ಬೆಂಗಳೂರು: ಆಂಧ್ರಪ್ರದೇಶದಿಂದ ರಾತ್ರಿ ವೇಳೆ ಬಸ್‌ನಲ್ಲಿ ನಗರಕ್ಕೆ ಬಂದು, ಬೈಕ್ ಕಳ್ಳತನ ಮಾಡಿಕೊಡು ಹೋಗುತ್ತಿದ್ದ ಇಬ್ಬರನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ವೆಂಕಟೇಶ್ ಹಾಗೂ ನಂದನ್ ಬಂಧಿತರು. ಬಂಧಿತರಿಂದ ₹13 ಲಕ್ಷ ಮೌಲ್ಯದ 20 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಠಾಣಾ ವ್ಯಾಪ್ತಿಯ ಪೊಲೀಸ್ ಕ್ವಾರ್ಟರ್ಸ್ ಸಮೀಪದ ಬಾಡಿಗೆ ಮನೆಯ ಎದುರು ನಿಲ್ಲಿಸಿದ್ದ ಬೈಕ್ ಕಳವಾಗಿತ್ತು. ಮಾಲೀಕರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ಕಳವು ಮಾಡಿದ್ದ ಬೈಕ್‌ನಲ್ಲಿ ಇಬ್ಬರೂ ಆರೋಪಿಗಳು ಭುವನೇಶ್ವರಿ ನಗರ ಮಂಜುನಾಥ್ ಗ್ರ್ಯಾಂಡ್ ಹೋಟೆಲ್ ಸಮೀಪ ತೆರಳುತ್ತಿದ್ದರು. ಆಗ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಬೈಕ್ ಕಳ್ಳತನ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಇಬ್ಬರೂ ಆರೋಪಿಗಳು ಜಿಗಣಿ ಸಮೀಪದ ಕಾರ್ಖಾನೆಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದರು. ಆಗ ನಗರದಲ್ಲಿ ಬೈಕ್ ನಿಲ್ಲಿಸುತ್ತಿದ್ದ ಪ್ರದೇಶಗಳ ಬಗ್ಗೆ ಮಾಹಿತಿ ಕಲೆಹಾಕಿದ್ದರು. ಕೆಲವು ದಿನಗಳ ಹಿಂದೆ ಕೆಲಸ ಬಿಟ್ಟು ಆಂಧ್ರಪ್ರದೇಶಕ್ಕೆ ತೆರಳಿದ್ದರು. ಆರ್ಥಿಕ ಸಮಸ್ಯೆ ಎದುರಾದ ಮೇಲೆ ಕಳ್ಳತನಕ್ಕೆ ಇಳಿದಿದ್ದರು. ಬಸ್‌ನಲ್ಲಿ ನಗರಕ್ಕೆ ಬಂದು ಬೈಕ್ ಕಳ್ಳತನ ಮಾಡಿಕೊಂಡು ತೆರಳುತ್ತಿದ್ದರು. ಕದ್ದ ಬೈಕ್‌ಗಳನ್ನು ಬಾಗೇಪಲ್ಲಿ ಟೋಲ್, ಜಿಗಣಿ ಕೈಗಾರಿಕಾ ಪ್ರದೇಶ ಹಾಗೂ ದೇವನಹಳ್ಳಿಯಲ್ಲಿ ಖಾಲಿ ಪ್ರದೇಶಗಳಲ್ಲಿ ನಿಲ್ಲಿಸಿದ್ದರು. ಅಲ್ಲಿಂದ ಬೈಕ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.