
ಬೆಂಗಳೂರು: ಬೈಕ್ ಟ್ಯಾಕ್ಸಿ ಪರವಾಗಿ ಹೈಕೋರ್ಟ್ ನೀಡಿರುವ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ (ಎಸ್‌ಎಲ್‌ಪಿ) ಸಲ್ಲಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ನಿರ್ಧರಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ಎಸ್. ನಟರಾಜ ಶರ್ಮ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಈ ತೀರ್ಪು ಕಾನೂನು ವ್ಯಾಖ್ಯಾನ, ಸಾರ್ವಜನಿಕ ಸುರಕ್ಷತೆ, ಸಾರಿಗೆ ನಿಯಂತ್ರಣ ಮತ್ತು ಸರ್ಕಾರದ ನೀತಿ ನಿರ್ಧಾರಾಧಿಕಾರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದೇ ಅಂತಿಮವಾದರೆ ರಾಜ್ಯದ ಸಾರಿಗೆ ವ್ಯವಸ್ಥೆಯಲ್ಲಿ ಗೊಂದಲ ಉಂಟಾಗಿ, ಸಾರ್ವಜನಿಕರ ಜೀವಭದ್ರತೆಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಮೋಟಾರು ವಾಹನಗಳ ಕಾಯ್ದೆ ಪ್ರಕಾರ ‘ಮೋಟಾರು ಕ್ಯಾಬ್’ ಎಂದರೆ ಪ್ರಯಾಣಿಕರ ಸುರಕ್ಷಿತ ವಾಣಿಜ್ಯ ಸಾರಿಗೆಗಾಗಿ ವಿನ್ಯಾಸಗೊಳಿಸಲಾದ ವಾಹನವೆಂದು ಸ್ಪಷ್ಟವಾಗಿದೆ. ಮೋಟಾರು ಸೈಕಲ್‌ಗಳನ್ನು ಮೋಟಾರು ಕ್ಯಾಬ್ ಎಂದು ಪರಿಗಣಿಸಿರುವುದು ಶಾಸನದ ಉದ್ದೇಶಕ್ಕೆ ವಿರುದ್ಧವಾಗಿದೆ. ಮೋಟಾರು ಸೈಕಲ್‌ಗಳಲ್ಲಿ ಸುರಕ್ಷತಾ ವ್ಯವಸ್ಥೆಗಳಿಲ್ಲ. ಅಪಘಾತ ಸಂಭವಿಸಿದಾಗ ಬೇರೆ ವಾಹನಗಳಿಗಿಂತ ಮೋಟಾರು ಸೈಕಲ್‌ಗಳಲ್ಲಿ ಹೆಚ್ಚು ಗಾಯ ಮತ್ತು ಜೀವಹಾನಿಯಾಗುವ ಅಪಾಯವಿದೆ ಎಂದು ವಿವರಿಸಿದರು.
ಮೋಟಾರು ವಾಹನಗಳ ಕಾಯ್ದೆ–1988 ಅಥವಾ ಅದರಡಿಯಲ್ಲಿ ರಚಿಸಲಾದ ನಿಯಮಾವಳಿಗಳಲ್ಲಿ ಬೈಕ್ ಟ್ಯಾಕ್ಸಿ ಎಂಬ ಯಾವುದೇ ಪ್ರತ್ಯೇಕ ವರ್ಗವಿಲ್ಲ. ಸ್ಪಷ್ಟ ಕಾನೂನು ಚೌಕಟ್ಟು ಇಲ್ಲದೇ ಬೈಕ್ ಟ್ಯಾಕ್ಸಿಗಳನ್ನು ಅನುಮತಿಸುವುದು ಸರಿಯಲ್ಲ. ಕೇಂದ್ರ ಮೋಟಾರು ವಾಹನ ನಿಯಮಾವಳಿಗಳಲ್ಲಿ ಎರಡು ಚಕ್ರದ ವಾಹನಗಳನ್ನು ಪ್ರತ್ಯೇಕ ವರ್ಗದಲ್ಲಿ ಮತ್ತು ಪ್ರಯಾಣಿಕರ ವಾಹನಗಳನ್ನು ಪ್ರತ್ಯೇಕ ವರ್ಗಗಳಲ್ಲಿ ವರ್ಗೀಕರಿಸಲಾಗಿದೆ. ಈ ವಿಭಜನೆಯನ್ನು ಕಡೆಗಣಿಸಿದರೆ ಕಾನೂನು ಚೌಕಟ್ಟೇ ದುರ್ಬಲಗೊಳ್ಳಲಿದೆ ಎಂದು ಹೇಳಿದರು.
ಪೊಲೀಸ್ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ರಸ್ತೆ ಅಪಘಾತಗಳಲ್ಲಿ ಶೇ 70ರಿಂದ ಶೇ 85ರಷ್ಟು ಅಪಘಾತಗಳು ದ್ವಿಚಕ್ರದ ವಾಹನಗಳಿಗೆ ಸಂಬಂಧಿಸಿದ್ದವು ಆಗಿವೆ. ಅಗ್ರಿಗೇಟರ್ ಸಂಸ್ಥೆಗಳು ನಡೆಸುವ ಬೈಕ್ ಟ್ಯಾಕ್ಸಿಗಳು ಅನೇಕ ಸಂದರ್ಭದಲ್ಲಿ ಅಪಘಾತಕ್ಕೆ ಈಡಾಗಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವುದು ವರದಿಯಾಗಿವೆ. ಆದರೆ, ಆ ಪ್ರಯಾಣಿಕರಿಗೆ ಅಗ್ರಿಗೇಟರ್ ಕಂಪನಿಗಳು ಯಾವುದೇ ಪರಿಹಾರ ನೀಡಿಲ್ಲ. ವಿಮಾ ಪರಿಹಾರವನ್ನೂ ಒದಗಿಸಿಲ್ಲ ಎಂದು ಮಾಹಿತಿ ನೀಡಿದರು.
ಬೈಕ್ ಟ್ಯಾಕ್ಸಿಗಳಿಗೆ ಅವಕಾಶ ನೀಡಿದರೆ ಸಾರ್ವಜನಿಕ ಸುರಕ್ಷತೆಗೆ ಅಪಾಯ, ಅಪಘಾತ ಪ್ರಮಾಣ ಹೆಚ್ಚಳ, ಪ್ರಯಾಣಿಕರ ಜೀವಭದ್ರತೆಗೆ ಹಾನಿ, ಈಗಾಗಲೇ ನಿಯಮಪಾಲನೆ ಮಾಡುತ್ತಿರುವ ಆಟೊ, ಟ್ಯಾಕ್ಸಿ, ಬಸ್ ಚಾಲಕರ ಜೀವನೋಪಾಯಕ್ಕೆ ಹೊಡೆತ ಉಂಟಾಗಲಿದೆ. ಈ ಬಗ್ಗೆ ಅಡ್ವೊಕೇಟ್ ಜನರಲ್ ಅವರಿಂದ ರಾಜ್ಯ ಸರ್ಕಾರ ಸಲಹೆ ಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ (ಎಸ್‌ಎಲ್‌ಪಿ) ಸಲ್ಲಿಸಿ ಹೈಕೊರ್ಟ್ ತೀರ್ಪಿಗೆ ಮಧ್ಯಂತರ ತಡೆಯಾಜ್ಞೆ ಪಡೆಯಬೇಕು. ಆ ಮೂಲಕ ರಾಜ್ಯದ ಸಾರಿಗೆ ನೀತಿಯನ್ನು ಕಾಪಾಡಬೇಕುಎಸ್. ನಟರಾಜ ಶರ್ಮ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.