
ಬೈರತಿ ಬಸವರಾಜ್, ಬಿಕ್ಲು ಶಿವ
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ ಬಂಧನಕ್ಕೆ ಮೂರು ತಂಡಗಳನ್ನು ರಚಿಸಲಾಗಿದ್ದು, ಗೋವಾ, ಪುಣೆಯಲ್ಲಿ ಸಿಐಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.
ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ಹಾಗೂ ಬಂಧನದಿಂದ ರಕ್ಷಣೆ ನೀಡಲು ಸೆಷನ್ಸ್ ನ್ಯಾಯಾಲಯ ನಿರಾಕರಿಸಿದ ಬೆನ್ನಲ್ಲೇ ಬೈರತಿ ಬಸವರಾಜ ಬಂಧನ ಭೀತಿಯಿಂದ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ. ಆರೋಪಿ ಬೆಂಗಳೂರಿನಲ್ಲಿ ಇಲ್ಲದಿರುವ ಮಾಹಿತಿ ಲಭ್ಯವಾಗಿತ್ತು. ಅಧಿಕಾರಿಗಳ ತಂಡ ನೆರೆಯ ರಾಜ್ಯಗಳಲ್ಲಿ ಹುಡುಕಾಟ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ವಿದೇಶಕ್ಕೆ ಪರಾರಿಯಾಗುವ ಶಂಕೆಯ ಮೇರೆಗೆ ಬೆಂಗಳೂರು ಸೇರಿ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಬೈರತಿ ಬಸವರಾಜ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಹೊರ ರಾಜ್ಯಗಳ ಪೊಲೀಸರ ಜತೆಗೂ ಸಂಪರ್ಕ ಸಾಧಿಸಿರುವ ಸಿಐಡಿ ತಂಡಗಳು, ಕಾರ್ಯಾಚರಣೆ ತೀವ್ರಗೊಳಿಸಿವೆ.
ರೌಡಿ ಬಿಕ್ಲು ಶಿವ ಕೊಲೆ ಪ್ರಕರಣದ ಪ್ರಮುಖ ಆರೋಪಿ ರೌಡಿ ಜಗದೀಶ್ ಅಲಿಯಾಸ್ ಜಗ್ಗನೊಂದಿಗೆ ಬೈರತಿ ಬಸವರಾಜ ಅವರಿಗೆ ನೇರ ಸಂಪರ್ಕವಿದೆ. ಶಿವನ ಕೊಲೆಗೂ ಮುನ್ನ ಹಲವು ಬಾರಿ ಭೇಟಿ ಮಾಡಿದ್ದಾರೆ. ಶಾಸಕರ ವಿರುದ್ಧ ಕೆಲವು ಸಾಕ್ಷ್ಯಾಧಾರಗಳು ಲಭ್ಯವಾಗಿದ್ದು, ಅವರ ವಿಚಾರಣೆ ನಡೆಸಬೇಕಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿ ಕಿತ್ತಗನೂರಿನ ಸರ್ವೇ ನಂ.212ರ ಭೂಮಿಗೆ ಸಂಬಂಧಿಸಿದಂತೆ ರೌಡಿ ಬಿಕ್ಲು ಶಿವನನ್ನು ಜುಲೈ 15ರಂದು 12 ಜನರ ಗುಂಪೊಂದು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿತ್ತು. ಪ್ರಕರಣದಲ್ಲಿ ಜಗದೀಶ್, ರೌಡಿ ಮಲಯಾಳ ಅಜಿತ್ ಸೇರಿ 15 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
‘ಜಾಗದ ವಿಚಾರವಾಗಿ ಜಗದೀಶ್, ಕಿರಣ್, ವಿಮಲ್, ಅನಿಲ್ ಮತ್ತು ಇತರರು ಶಾಸಕ ಬೈರತಿ ಬಸವರಾಜ ಅವರ ಕುಮ್ಮಕ್ಕಿನಿಂದ ಕೊಲೆ ಮಾಡಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು.
ಐದನೇ ಆರೋಪಿಯಾಗಿದ್ದ ಬೈರತಿ ಬಸವರಾಜ ಅವರನ್ನು ಭಾರತಿ ನಗರ ಪೊಲೀಸರು ವಿಚಾರಣೆ ನಡೆಸಿದ್ದರು. ಜುಲೈ 24ರಂದು ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾವಣೆ ಮಾಡಿತ್ತು. ಈ ವೇಳೆ ಬೈರತಿ ಬಸವರಾಜ ಅವರನ್ನು ಕೂಡ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.