ADVERTISEMENT

ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ: ಬೈರತಿ ಬಸವರಾಜ್‌ ಆಪ್ತ ಅನಿಲ್‌ ವಶಕ್ಕೆ

ಕೃತ್ಯ ಎಸಗಲು 45 ದಿನ ಚಲನವಲನ ವೀಕ್ಷಿಸಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 16:00 IST
Last Updated 21 ಜುಲೈ 2025, 16:00 IST
   

ಬೆಂಗಳೂರು: ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್‌ ಬಿಕ್ಲು ಶಿವ ಅವರ ಕೊಲೆ ಪ್ರಕರಣದಲ್ಲಿ ಕೆ.ಆರ್‌. ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್‌ ಅವರ ಆಪ್ತ ಅನಿಲ್‌ ಅವರನ್ನು ಭಾರತಿನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೃತ್ಯ ಎಸಗಲು ಆರೋಪಿಗಳು ಬಳಸಿದ್ದ ಬಿಳಿ ಬಣ್ಣದ ಸ್ಕಾರ್ಪಿಯೊ ಅನಿಲ್‌ಗೆ ಸೇರಿದ್ದು, ಅನಿಲ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕೊಲೆ ಪ್ರಕರಣದಲ್ಲಿ ಅನಿಲ್‌ ಅವರ ಪಾತ್ರ ಇರುವುದು ಸಾಬೀತಾದರೆ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದರು.

‘ಮನೆಯ ಎದುರು ಬಿಕ್ಲು ಶಿವ ನಿಂತಿದ್ದಾಗ 9 ಮಂದಿಯ ತಂಡವು ಬಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿ ಆಗಿತ್ತು. ಆ ಪೈಕಿ ಇದುವರೆಗೂ ಏಳು ಮಂದಿಯನ್ನು ಬಂಧಿಸಲಾಗಿದೆ. ಭಾನುವಾರ ಬಂಧಿಸಿರುವ ಅರುಣ್ ಹಾಗೂ ನವೀನ್‌ ಅವರನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

ಪ್ರಕರಣದಲ್ಲಿ ಈ ಹಿಂದೆ ಕಿರಣ್, ವಿಮಲ್, ಪ್ರದೀಪ್, ಮದನ್ ಹಾಗೂ ಸ್ಯಾಮ್ಯುವೆಲ್‌ ಎಂಬುವರನ್ನು ಬಂಧಿಸಲಾಗಿತ್ತು. ಅವರ ವಿಚಾರಣೆ ನಡೆಸಲಾಗುತ್ತಿದೆ. ಬೈರತಿ ಬಸವರಾಜ್‌ ಅವರನ್ನೂ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಬುಧವಾರ ಮತ್ತೆ ವಿಚಾರಣೆಗೆ ಬರುವಂತೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಬಿಕ್ಲು ಕೊಲೆಗೆ ಕಾರಣ ಕಿತ್ತಗನೂರಲ್ಲಿರುವ ಒಂದೂವರೆ ಎಕರೆ ಜಮೀನು ಎಂಬುದು ಇದುವರೆಗೂ ನಡೆದಿರುವ ತನಿಖೆಯಿಂದ ಗೊತ್ತಾಗಿದೆ. ಆ ಜಮೀನಿಗೆ ಮೂವರು ಮಾಲೀಕರಿದ್ದು, ಈ ಪೈಕಿ ನದಾಫ್​ ಬಳಿ ಬಿಕ್ಲು ಶಿವ ಜಮೀನು ಖರೀದಿ ಒಪ್ಪಂದ ಮಾಡಿಸಿಕೊಂಡಿದ್ದರು. ಮತ್ತೊಬ್ಬ ಮಾಲೀಕರಿಂದ ರವಿ ಒಪ್ಪಂದ ಮಾಡಿಸಿಕೊಂಡು ಕಾಂಪೌಂಡ್ ಹಾಕುತ್ತಿದ್ದರು. ಇದರಿಂದ ಕೆರಳಿದ ಶಿವು ಕಾಂಪೌಂಡ್ ತೆರವು ಮಾಡಿದ್ದರು. ಈ ವಿಷಯವನ್ನು ರವಿ ಅವರು ಜಗದೀಶ್‌ ಹಾಗೂ ಕಿರಣ್‌ಗೆ ಹೇಳಿದ್ದರು. ಶಿವುಗೆ ಜಗದೀಶ್‌ ಹಾಗೂ ಸಹಚರರು ಪ್ರಾಣ ಬೆದರಿಕೆ ಹಾಕಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಶಿವ ಅವರನ್ನು ಕೊಲೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು. ಆರೋಪಿ ಸ್ಯಾಮ್ಯುವೆಲ್‌ 45 ದಿನ ಬಿಕ್ಲು ಶಿವ ಅವರ ಚಲನವಲನವನ್ನು ವೀಕ್ಷಿಸಿದ್ದರು. ಅದಕ್ಕೆ ಸಂಬಂಧಿಸಿದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳು ಸಿಕ್ಕಿವೆ’ ಎಂದು ಮೂಲಗಳು ತಿಳಿಸಿವೆ.

ಚಿತ್ರ ನಟ ನಟಿಯರ ನಂಟು?

ಪ್ರಕರಣದ ಮೊದಲನೇ ಆರೋಪಿ ಜಗದೀಶ್‌ ಅಲಿಯಾಸ್ ಜಗ್ಗ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ವಿಶೇಷ ಪೊಲೀಸ್‌ ತಂಡವು ವಿವಿಧೆಡೆ ಹುಡುಕಾಟ ನಡೆಸುತ್ತಿದೆ. ಆದರೆ ಸುಳಿವು ಮಾತ್ರ ಲಭಿಸಿಲ್ಲ ಎಂದು ಮೂಲಗಳು ತಿಳಿಸಿವೆ. ‘ಜಗದೀಶ್‌ ಅವರಿಗೆ ಸೇರಿದ ಮನೆಯ ಮೇಲೆ ಭಾನುವಾರ ರಾತ್ರಿ ತನಿಖಾ ತಂಡವು ದಾಳಿ ನಡೆಸಿ ಶೋಧ ನಡೆಸಿತು. ದಾಳಿಯ ವೇಳೆ ಆಸ್ತಿಗೆ ಸಂಬಂಧಿಸಿದ ದಾಖಲೆ ಪತ್ರಗಳು ಹಾಗೂ ಪಿಸ್ತೂಲ್‌ ಪರವಾನಗಿ ಸಿಕ್ಕಿದೆ. ಅವುಗಳನ್ನು ಜಪ್ತಿ ಮಾಡಲಾಗಿದೆ. ಪಿಸ್ತೂಲ್‌ ಸಿಕ್ಕಿಲ್ಲ. ಪಿಸ್ತೂಲ್‌ ಜತೆಗೆ ಆರೋಪಿ ಪರಾರಿ ಆಗಿರುವ ಶಂಕೆಯಿದೆ’ ಎಂದು ಮೂಲಗಳು ತಿಳಿಸಿವೆ. ‘ಚಿತ್ರ ನಟ–ನಟಿಯರ ಜತೆಗೆ ಆರೋಪಿ ಜಗದೀಶ್ ಅವರು ತೆಗೆಸಿಕೊಂಡಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನಟಿಯೊಬ್ಬರಿಗೆ ಸೀರೆ ಹಾಗೂ ಆಭರಣ ನೀಡುತ್ತಿರುವ ಫೋಟೊ ಸಿಕ್ಕಿದೆ. ಆದರೆ ಕೊಲೆ ಪ್ರಕರಣಕ್ಕೂ ನಟ–ನಟಿಯರಿಗೂ ಯಾವುದೇ ಸಂಬಂಧ ಇಲ್ಲ. ಚಿತ್ರರಂಗದ ಗಣ್ಯರ ಜತೆಗೆ ಜಗದೀಶ್‌ ಅವರಿಗೆ ಫೋಟೊ ತೆಗೆಸಿಕೊಳ್ಳುವ ಹವ್ಯಾಸವಿತ್ತು. ಆ ಫೋಟೊಗಳು ಈಗ ಹರಿದಾಡುತ್ತಿವೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.