈಕ್‌ ಟ್ಯಾಕ್ಸಿ ಓಡಿಸುತ್ತಿವ ನಮ್ಮಂಥವರಿಗೆ ಸಮಸ್ಯೆಯಾಗಿತ್ತು’ ಎಂದು ಬೈಕ್ ಟ್ಯಾಕ್ಸಿ ಸವಾರ ಪುನೀತ್‌ ತಿಳಿಸಿದರು.

‘ಬೇಕಾದಷ್ಟು ಆದಾಯವಿದ್ದವರು ಯಾರೂ ಬೈಕ್ ಟ್ಯಾಕ್ಸಿ ಓಡಿಸುವುದಿಲ್ಲ. ಬೇರೆ ದುಡಿಮೆ ಇಲ್ಲದೇ ಬೈಕ್‌ಟ್ಯಾಕ್ಸಿಗಳಲ್ಲಿ ದುಡಿಯುತ್ತಿರುವುವರೇ ಹೆಚ್ಚು. ಅವರ ಪರವಾಗಿ ಹೈಕೋರ್ಟ್‌ ನಿಂತಿದೆ’ ಎಂದು ರ‍್ಯಾಪಿಡೊ ಅಗ್ರಿಗೇಟರ್ ಸಂಸ್ಥೆಯ ಶಶಾಂಕ್‌ ಹೇಳಿದರು.

‘ಬೈಕ್‌ ಟ್ಯಾಕ್ಸಿಯಲ್ಲಿ ಸಂಚರಿಸುತ್ತಿದ್ದ ಯುವತಿಯರಿಗೆ ಕಿರುಕುಳ ನೀಡಿದ, ಮೈಕೈ ಸವರಿದ ಪ್ರಕರಣಗಳು ಇತ್ತೀಚೆಗೆ ದಾಖಲಾಗಿದ್ದವು. ಸುರಕ್ಷಿತವಲ್ಲದ ಪ್ರಯಾಣ ಇದಾಗಿದೆ. ಇದು ಒಂದೆಡೆ ಮಹಿಳೆಯರಿಗೆ ತೊಂದರೆಯಾದರೆ, ಮತ್ತೊಂದೆಡೆ ಆಟೊಗಳನ್ನು ನಂಬಿ ಬದುಕುವ ನಮ್ಮಂಥ ಲಕ್ಷಾಂತರ ಮಂದಿ ಬೀದಿಗೆ ಬೀಳುವಂತಾಗಿದೆ. ಯಾವುದೇ ವಾಣಿಜ್ಯ ಸಂಚಾರ ತೆರಿಗೆ ಕಟ್ಟದೇ ಅವರು ಪ್ರಯಾಣಿಕರನ್ನು ಕರೆದೊಯ್ಯಬಹುದು. ಆದರೆ, ನಾವು ವಾಣಿಜ್ಯ ತೆರಿಗೆ ಕಟ್ಟಿಯೂ ಪ್ರಯಾಣಿಕರಿಲ್ಲದೇ ತೊಂದರೆ ಅನುವಭವಿಸುವಂತಾಗಿದೆ’ ಎಂದು ರಾಜಾಜಿನಗರದ ಆಟೊ ಚಾಲಕ ತಿಮ್ಮರಾಜು ಅಸಹಾಯಕತೆ ವ್ಯಕ್ತಪಡಿಸಿದರು.

‘ಹಳದಿ ಸಂಖ್ಯಾಫಲಕ, ಬಿಳಿ ಸಂಖ್ಯಾಫಲಕದ ವ್ಯತ್ಯಾಸವೇ ಗೊತ್ತಿಲ್ಲ ಎಂದಾದರೆ ನಾವು ಏನು ಮಾಡಲು ಸಾಧ್ಯ. ಅಕ್ರಮವಾಗಿ ಓಡಿಸುವುದೇ ಸರಿ ಎಂದಾದರೆ ಮುಂದೆ ಎಲ್ಲ ಆಟೊದವರು ಬೈಕ್‌ ಟ್ಯಾಕ್ಸಿ ಓಡಿಸಲು ಮುಂದಾಗಬೇಕಾದ ಪರಿಸ್ಥಿತಿ ಬರಬಹುದು. ಮನೆಯಲ್ಲಿ ಒಂದು ಬೈಕ್‌ ಇದ್ದರೆ ಯಾವುದೋ ಅಗ್ರಿಗೇಟರ್‌ ಸಂಸ್ಥೆಯೊಂದಿಗೆ ಕೈ ಜೋಡಿಸಿಕೊಂಡು ಬೇರೆ ಕೆಲಸದ ನಡುವೆ ಸಮಯಾವಕಾಶ ಇರುವವರೆಲ್ಲ ಬೈಕ್‌ ಟ್ಯಾಕ್ಸಿ ಓಡಿಸುತ್ತಿದ್ದಾರೆ. ಮುಂದೆ ಇನ್ನಷ್ಟು ಹೆಚ್ಚಳವಾಗಲಿದೆ’ ಎಂದು ಸಾರಥಿ ಆಟೊ ಚಾಲಕರ ಸಂಘದ ಅಧ್ಯಕ್ಷ ರಾಮೇಗೌಡ ಆತಂಕ ವ್ಯಕ್ತಪಡಿಸಿದರು.

‘ಸರ್ಕಾರಕ್ಕೆ ಪಾಠ ಕಲಿಸುವುದು ಅನಿವಾರ್ಯ’

‘ಸರ್ಕಾರಕ್ಕೆ ವಾಣಿಜ್ಯ ಸಂಚಾರದ ತೆರಿಗೆ ಕಟ್ಟುವ ಆಟೊ ಕ್ಯಾಬ್‌ಗಳ ಹಿತಾಸಕ್ತಿಯನ್ನು ಕಡೆಗಣಿಸಿ ವೈಯಕ್ತಿಕ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯವವರ ಹಿತಾಸಕ್ತಿ ಕಾಪಾಡಲು ಸರ್ಕಾರ ಕೆಲಸ ಮಾಡಿದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದು ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಅಧ್ಯಕ್ಷ ಎಸ್‌. ನಟರಾಜ ಶರ್ಮಾ ಎಚ್ಚರಿಸಿದ್ದಾರೆ.

ಬಿಳಿ ಸಂಖ್ಯಾಫಲಕಗಳನ್ನು ಹೊಂದಿರುವ ವಾಹನಗಳನ್ನು ವಾಣಿಜ್ಯ ಸಂಚಾರಕ್ಕೆ ಬಳಸಿ ಎಂದು ಹೈಕೋರ್ಟ್‌ ಹೇಳಿಲ್ಲ. ಹಾಗಾಗಿ ಹಳದಿ ಸಂಖ್ಯಾಫಲಕಗಳ ವಾಹನಗಳಷ್ಟೇ ಸಂಚರಿಸಬಹುದು. ದ್ವಿಚಕ್ರ ವಾಹನಗಳಿಗೆ ಹಳದಿ ಸಂಖ್ಯಾಫಲಕ ಇಲ್ಲ. ಈ ಬಗ್ಗೆ ನಿಯಮಾವಳಿ ರೂಪಿಸಿ ಎಂದು ಸರ್ಕಾರಕ್ಕೆ ಹೈಕೋರ್ಟ್‌ ಪದೇ ಪದೇ ಹೇಳಿತ್ತು. ಆದರೆ ಸರ್ಕಾರ ನಿರ್ಲಕ್ಷಿಸಿದ್ದರಿಂದ ಈ ಆದೇಶ ಬಂದಿದೆ. ಮುಂದೆಯಾದರೂ ಸರಿಯಾದ ನಿಯಮವನ್ನು ರೂಪಿಸಬೇಕು. ಅಲ್ಲಿಯವರೆಗೆ ಬಿಳಿ ಫಲಕದ ವಾಹನಗಳನ್ನು ವಾಣಿಜ್ಯ ಸಂಚಾರಕ್ಕೆ ಬಳಸುವುದನ್ನು ನಿಷೇಧಿಸಲು ಸರ್ಕಾರಕ್ಕೆ ಅಧಿಕಾರವಿದೆ. ಆ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.