ADVERTISEMENT

ದ್ವಿಚಕ್ರ ವಾಹನ ಕಳವು ಮಾಡಿಸುತ್ತಿದ್ದ ‘ಪತ್ತೇದಾರಿ’

ಮಾದನಾಯಕನಹಳ್ಳಿ ಪೊಲೀಸರ ಕಾರ್ಯಾಚರಣೆ * ಐವರ ಬಂಧನ; 46 ವಾಹನ ಜಪ್ತಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 19:30 IST
Last Updated 31 ಜುಲೈ 2021, 19:30 IST
ಆರೋಪಿ ಶಿವಶಂಕರ್
ಆರೋಪಿ ಶಿವಶಂಕರ್   

ಬೆಂಗಳೂರು: ನಗರದ ಹೊರವಲಯದಲ್ಲಿ ನಡೆಯುತ್ತಿದ್ದ ದ್ವಿಚಕ್ರ ವಾಹನಗಳ ಕಳವು ಪ್ರಕರಣದಲ್ಲಿ ಐವರು ಆರೋಪಿಗಳನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ತುಮಕೂರು ಜಿಲ್ಲೆಯ ಹುತ್ತರಿದುರ್ಗದ ಎಚ್‌.ಜಿ. ಶಿವಶಂಕರ್ (25), ತಾವರೆಕೆರೆಯ ಹೊನಗನಹಟ್ಟಿಯ ಕೆ. ರವಿಕುಮಾರ್ (21), ಕೆ. ಮುನಿರಾಜು (20), ಲಗ್ಗೆರೆಯ ಬಿ.ಯು. ಜಗದೀಶ್ (21) ಹಾಗೂ ಸುಂಕದಕಟ್ಟೆಯ ಬಿ.ಯು. ಮೋಹನ್‌ಕುಮಾರ್ (22) ಬಂಧಿತರು. ಇವರಿಂದ ₹ 40 ಲಕ್ಷ ಮೌಲ್ಯದ 46 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಶಿವಶಂಕರ್, ನಾಗರಬಾವಿಯಲ್ಲಿ ವಾಸವಿದ್ದ. ಡಿಕನ್ಸನ್‌ ರಸ್ತೆಯಲ್ಲಿರುವ ಪತ್ತೇದಾರಿ ಏಜೆನ್ಸಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಏಜೆನ್ಸಿಗೆ ಬರುತ್ತಿದ್ದ ಜನರ ಮನವಿಯಂತೆ ಪತ್ತೇದಾರಿ ಕೆಲಸ ಮಾಡುವುದು ಆತನ ಜವಾಬ್ದಾರಿ ಆಗಿತ್ತು. ಪತ್ತೇದಾರಿ ಕೆಲಸಕ್ಕೆ ಹೋಗಲು ಆತ, ನೋಂದಣಿ ಸಂಖ್ಯೆ ಫಲಕವಿಲ್ಲದ ದ್ವಿಚಕ್ರವಾಹನಗಳಿಗಾಗಿ ಹುಡುಕಾಟ ನಡೆಸುತ್ತಿದ್ದ.’

ADVERTISEMENT

‘ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನ ಮೂಲಕ ಶಿವಶಂಕರ್‌ಗೆ ಆರೋಪಿ ಕೆ. ರವಿಕುಮಾರ್ ಪರಿಚಯವಾಗಿತ್ತು. ಸುಲಿಗೆ ಯತ್ನ ಪ್ರಕರಣದಲ್ಲಿ ರವಿಕುಮಾರ್ ಜೈಲಿಗೆ ಹೋಗಿಬಂದಿದ್ದ ವಿಷಯ ತಿಳಿದಿದ್ದ ಶಿವಶಂಕರ್, ‘ಪತ್ತೇದಾರಿ ಕೆಲಸಕ್ಕೆ ನೋಂದಣಿ ಸಂಖ್ಯೆ ಫಲಕವಿಲ್ಲದ ವಾಹನಗಳು ಬೇಕು. ಕಳವು ಮಾಡಿ ತನ್ನಿ, ಹಣ ಕೊಡುತ್ತೇನೆ’ ಎಂದಿದ್ದ. ಅದಕ್ಕೆ ಒಪ್ಪಿದ್ದ ರವಿಕುಮಾರ್, ಸಹಚರರ ಜೊತೆ ಸೇರಿ ವಾಹನ ಕಳವು ಮಾಡಲಾರಂಭಿಸಿದ್ದ’ ಎಂದೂ ಪೊಲೀಸರು ತಿಳಿಸಿದರು.

ಮೆಕ್ಯಾನಿಕ್ ಕಡೆ ತರಬೇತಿ: ‘ವಾಹನ ಕದಿಯುವುದು ಹೇಗೆ ಹಾಗೂ ಪೊಲೀಸರಿಗೆ ಸುಳಿವು ಸಿಗದಂತೆ ಕೃತ್ಯ ನಡೆಸುವುದು ಹೇಗೆ ಎಂಬ ಬಗ್ಗೆ ಪತ್ತೇದಾರಿ ಶಿವಶಂಕರ್‌ನೇ ಆರೋಪಿಗಳಿಗೆ ಹೇಳಿಕೊಡುತ್ತಿದ್ದ. ಕೀ ಇಲ್ಲದೇ ವಾಹನಗಳ ಲಾಕ್ ತೆರೆಯುವ ಕುರಿತು ತನ್ನ ಸ್ನೇಹಿತನಾದ ಮೆಕ್ಯಾನಿಕ್ ಮೋಹನ್‌ಕುಮಾರ್ ಮೂಲಕ ರವಿಕುಮಾರ್ ಹಾಗೂ ಇತರೆ ಆರೋಪಿಗಳಿಗೆ ತರಬೇತಿ ಕೊಡಿಸಿದ್ದ’ ಎಂದೂ ಪೊಲೀಸರು ವಿವರಿಸಿದರು.

‘ಕಳವು ಮಾಡಬೇಕಾದ ವಾಹನ ಗುರುತಿಸುತ್ತಿದ್ದ ಶಿವಶಂಕರ್, ವಿಳಾಸದ ಸಮೇತ ರವಿಕುಮಾರ್‌ಗೆ ಮಾಹಿತಿ ನೀಡುತ್ತಿದ್ದ. ರವಿಕುಮಾರ್ ಹಾಗೂ ಇತರರು ಸ್ಥಳಕ್ಕೆ ಹೋಗಿ ವಾಹನ ಕದ್ದುಕೊಂಡು ಬಂದು ಶಿವಶಂಕರ್‌ಗೆ ಕೊಡುತ್ತಿದ್ದರು. ಆತನಿಂದ ಹಣ ಪಡೆದು, ಅದರಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು’ ಎಂದೂ ಪೊಲೀಸರು ಹೇಳಿದರು.

‘ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿದ್ದವು. ತನಿಖೆ ಕೈಗೊಂಡು ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ ಕೆಲ ಸುಳಿವುಗಳು ಸಿಕ್ಕಿದ್ದವು. ಅದರನ್ವಯ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಇಬ್ಬರು, ಕದ್ದ ವಾಹನಗಳ ಖರೀದಿದಾರರು’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.